ಲಕ್ನೋ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇನ್ನು ಎರಡು ವರ್ಷಗಳಲ್ಲಿ ನೂತನ ರಾಮಮಂದಿರ ಮಾದರಿಯಲ್ಲಿಯೇ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ ಎಂದು ವರದಿ ತಿಳಿಸಿದೆ.
ಅಯೋಧ್ಯೆಯಲ್ಲಿ ತಲೆಎತ್ತಲಿರುವ ರಾಮಮಂದಿರ ಮಾದರಿಯ ರೈಲ್ವೆ ನಿಲ್ದಾಣಕ್ಕಾಗಿ ಬಜೆಟ್ ನಲ್ಲಿ ಈಗಾಗಲೇ ಮೀಸಲಿಟ್ಟಿದ್ದ 80 ಕೋಟಿ ರೂಪಾಯಿ ಹಣವನ್ನು ಈವರ್ಷ 104 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ವರದಿ ವಿವರಿಸಿದೆ.
ಈ ಕುರಿತು ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಕೋಟ್ಯಂತರ ಭಕ್ತರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣವನ್ನೂ ಪುನರ್ ಅಭಿವೃದ್ದಿಪಡಿಸಲಿದ್ದು, ಅದು ರಾಮಮಂದಿರ ಮಾದರಿಯಲ್ಲಿಯೇ ಇರಲಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣ ಅಭಿವೃದ್ಧಿಯನ್ನು ಎರಡು ಹಂತದಲ್ಲಿ ಪೂರ್ಣಗೊಳಿಸಲಾಗುವುದು. ಮೊದಲ ಹಂತದಲ್ಲಿ ಫ್ಲ್ಯಾಟ್ ಫಾರಂ ಪ್ರದೇಶದ ಅಭಿವೃದ್ಧಿ ಹಾಗೂ ಎರಡನೇ ಹಂತದಲ್ಲಿ ನೂತನ ನಿಲ್ದಾಣದಲ್ಲಿ ಹೆಚ್ಚು ಶೌಚಾಲಯಗಳು, ಡಾರ್ಮಿಟೋರಿಸ್ ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳ ಕಾರ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ.
ನೂತನ ರಾಮಮಂದಿರ ಮಾದರಿಯ ರೈಲ್ವೆ ನಿಲ್ದಾಣದ ಎರಡನೇ ಹಂತದ ಕಾಮಗಾರಿ 2023-2024ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತ 2021ರ ಜೂನ್ ನೊಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವಾಲಯ ವಿವರಿಸಿದೆ.