ತೆಕ್ಕಟ್ಟೆ: ನಾವೆಲ್ಲರೂ ಶ್ರೀರಾಮ ದೇವರು ನಡೆದು ತೋರಿಸಿದ ಮಾರ್ಗದಲ್ಲಿ ಸಾಗುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿದೆ. ರಾಮಾಯಣ ದಲ್ಲಿ ನಮ್ಮ ಬದುಕಿಗೆ ಬೇಕಾದ ಮೂಲ ಸ್ತೋತ್ರ ಅಡಗಿದೆ.ಅಯೋಧ್ಯೆಯಲ್ಲಿ ಕೇವಲ ವಿಗ್ರಹ ಪ್ರತಿಷ್ಠೆಯಲ್ಲ; ಸನಾತನ ಸಂಸ್ಕೃತಿಯ ಆತ್ಮಾಭಿಮಾನದ ಪ್ರತಿಷ್ಠೆಯಾಗಿದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಬುಧವಾರ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಆವರಣದಲ್ಲಿರುವ ನೂತನ ರಾಮ ಮಂದಿರದಲ್ಲಿ ಅಯೋಧ್ಯೆಯ ಶ್ರೀ ರಾಮಲಲ್ಲಾನ ಬಾಲಾಲಯದಲ್ಲಿ ಇಟ್ಟು ಪೂಜಿಸಿ ತಂದಿರುವ ಶ್ರೀರಾಮ ಪಾದುಕೆ ಮತ್ತು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮನ ಜತೆಗಿರುವ ಮೂರ್ತಿಯ ಪ್ರತಿಷ್ಠಾಪನೆ, ಕಲಶಾಭಿಷೇಕ, ಶ್ರೀ ನಾಗದೇವರ ಪ್ರತಿಷ್ಠಾ ಕಲಶಾಭಿಷೇಕದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮ್ಮ ಸನಾತನ ಸಂಸ್ಕೃತಿಯಲ್ಲಿ ಪರಿವರ್ತನೆಯ ಕಾಲ ಬರುತ್ತಿದೆ. ಮುಂದೆ ಹಿಂದೂಗಳಲ್ಲಿಯೂ ಕೂಡ ಸ್ವಾಭಿಮಾನ ಜಾಗೃತವಾಗಲಿ. ಕಳೆದು ಹೋದ ಸುಮಾರು 3 ಸಾವಿರ ದೇವಾಲಯಗಳು ಮತ್ತೆ ಹಿಂದೂಗಳ ಪಾಲಿಗೆ ಲಭಿಸಲಿ. ಇದಕ್ಕಾಗಿ ನಾವೆಲ್ಲರೂ ಹಿಂದೂಗಳು ಎನ್ನುವ ಭಾವನೆ ಜಾಗೃತವಾಬೇಕು. ರಾಷ್ಟ್ರ ರಕ್ಷಣೆಯ ವಿಚಾರ ಬಂದಾಗ ನಾವೆಲ್ಲಾ ಭಾರತೀಯರು ಎನ್ನುವ ಭಾವ ನಮ್ಮಲ್ಲಿರಬೇಕು ಎಂದರು.
ವಿದ್ವಾನ್ ಪಂಜ ಭಾಸ್ಕರ ಭಟ್, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ಕಾಮತ್ ಕೋಟೇಶ್ವರ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ತಂತ್ರಿಗಳಾದ ವೇ|ಮೂ| ಲಕ್ಷ್ಮೀಕಾಂತ ಶರ್ಮ, ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾ ರ್ಯ, ರಥಶಿಲ್ಪಿ ಕೆ. ರಾಜಗೋಪಾಲ ಆಚಾರ್ಯ, ಪುರೋಹಿತ್ ರೋಹಿತಾಕ್ಷ ಆಚಾರ್ಯ ಉಪಸ್ಥಿತರಿದ್ದರು.
ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ತಂತ್ರಿಗಳಾದ ವೇ|ಮೂ| ಲಕ್ಷ್ಮೀಕಾಂತ ಶರ್ಮ ಸ್ವಾಗತಿಸಿ, ರಥಶಿಲ್ಪಿ ಕೆ. ರಾಜಗೋಪಾಲ ಆಚಾರ್ಯ ವಂದಿಸಿದರು.
ರಾಮ ಮಂದಿರದಲ್ಲಿ ವಿಶ್ವಕರ್ಮರ ಪಾತ್ರ
ಅಯೋಧ್ಯೆ ರಾಮಮಂದಿರದ ಸಂಪೂರ್ಣ ದೇವಶಿಲ್ಪ ವಿನ್ಯಾಸಗೊಳಿಸಿರುವ ಸ್ತಪತಿ ಚಂದ್ರಕಾಂತ್ ಸೋಮ್‌ಪುರ ಹಾಗೂ ರಾಮ ದೇವರ ಮೂರ್ತಿಯನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ವಿಶ್ವಬ್ರಾಹ್ಮಣರು. ವಿಶ್ವಕರ್ಮ ಸಮಾಜವು ಗತಕಾಲದಲ್ಲಿ ಮಾತ್ರವಲ್ಲ ಈ ಕಾಲದಲ್ಲಿಯೂ ದೇವಸ್ಥಾನ ನಿರ್ಮಾಣದಲ್ಲಿ ತಮ್ಮದೇ ವೈಶಿಷ್ಟé ಹೊಂದಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ. ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಂದ ಅಯೋಧ್ಯೆಯ ರಾಮ ದೇವರಿಗೆ ಬ್ರಹ್ಮ ರಥ ನಿರ್ಮಾಣ ಮಾಡುವ ಅವಕಾಶ ಒದಗಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ಕಾಳಹಸ್ತೇಂದ್ರ ಶ್ರೀಗಳು ಹರ್ಷ ವ್ಯಕ್ತಪಡಿಸಿದರು.