Advertisement

Ayodhya Ram Mandir; ನಿತ್ಯ ಸ್ಮರಣೀಯ ರಾಮಚಂದ್ರ

10:53 PM Jan 21, 2024 | Team Udayavani |

ಅಧ್ಯಾತ್ಮ ದೃಷ್ಟಿಯಿಂದ ಸೀತಾ-ರಾಮ ದಂಪತಿಗೆ, ದೈಹಿಕ ವಿಯೋಗ ಇಲ್ಲವೇ ಇಲ್ಲ. ಪಾಮರ ದೃಷ್ಟಿಯಲ್ಲಿ ಅದು ಕಾಣಿಸಿಕೊಂಡರೂ, ಮಾನಸಿಕ ಸ್ನೇಹದ ವಿಯೋಗ ಆಗಲೇ ಇಲ್ಲ. ಅದಕ್ಕೆಂದೇ ಸೀತಾರಾಮರು ಆದರ್ಶ ಸತಿಪತಿಗಳು. ಸೀತಾರಾಮರ ನಿಜ ದರ್ಶನವನ್ನು ಈ ಮಂತ್ರತುಲ್ಯದ ಪದ್ಯದಲ್ಲಿ ನಿತ್ಯ ಮಾಡುತ್ತಾ ಕೃತಾರ್ಥರಾಗೋಣ.

Advertisement

ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ
ಈ ಶ್ಲೋಕರೂಪದ ಮಂತ್ರದಲ್ಲಿ ಸೀತಾರಾಮರ ದರ್ಶನವನ್ನು ಪಡೆಯಬಹುದು.

ರಾಮ – ಬಾಲಕಾಂಡ

ಜ್ಞಾನಾನಂದಸ್ವರೂಪ, ಮಾತು, ನಡತೆ, ಸೌಂದರ್ಯ, ಶೀಲಗುಣ ಸಂಪತ್ತಿನಿಂದ ಮುದ ನೀಡುವವನಾದ್ದರಿಂದಲೇ ಲೋಕಾಭಿರಾಮ, ಗುಣಾಭಿರಾಮನೆಂದು ಪ್ರಖ್ಯಾತಿ. ನೂರು ಅಪಕಾರಗಳನ್ನು ಅವಗಣಿಸಿ, ಒಂದು ಉಪಕಾರವನ್ನು ಸ್ಮರಿಸುವ ಮಹಾ ಕೃತಜ್ಞನು. ರ + ಅಮ = ರಾಮ – ಆನಂದರೂಪನು, ಪರಿಮಾಣಾತೀತ ಗುಣದಿಂದ ಸಂಪನ್ನನು ಎಂದು ಶಾಂಡಿಲ್ಯ ಶಾಖೆಯು ವ್ಯಾಖ್ಯಾನಿಸಿದೆ. ಬೇರೆ ಬೇರೆ ಆಯಾಮಗಳಲ್ಲಿ ರಾಮ ಶಬ್ದವು ತೆರೆದುಕೊಳ್ಳುತ್ತದೆ. ರಾವಣನು ಸೀತಾಪ್ರತಿಕೃತಿಯನ್ನು ಅಪಹರಿಸಿದಾಗ, ದುರ್ಜನರನ್ನು ಮೋಹಗೊಳಿಸುವ ಉದ್ದೇಶ ರಾಮನಿಗಿತ್ತು. ಸೀತೆಯನ್ನು ವಿವಾಹ ವಾದ ಬಳಿಕ 12 ವರ್ಷಗಳ ಪರ್ಯಂತ ಅಯೋಧ್ಯೆಯಲ್ಲಿ ಲಕ್ಷ್ಮೀಸ್ವ ರೂಪಳಾದ, ಆಕೆಯ ರಮಣಕ್ರೀಡೆಗೆ ಪಾತ್ರನಾಗಿದ್ದನು. ಆದುದರಿಂದ ರಾಮನೆಂದು ಕೀರ್ತಿತ ನಾಗಿದ್ದಾನೆ. ಹೀಗೆ ಬಾಲಕಾಂಡದ ಅರ್ಥ ರಾಮನಾಮದಲ್ಲಿ ಅಡಗಿದೆ.

ರಾಮಭದ್ರ – ಅಯೋಧ್ಯಾಕಾಂಡ
ದಶರಥನು ಜ್ಯೇಷ್ಠಪುತ್ರ ರಾಮನಿಗೆ ಪಟ್ಟಾಭಿಷೇಕದ ಪ್ರಸ್ತಾವವನ್ನು ಮಾಡಿದಾಗ ಎಲ್ಲರೂ ಏಕಕಂಠದಿಂದ ರಾಮನು ನಿನ್ನಿಂದ ಪಟ್ಟಾಭಿಷಿಕ್ತನಾಗಿ ಗಜವಾಹನನಾಗಿ ಶೋಭಾ ಯಾತ್ರೆಯಲ್ಲಿ ಹೋಗುವುದನ್ನು ಶೀಘ್ರವಾಗಿ ನೋಡಲು ಬಯಸುತ್ತೇವೆ. ಆತ ರಾಜನಾದರೆ, ಭಾತೃ ಭಾವದಿಂದ ಚೆನ್ನಾಗಿ ಪಾಲಿಸುತ್ತಾ, ನಿನಗಿಂತಲೂ ಅಧಿಕ ವಾಗಿ ನಮಗೆ ಹಿತವನ್ನು ಮಾಡುತ್ತಾನೆಂದು ಹೇಳಿ ಶುಭ ಹಾರೈಸಿದರು. ರಾಮಗುಣಾ ಭಿರಾಮನೆಂದು ಸಾರಿ, ಅವರೆಲ್ಲರೂ ರಾಮ ನಮಗೆ ಭದ್ರ- ನಿನಗಿಂತಲೂ ಹೆಚ್ಚು ಕಲ್ಯಾಣ(ಶುಭ)ಪ್ರದನೆಂದು ಸಾರಿದರು. ಇದು ಅಯೋಧ್ಯಾಕಾಂಡದ ಅರ್ಥ. ತನ್ನ ಪಟ್ಟಾಭಿಷೇಕಕ್ಕೆ ಮಂಥ ರೆಯಿಂದ ಪ್ರಚೋದಿತಳಾಗಿ ಕೈಕೇಯಿ, ವಿಘ್ನ ಮಾಡಿದರೂ ಆಕೆಯಲ್ಲಿ ಗುಣಶೀಲನಾದ, ಭರತನ ಮಾತೃತ್ವವನ್ನು ಕಂಡು ಗೌರವಿಸಿದನು. ಆಕೆಯನ್ನು ಲಕ್ಷ್ಮಣನು ನಿಂದಿಸಿದಾಗಲೂ ತಡೆ ದನು. ಕೊನೆಗೆ ಆಕೆಗೆ ಮೋಕ್ಷವನ್ನೇ ಪ್ರದಾನ ಮಾಡಿದನು. ಭರತನು ತನ್ನ ಸಿಂಹಾಸನವನ್ನು ಕಸಿದುಕೊಂಡನು ಎಂಬ ಭಾವನೆಗೆ ಒಳಗಾಗದೇ, ಆತನ ಶುದ್ಧ ಸ್ನೇಹಮಯ ಮನಸ್ಸನ್ನು ಗುರುತಿಸಿ ಪ್ರೀತಿಯಿಂದ ಆಲಂಗಿಸಿಕೊಂಡು ಸಮಾಧಾನ ಪಡಿಸಿದನು. ಅಯೋಧ್ಯಾಕಾಂಡದ ಅರ್ಥಗಳನ್ನೆಲ್ಲ ರಾಮಭದ್ರ ಶಬ್ದದಲ್ಲಿದೆ.

ರಾಮಚಂದ್ರ – ಅರಣ್ಯಕಾಂಡ
ದಂಡಕಾರಣ್ಯವನ್ನು ಪ್ರವೇಶಿಸಿ, ಖರ ದೂಷಣಾದಿ ರಾಕ್ಷಸರಿಂದ ಪೀಡಿತರಾಗಿದ್ದ ಋಷಿಗಳಿಗೆ ಅಭಯ ನೀಡಿ ರಾಕ್ಷಸರನ್ನು ಸಂಹರಿಸಿದ. ಚದಿ-ಆಹ್ಲಾದೇ ಎಂಬ ಕ್ರಿಯಾಪದ ಮೂಲ ವಾದ ಶಬ್ದದ ಅರ್ಥ ಇದು. ಇದೇ ಅರಣ್ಯಕಾಂಡದ ಅರ್ಥ.

ಕಾಂಡತ್ರಯ
ವೇಧಸ್‌ =ವಿಶಿಷ್ಟ ಕತೃತ್ವ ಶಕ್ತಿ ಸಂಪನ್ನ. ವಿವಿಧ ಕಾಂಡಗಳಲ್ಲಿ ಈ ಅರ್ಥ ಹೀಗೆ ತೆರೆದುಕೊಳ್ಳುತ್ತದೆ. ರಾಮಚಂದ್ರನು ನಾನಾಕಪಿಗಳಿಂದ ಕಲ್ಲುಬಂಡೆ, ಪರ್ವತ ಶಿಖರಾದಿಗಳನ್ನು ತರಿಸಿಕೊಂಡು, ಪುಷ್ಯ ಮಾಸದ ಶುಕ್ಲಪಕ್ಷದ ದಶಮಿಯಂದು ಸೇತು ನಿರ್ಮಾಣಕಾರ್ಯವನ್ನು ಪ್ರಾರಂಭಿಸಿ, ತ್ರಯೋದಶಿಯಂದು ಸೇತು ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ದನು (ಸ್ಕಂಧಪುರಾಣ). ಶತಯೋಜನ ಉದ್ದದ ಸೇತುನಿರ್ಮಾಣದ ಕಾರ್ಯವನ್ನು ನಾಲ್ಕೇದಿನಗಳಲ್ಲಿ ಪೂರೈಸಿದ ರಾಮನ ಕತೃತ್ವಶಕ್ತಿ (ಯುದ್ಧ ಕಾಂಡ) ಅನುಪಮವೆಂದು ಪುರಾಣ ಸೂಚಿಸಿದೆ. ಇದಲ್ಲದೇ ಆಂಜ ನೇಯನೂ ಕೂಡ ರಾವಣನ ಸಭೆಯಲ್ಲಿ ರಾಮನ ಸಾಮರ್ಥ್ಯದ (ಸುಂದರಕಾಂಡ) ಕುರಿತು ಎಚ್ಚರಿಸುತ್ತಾನೆ.

Advertisement

ರಾಮಚಂದ್ರನು ಆಂಜನೇಯನನ್ನು ದಾಸನ ನ್ನಾಗಿ, ಸುಗ್ರೀವನನ್ನು ಸಖನನ್ನಾಗಿ ಸ್ವೀಕರಿಸಿ ಏಕಬಾಣ ಪ್ರಯೋಗ ದಿಂದಲೇ ಅಸುರ ರೂಪರನ್ನು (ಕಿಷ್ಕಿಂಧಾಕಾಂಡ) ಛೇದಿಸಿದನು. ಉದಾಸೀನನಾದ ಸುಗ್ರೀವನಿಗೆ ಲಕ್ಷ್ಮಣನ ಮೂಲಕ ಮಾತಿನಿಂದಲೇ ಬೆದರಿಸಿ ಕಪಿಗಣಗಳನ್ನು ಸಂಪಾದಿಸಿದನು. ಸುಗ್ರೀವನಿಗೆ ತನ್ನ ಬಲದ ಬಗೆಗೆ ವಿಶ್ವಾಸ ಹುಟ್ಟಿಸಲು, ದುಂದುಭಿ ಕಾಯವನ್ನೂ ದೂರಕ್ಕೆ ಎಸೆದನು.

ರಘುನಾಥ
ರಘುನಾಥ ಶಬ್ದವು ರಘುವಂಶದಲ್ಲಿ ಶ್ರೇಷ್ಠನಾದ ದಶರಥ ರಾಜನಿಂದ ಆಶೀರ್ವಾದ ಮಾಡಿಸಿಕೊಂಡವನು ಎಂಬ ಅರ್ಥ ಸೂಚಿಸುತ್ತದೆ. ರಘುವಂಶದಲ್ಲಿ ಬಂದ ಎಲ್ಲ ರಾಜರನ್ನೂ ರಘುವಂಶ ಕಾವ್ಯದಲ್ಲಿ ರಘು ಎಂಬ ಪದದಿಂದಲೇ ಉಲ್ಲೇಖಿಸಲಾಗಿದೆ. ನಾಥ ಶಬ್ದವು ಆಶೀರ್ವಾದಕರ್ತಾ ಎಂಬ ಅರ್ಥ ನೀಡುತ್ತದೆ. ದಶರಥ ರಾಮನಿಗೆ ಆಶೀರ್ವದಿಸಿದ್ದರೂ ಈ ಆಶೀರ್ವಾದವು ಲೋಕಶಿಕ್ಷಕನಾಗಿ ಅವನು ತೋರಿದ ಪಿತೃಭಕ್ತಿಗೆ ದ್ಯೋತಕವೆನ್ನಬಹುದು. ಕುಲದೀಪಕನಾದ ತನ್ನ ಅವತಾರದಿಂದ, ಪವಿತ್ರ ಕೀರ್ತಿಯಿಂದ ಪಾವನವಾದ ವಂಶದಲ್ಲಿ ಜನ್ಮ ತಾಳಿ, ಎಲ್ಲ ರಘುಕುಲದಲ್ಲಿ ಬಂದ ರಾಜರೂ ರಾಜನಾಗಿ ಮೆರೆಯಲು ರಾಮಚಂದ್ರನ ಅನುಗ್ರಹವೇ ಕಾರಣ ಎಂಬ ಅಭಿಪ್ರಾಯವನ್ನೂ ಈ ಪದವು ಸೂಚಿಸುತ್ತದೆ. ತನ್ನ ಕೀರ್ತಿಯಿಂದ ಪಾವನವಾದ ಕುಲದಲ್ಲಿ ರಾಜನಾಗಿ ಮೆರೆಯಲು ಶ್ರೀರಾಮಚಂದ್ರ ಕಾರಣ ಅದಕ್ಕೆಂದೇ ರಘುನಾಥ.

ನಾಥ – ಯುದ್ಧಕಾಂಡ
ನಾಥ = ಉಪಕ್ಷಯ (ಅಲ್ಪವಿನಾಶ) ಕರ್ತಾ. ವಾಸ್ತವಿಕವಾಗಿ ರಾಮನು ಮಾಡಿದ ರಾವಣ ಸೈನ್ಯದ ಕ್ಷಯ ಅರ್ಥಾತ್‌ ವಿನಾಶ ಅಲ್ಪವಲ್ಲ, ಮಹತ್ತರ. ಆದರೂ ರಾಮನ ಪರಾಕ್ರಮದ ಎದುರು ರಾಕ್ಷಸರ ಸಂಹಾರ ಆತನಿಗೆ ನಗಣ್ಯ. ಅದನ್ನು ಅನಾಯಾಸದಿಂದ ಮಾಡಿದ ರಘುವೀರನನ್ನು ನಾಥ ಶಬ್ದವು ಬಣ್ಣಿಸುತ್ತದೆ (ಯುದ್ಧಕಾಂಡ).

ಸೀತಾಯಾಃ ಪತಿಃ – ಉತ್ತರಕಾಂಡ
ಈ ಶಬ್ದವು ಉತ್ತರಕಾಂಡದ ಅರ್ಥವನ್ನು ಹೇಳಿದೆ. ರಾಮನ ಆಳ್ವಿಕೆಯ ಕಾಲದಲ್ಲಿ, ಭೂಮಿಯ ಎಲ್ಲ ಭಾಗವು ಸಮೃದ್ಧ ಸಸ್ಯ ಸಂಪತ್ತಿನಿಂದ ಶ್ಯಾಮಲವಾಗಿತ್ತು. ಸೀತಾಪತಿ = ಸಸ್ಯಾದಿ ಸಂಪತ್ತಿನ ಒಡೆಯ. ಸಂಸ್ಕೃತದಲ್ಲಿ ಸೀತಾ=ಸಸ್ಯ. ಪರಿಶುದ್ಧಳಾದ ಭೂದೇವಿ, ನಿರ್ಮಲಳಾದ ಸೀತಾದೇವಿ ಎಂಬ ಅರ್ಥವೂ ಇದೆ. ಸಂಸ್ಕೃತದಲ್ಲಿ ಸಿತ ಶಬ್ದವು ಶ್ವೇತ ಎಂಬ ಅರ್ಥವನ್ನು ಕೊಡುತ್ತದೆ. ಸೀತಾ ಎಂಬ ಶಬ್ದವು ಅಧಿಕಶ್ವೇತಳು ಎಂಬ ಅರ್ಥವನ್ನು ನೀಡುತ್ತದೆ. ಅಧಿಕಶ್ವೇತಳು= ಅಧಿಕಶುದ್ಧಳು. ಇವೆರಡು ದೇವಿಯರಿಗೆ ಪತಿಯಾಗಿ ರಾಮ ಸೀತಾಪತಿ ಎನಿಸಿದ್ದಾನೆ.
ಲೋಕಾಪವಾದ ಭಯದಿಂದ, ರಾಮನು ತನ್ನನ್ನು ವಾಲ್ಮೀಕಿ ಆಶ್ರಮದಲ್ಲಿ ಬಿಟ್ಟರೂ, ರಾಮನ ಬಗೆಗೆ ವೈಮನಸ್ಯವನ್ನು ಹೊಂದದೇ, ಪ್ರೇಮಜಲದಿಂದ ಪರಿಶುದ್ಧ ಮನಸ್ಕಳಾಗಿ ಉಳಿದು, ಪತಿವ್ರತೆಯರ ಶಿಖರ
ಸ್ಥಾನದಲ್ಲಿ ಮೆರೆದಳು. ರಾಮನೂ ಕೂಡ ಕೊನೆಯ ತನಕ ಪ್ರಿಯತಮೆ ಸೀತೆಯನ್ನು ಸ್ನೇಹಪಾಶ ದಿಂದ ಎದೆಯಲ್ಲಿ ದೃಢವಾಗಿ ಬಂಧಿಸಿಕೊಂಡಿದ್ದನು. ಸ್ನೇಹಪಾಶ ದಿಂದ ದೃಢವಾಗಿ ಬಂಧಿಸಲ್ಪಟ್ಟವಳಾಗಿ, ಜಾನಕಿಗೆ ಸೀತಾ ಎಂಬ ಹೆಸರು ಅನ್ವರ್ಥ. ಅಂತಹ ಸೀತೆಗೆ ಪತಿಯಾಗಿ, ರಾಮಚಂದ್ರನು ಮೆರೆದನು ಎನ್ನುವ ಉತ್ತರಕಾಂಡದ ಅರ್ಥ ವನ್ನು ಸೀತಾಪತಿ ಶಬ್ದವು ಬಣ್ಣಿಸಿದೆ. ಸೀತಾರಾಮರ ಅನ್ಯೋನ್ಯತೆ ತೋರಲು ಸೀತಾ ದೇವಿಯು, ರಾಮನು ಪರಂಧಾಮಕ್ಕೆ ಹೋಗುವ ಸಂದರ್ಭ ಶ್ರೀ-ಹ್ರೀ ರೂಪವನ್ನು ತಾಳಿ ಚಾಮರಸೇವೆ ಮಾಡಿದಳೆಂದು ಹಯಗ್ರೀವಕೃತ ಮೂಲ ರಾಮಾಯಣವು ಸಾರಿದೆ.

-ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠ, ಬಾರಕೂರು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next