ಅಯೋಧ್ಯೆ: ಬದುಕು ಧನ್ಯ..!ಹೀಗೆ ಅನ್ನಿಸಿದ್ದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಾಗ, ಸಾಕ್ಷಿಯಾದಾಗ, ಆ ಪ್ರಕ್ರಿಯೆಯ ಭಾಗವಾದಾಗ. ನನ್ನನ್ನು ಮೂಕವಿಸ್ಮಿತಗೊಳಿಸಿತು ಸಹ. ಮನದೊಳಗೆ ಧನ್ಯತಾ ಭಾವ ಮೂಡಿತು.
ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಆಗಬೇಕೆಂಬುದು ಒಂದೆರಡು ವರ್ಷಗಳದ್ದಲ್ಲ; ಐದಾರು ಶತಮಾನದ ಕನಸು. ಭಾರತೀಯರೆಲ್ಲರ, ಧಾರ್ಮಿಕ ಶ್ರದ್ಧಾಳುಗಳ, ಆಸ್ತಿಕರ ಹಾರೈಕೆಯು ಇಂದು ಈಡೇರಿತು ಎನ್ನಬಹುದು. ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಮಾಡುವ ರೂಪದಲ್ಲಿ ಅದು ಒದಗಿ ಬಂದಿತು. ಆ ಕ್ಷಣಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನಗೆ ಲಭಿಸಿತು. ಶ್ರೀರಾಮ ವ್ಯಕ್ತಿಯಲ್ಲ; ಧರ್ಮವೇ ಮೇಳೈಸಿ ಬಂದಂತೆ ಭಾಸವಾಯಿತು. ಇಂಥದೊಂದು ಘಳಿಗೆ ನನ್ನ ಬದುಕಿನಲ್ಲಿ ಕೂಡಿ ಬಂದದ್ದೇ ಸೋಜಿಗ.
ಸಾಕ್ಷಾತ್ ಶ್ರೀರಾಮಚಂದ್ರ ದೇವರೇ ಮೂರ್ತಿ ರೂಪದಲ್ಲಿ ನಿಂತಿದ್ದಾನೆ ಎಂಬಷ್ಟು ಆಧ್ಯಾತ್ಮಿಕ ಶಕ್ತಿ-ಪ್ರಭೆ ಪ್ರತಿಮೆಯಿಂದ ಹೊರಬಂದ ಅನುಭೂತಿ. ಭಗವಂತನನ್ನು ಒಳಗೊಳ್ಳುತ್ತಿದ್ದೇವೆ ಎಂಬ ಭಾಸ. ನಾವು ಪೂಜಿಸುವುದು ಪ್ರತಿಮೆಯನ್ನಲ್ಲ; ಪ್ರತಿಮೆಯೊಳಗಿನ ಭಗವಂತನನ್ನು. ಭಗವಂತ ಎಲ್ಲೆಡೆ ಇದ್ದಾನೆ. ಆದರೆ ಎಲ್ಲೆಡೆಯೂ ಇರುವ ಭಗವಂತನನ್ನು ಪೂಜಿಸುವ, ಕಾಣುವ ಶಕ್ತಿ ನಮಗಿಲ್ಲ. ಹೀಗಾಗಿಯೇ ಮಂದಿರ ನಿರ್ಮಿಸಿ ಅದರೊಳಗೆ ಅವನ ಮೂರ್ತಿಯನ್ನು ವೇದೋಕ್ತ ಮಂತ್ರಗಳ ಮೂಲಕ ನ್ಯಾಸ ಮಾಡಬೇಕಾಗುತ್ತದೆ. ಹಾಗೆ ಮಾಡಬೇಕಾದರೆ ನಾವು ಮೊದಲು ಪವಿತ್ರರಾಗಬೇಕು. ನಮ್ಮೊಳಗೆ ನಾವು ಆ ಮಂತ್ರಗಳನ್ನು ನ್ಯಾಸ ಮಾಡಿಕೊಳ್ಳಬೇಕು.
ಹೀಗಾಗಿ ಜ.21ರಂದು ಏಕಾದಶಿ ನಿರ್ಜಲ ಉಪವಾಸ ಮಾಡಿ, ಜ.22ರ ದ್ವಾದಶಿಯಂದು ಉಪವಾಸ ಮುಂದುವರಿಸಿ, ಬೆಳಗ್ಗಿನಿಂದ ನಮ್ಮ ಶರೀರದೊಳಗೆ ಮಂತ್ರಗಳ ಆವಾಹನೆ ಮಾಡಬೇಕಿತ್ತು. ಪ್ರತಿಮೆಯೊಳಗೆ ಏನೆಲ್ಲ ಮಂತ್ರಶಕ್ತಿಯನ್ನು ತುಂಬುತ್ತೇವೆಯೋ, ಅವೇ ಮಂತ್ರಗಳನ್ನು ನಮ್ಮೊಳಗೆ ನ್ಯಾಸ ಮಾಡಿಕೊಂಡು, ಆ ಬಳಿಕ ಅದೇ ಮಂತ್ರಗಳಿಂದ ಪ್ರತಿಮೆಗೆ ನ್ಯಾಸ ಮಾಡಬೇಕು. ಆ ಕಾರ್ಯವನ್ನು ವಿಧಿವತ್ತಾಗಿ, ಶ್ರದ್ಧಾಪೂರ್ವಕವಾಗಿ ಪೂರೈಸಿದ್ದೇವೆ. ಶ್ರೀರಾಮನದ್ದು ತ್ರೇತಾಯುಗ, ಇದು ಕಲಿಯುಗ. ಈ ಮಧ್ಯೆ ಒಂದು ಯುಗವೇ ಸಂದು ಹೋಗಿದೆ. ಕಲಿಯುಗದಲ್ಲೂ ಸಹಸ್ರಾರು ವರ್ಷಗಳು ಸಂದಿವೆ. ಶ್ರೀರಾಮನ ಬಗ್ಗೆ ದೇಶವ್ಯಾಪಿ ಇರುವ ಆಕರ್ಷಣೆ, ಭಕ್ತಿ, ಗೌರವ, ರಾಮ ಜನ್ಮಭೂಮಿಯಲ್ಲಿ ಮಂದಿರ ಆಗಲೇಬೇಕು ಎನ್ನುವ ತುಡಿತ ಕೆಲವರದ್ದಲ್ಲ; ಸಕಲರದ್ದು. ಒಂದು ಮಾತಿದೆ: “ರಾಮ ರಾಜ್ಯದಲ್ಲಿ ಎಲ್ಲರಿಗೂ ಸತ್ಕಾರ, ಇಬ್ಬರಿಗೆ ಮಾತ್ರ ಧಿಕ್ಕಾರ. ಯಾರು ತಮ್ಮ ಜೀವನದಲ್ಲಿ ರಾಮನನ್ನು ಕಾಣಲಿಲ್ಲವೋ, ಯಾರನ್ನು ರಾಮ ನೋಡಲಿಲ್ಲವೋ ಅವರಿಗೆ ಧಿಕ್ಕಾರ. ಅವರಿಗೆ ಅವರ ಒಳ ಮನಸ್ಸೇ ಧಿಕ್ಕಾರ ಹಾಕುತ್ತದೆ’.
ರಾಮನ ಕುರಿತು ಪ್ರಜೆಗಳಲ್ಲಿರುವ ಭಕ್ತಿ, ಆದರ, ಗೌರವ ಎಷ್ಟು ಎಂಬುದು ಊಹಿಸುವುದು ಕಷ್ಟ. ಆವತ್ತಿನಿಂದ ಇವತ್ತಿನವರೆಗೂ ಹಸುರಾಗಿಯೇ ಇದೆ; ಇರುತ್ತದೆ. 10ರಿಂದ 20 ತಲೆಮಾರು ಸಂದರೂ ರಾಮ ದೇವರ ಬಗ್ಗೆ ಇರುವ ಭಕ್ತಿ, ಶ್ರದ್ಧೆ, ಗೌರವ, ಅಭಿಮಾನ ಒಂದಿನಿತೂ ಕಡಿಮೆಯಾಗದು. ಯಾಕೆಂದರೆ ಆ ಅಭಿಮಾನ ಹಾಗೆಯೇ ಸತತವಾಗಿ ಹರಿದು ಬಂದಿದೆಯೇ ಹೊರತು, ನಾವಾಗಿ ಆವಾಹನೆ ಮಾಡಿದ್ದಲ್ಲ. ಅದು ನಮ್ಮ ಹಿರಿಯರಿಂದ ಪ್ರವಾಹ ರೂಪವಾಗಿ ಬಂದಿರುವುದು. ಯಕ್ಷಗಾನ, ನಾಟಕ, ಹರಿಕಥೆ, ಸಂಗೀತ, ಭರತನಾಟ್ಯ, ಕಥೆ, ಸಾಹಿತ್ಯ, ಕಾವ್ಯ ಹೀಗೆ ಎಲ್ಲ ಬಗೆಯಿಂದಲೂ ರಾಮನ ಆದರ್ಶ, ವ್ಯಕ್ತಿತ್ವ, ಗುಣ ಹರಿದು ಬಂದಿದೆ.
ಗುರುಗಳಾದ ಶ್ರೀವಿಶ್ವೇಶತೀರ್ಥರು ಆಂದೋಲನದಲ್ಲಿ ಪ್ರಾರಂಭ ದಿಂದಲೂ ತೊಡಗಿಸಿಕೊಂಡಿದ್ದರು. ಮಾತ್ರವಲ್ಲ, ಆಂದೋಲನ ಹಿಮ್ಮುಖವಾಗುತ್ತದೆ ಎಂದೆನಿಸಿದಾ ಗಲೆಲ್ಲ ಚೈತನ್ಯ ತುಂಬಿ ಮುನ್ನಡೆಸಿದವರು. ರಾಮಲಲ್ಲಾನನ್ನು ತಾತ್ಕಾಲಿಕ ಮಂದಿರದಲ್ಲಿ ಪ್ರತಿಷ್ಠೆ ಮಾಡಿದ್ದು ಅವರೇ. ಹೀಗೆ ರಾಮನಿಗೆ ಸಲ್ಲಿಸಿದ ಸೇವೆಯು ಗುರುಗಳ ಮುಖೇನ ಅನುಗ್ರಹ ವಾಗಿದೆ. ಒಂದಡೆ ರಾಮದೇವರ ಅನುಗ್ರಹ, ಮತ್ತೂಂದೆಡೆ ಗುರುಗಳ ಅನುಗ್ರಹ ಎರಡೂ ಮಿಳಿತವಾಗಿದ್ದು ನನ್ನ ಭಾಗ್ಯ. ಶ್ರೀರಾಮ ವ್ಯಕ್ತಿಯಲ್ಲ, ಧರ್ಮವೇ ಮೇಳೈಸಿ ಬಂದಿರುವುದು ಎಂಬ ಮಾತನ್ನು ಮತ್ತೆ ಹೇಳುತ್ತೇನೆ. ಎಂದಿಗೂ ಅವನು ಬರೀ ವ್ಯಕ್ತಿ ಅಲ್ಲವೇ ಅಲ್ಲ. ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. ಹಾಗೆಯೇ ರಾಮನಿಗೆ ನಾವೆಲ್ಲ ಹತ್ತಿರವಾಗಬೇಕು. ಅದಕ್ಕಾಗಿ ನಾವೆಲ್ಲ ರಾಮನಾಗಬೇಕು ಮತ್ತು ನಮ್ಮೊಳಗೆ ಮಂದಿರ ನಿರ್ಮಿಸಿಕೊಳ್ಳಬೇಕು. ಅವನನ್ನು ಪ್ರತಿಷ್ಠಾಪಿಸಿ ಕೊಳ್ಳಬೇಕು. ಅದಕ್ಕೆ ಅಣಿಯಾಗುವ ಹೊತ್ತಿದು.
ಶ್ರೀಗಳ ಒಳಗಿಂದ ಹೊಮ್ಮಿದ ಭಾವಗಳಿವು
-ಮಂದಿರ ಉದ್ಘಾಟನೆಗೆ ಸಾಕ್ಷಿಯಾದಾಗ, ಅದರ ಭಾಗವಾದಾಗ ಮೂಕವಿಸ್ಮಿತನಾದೆ.
-ಶ್ರೀರಾಮ ವ್ಯಕ್ತಿಯಲ್ಲ, ಧರ್ಮವೇ ಮೇಳೈಸಿ ಬಂದಂತೆ ಭಾಸವಾಯಿತು.
-ನಾವೆಲ್ಲರೂ ರಾಮನೇ ಆಗಬೇಕು.