Advertisement
ಮೂರ್ತಿ ಕೆತ್ತಲು ಬಳಸಿದ ಶಿಲೆಯ ಆಯ್ಕೆ ಹೇಗೆ ನಡೆಯಿತು?ದೇಶದ ನಾನಾ ಭಾಗಗಳಿಂದ ಶಿಲೆ ಗಳನ್ನು ಅಯೋಧ್ಯೆಗೆ ತರಿಸಲಾಗಿತ್ತು. ನೇಪಾಲದ ಗಲೆವರ ಗ್ರಾಮದ ಸಾಲಿಗ್ರಾಮ ಶಿಲೆ ಇತ್ತು. ಪ್ರಕೃತಿಯಿಂದ ಉಷ್ಣದಲ್ಲಿ ರೂಪುಗೊಂಡ ಶಿಲೆ ಇತ್ತು. ಗ್ರಾನೈಟ್ ಇತ್ತು. ಹೊಯ್ಗೆಯಿಂದ ನಿರ್ಮಾಣವಾದ ಶಿಲೆ ಇತ್ತು. ನಾನು ನದಿಯ ನೀರಿನ ಸಂಪರ್ಕದಲ್ಲಿ ತಾನೇ ತಾನಾಗಿ ಸೃಷ್ಟಿಯಾದ ಪುರಾತನ ಕೃಷ್ಣಶಿಲೆಯನ್ನು ಆಯ್ದು ಕೊಂಡೆ. ಅದನ್ನು ಮೈಸೂರಿನ ಹೆಗ್ಗಡೆ ದೇವನಕೋಟೆಯಿಂದ ತರಲಾಗಿತ್ತು. ಬಾಳಿಕೆಯ ದೃಷ್ಟಿಯಿಂದ ಹೆಚ್ಚು ಕಾಲ ಬಾಳುವ, ಹೆಚ್ಚು ಸಾಂದ್ರತೆಯುಳ್ಳ, ರೂಪ ಸ್ಪಷ್ಟವಾಗಿ ಮೂಡುವ ಆಕಾಶ ಬಣ್ಣದ ಕೃಷ್ಣಶಿಲೆ ಅದಾಗಿತ್ತು. ಉಳಿದ ಶಿಲೆಗಳಿಗೆ 75 ಸಾಂದ್ರತೆ ಇದ್ದರೆ ಇದರಲ್ಲಿ 90-95 ಸಾಂದ್ರತೆ ಇದೆ. ಕಾಲಕ್ರಮೇಣ ಈ ಶಿಲೆಯ ಶಿಲ್ಪ ಗಟ್ಟಿಯಾಗುತ್ತ ಹೋಗುವುದರಿಂದ ನನ್ನ ಆಯ್ಕೆ ಇದೇ ಆಗಿತ್ತು. ಅಮೃತಶಿಲೆ ಸಹಿತ ಎಲ್ಲ ಶಿಲೆಗಳ ಪ್ರಕಾರಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೂ ನನಗೆ ಹೆಗ್ಗಡೆದೇವನ ಕೋಟೆಯ ಕೃಷ್ಣ ಶಿಲೆಯಲ್ಲಿ ಬಾಲ ಶ್ರೀರಾಮ ಕಂಡ.
ನಕ್ಷೆ ಸಿದ್ಧಪಡಿಸಿಕೊಂಡು ತ್ರೇತಾಯುಗದ ರಾಮನ ಕಾಲದ ಶಿಲ್ಪಕಲಾ ಪರಂಪರೆಯನ್ನು ನೆನೆದು ಆ ಕಾಲದ ಶ್ರೀರಾಮನನ್ನು ಕೆತ್ತಿದ ಶಿಲ್ಪಿಗಳನ್ನು ಹಾಗೂ ಅವರ ಶೈಲಿಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ರಾಮನ ಏಳನೇ ಅವತಾರವನ್ನು ಮೂರ್ತರೂಪಕ್ಕಿಳಿಸಲು ಏಳು ತಿಂಗಳು ಬೇಕಾಯಿತು. ಏಳು ಜನ ಸಹಾಯಕರೊಂದಿಗೆ ಏಳು ಅಡಿಯ ಶ್ರೀರಾಮನನ್ನು ಕೆತ್ತಿದ್ದೇನೆ. ನನ್ನ ಶಿಷ್ಯ ಹಾಗೂ ಹಲವು ಶಿಷ್ಯರಿಗೆ ಗುರುವಾದ ವಿಪಿನ್‌ಸಿಂಗ್ ರಾಯ್ ಈಗ ಕರ್ನಾಟಕದವರೇ ಆಗಿದ್ದಾರೆ. ಮನೋಹರ ಬಡಿಗೇರ, ಸಂದೀಪ ನಾಯಕ ಇಡಗುಂಜಿ, ಮೌನೇಶ ಆಚಾರ್, ಚಂದ್ರ ನಾಯ್ಕ, ಮಂಜು, ಪ್ರಕಾಶ ಹಮ್ಮಣ್ಣನವರ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. 9 ಇಂಚುಗಳ ಕಮಲ ಪೀಠ, ಹಣೆಯ ವರೆಗೆ 51 ಇಂಚು, ಕಿರೀಟ ಸಹಿತ 54 ಇಂಚು ಹೀಗೆ ಒಟ್ಟು ಏಳು ಅಡಿ ಅಖಂಡಮೂರ್ತಿ ರಚಿಸಿದ್ದೇನೆ. ಭಾರತದ ಸನಾತನ ಶಿಲ್ಪಕಲಾ ಪರಂಪರೆಯ ವೈವಿಧ್ಯವನ್ನು ಏಕತ್ರವಾಗಿ ಜೋಡಿಸಿ ದೇಶಕ್ಕೆ ಗೌರವ ತರುವ ರೀತಿಯಲ್ಲಿ, ಶುದ್ಧ ದೇಶೀಯ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಶಿಲ್ಪ ರಚಿಸಿದ್ದೇನೆ. ನಿಮ್ಮ ಮುಂದಾಳತ್ವದಲ್ಲಿ ಕೆತ್ತನೆ ಮಾಡಿದ ಬಾಲರಾಮನ ಮೂರ್ತಿಯ ವಿಶೇಷತೆ ಏನು?
ಭಕ್ತಿ ಬೇರೆ, ಅರ್ಚನೆ ಬೇರೆ. ದೇವರ ಭಕ್ತ ಪರಂಪರೆಯ ದೇವಾಲಯಗಳು, ಮೂರ್ತಿಗಳು ವಿದೇಶಿ ಶಿಲ್ಪದಿಂದ ಪ್ರಭಾವಿತವಾದವು. ನಾನು ಅರ್ಚನೆಯ ಪರಂಪರೆಗೆ ಸೂಕ್ತವಾದ ಪುರಾತನ ಶೈಲಿಯಲ್ಲಿ ಮೂರ್ತಿ ರಚಿಸಿದ್ದೇನೆ. ಬ್ರಿಟಿಷ್ ಶಿಲ್ಪಶಾಸ್ತ್ರ ಪ್ರಭಾವ ಬೀರುವ ಮುನ್ನ ಎರಡು ಸಾವಿರ ವರ್ಷಗಳ ಭಾರತೀಯ ಶಿಲ್ಪಶಾಸ್ತ್ರ ಪರಂಪರೆಯ ವೈವಿಧ್ಯಗಳ ಸಾರ ಸಂಗ್ರಹಿಸಿ, ಸನಾತನ ಹಿಂದೂ ಧರ್ಮ ಪರಂಪರೆಯನ್ನು ಪ್ರತಿನಿಧಿ ಸುವಂತೆ ಬಾಲ ಶ್ರೀರಾಮನ ಮೂರ್ತಿಯನ್ನು ರಚಿಸಿ ಆತ್ಮಸಂತೋಷ ಅನುಭವಿಸಿದ್ದೇನೆ, ಅನುಭವಿಸುತ್ತಿದ್ದೇನೆ.
Related Articles
ಅಯೋಧ್ಯೆಯಲ್ಲಿ ಶ್ರೀರಾಮನನ್ನು ರಚಿಸುವಾಗ ಭಕ್ತಿಯ ವಾತಾವರಣವಿತ್ತು. ಕಳೆದ ವರ್ಷ ಮೇ 23ರಂದು ಪುನರ್ವಸು ನಕ್ಷತ್ರದಲ್ಲಿ ಕಂಕಣ ಕಟ್ಟಿ ಶಿಲೆಯ ಪೂಜೆಯೊಂದಿಗೆ ಕೆತ್ತನೆ ಆರಂ ಭಿಸಿದೆ. ನಿತ್ಯ ನಂದಾದೀಪ ಉರಿಯುತ್ತಿತ್ತು. ರಾಮ ರೂಪಿತವಾಗಲು ಆರಂಭಿಸಿದ ಕ್ಷಣದಿಂದ ನಿತ್ಯ ಪೂಜೆ ನಡೆಯುತ್ತಿತ್ತು. ವೇದಘೋಷಗಳು, ಮಂತ್ರಪಠಣಗಳು ನಡೆಯುತ್ತಿದ್ದವು. ರಾಮನ ಜನನ ಎಷ್ಟು ಪವಿತ್ರವೋ ಅಷ್ಟೇ ಪವಿತ್ರವಾದ ಭಕ್ತಿ ತುಂಬಿದ ವಾತಾವರಣದಲ್ಲಿ ನಾವು ರಾಮನನ್ನು ಸೃಷ್ಟಿಸಲು ತೊಡಗಿದೆವು. ಅದು ಕೇವಲ ಶಿಲ್ಪ ರಚನೆ ಅಲ್ಲ, ಶ್ರೀರಾಮನ ಅವತಾರದ ಸಿದ್ಧತೆ ಎಂದು ಭಾವಿಸಿದ್ದೆವು.
Advertisement
ನೀವು ರಚಿಸಿದ ಬಾಲರಾಮನ ವಿಗ್ರಹ ಅಂತಿಮವಾಗಿ ಆಯ್ಕೆಯಾಗಿದೆಯಾ? ಆಗದಿದ್ದರೆ ಅದನ್ನು ಏನು ಮಾಡುತ್ತಾರೆ?ಎಲ್ಲ ಸಿದ್ಧತೆಗಳನ್ನು ಶಾಸ್ತ್ರದಂತೆ ಆರಂಭಿಸಿ ಮೂರ್ತಿಗಳನ್ನು ರಚಿಸಿದ ಕಾರಣ 3 ಮೂರ್ತಿಗಳು ಪೂಜಾರ್ಹ ಸ್ಥಾನ ದಲ್ಲಿಯೇ ಇರುತ್ತವೆ. ಒಂದು ಮೂರ್ತಿ ಗರ್ಭಗುಡಿಯಲ್ಲಿ ಇರ ಬಹುದು. ಆಯ್ಕೆಯ ಸಮಿತಿಯ ಅಧ್ಯಯನ, ಆಸಕ್ತಿ, ಭಕ್ತಿ ಇವುಗಳನ್ನು ಆಧರಿಸಿ ಒಬ್ಬ ಶ್ರೀರಾಮ ಗರ್ಭಗುಡಿಯಲ್ಲಿ ಪೂಜೆ ಗೊಳ್ಳುತ್ತಾನೆ. ಆದ್ದರಿಂದ ಯಾರದ್ದೇ ಆಯ್ಕೆಯಾದರೂ ಸಂತೋಷ. ನಿಮ್ಮ ಶಿಲ್ಪ ಶೈಲಿಯ ವಿಶೇಷತೆ ಏನು? ರಾಮನ ವಿಗ್ರಹ ಯಾವ ಸ್ವರೂಪದಲ್ಲಿದೆ?
ಯುರೋಪಿಯನ್ ರಿಯಲಿಸ್ಟಿಕ್ ಶಿಲ್ಪ ಶೈಲಿ ಬ್ರಿಟಿಷರ ಆಗಮನವಾದ ಅನಂತರ ಭಾರತಕ್ಕೆ ಬಂತು. ಭಾರತದಲ್ಲಿ ಆ ಕಾಲದಲ್ಲೇ ಸಾಕಷ್ಟು ಶಿಲ್ಪಿಗಳು ಇದ್ದ ಕಾರಣ ಅವರಿಂದ ಭಾರತೀಯ ಮತ್ತು ಯುರೋಪಿಯನ್ ಶೈಲಿಯ ಮನುಷ್ಯ ಸಹಜ, ನರನಾಡಿಗಳನ್ನೊಳಗೊಂಡ, ಮನುಷ್ಯನಂತೆ ಕಣ್ಣು ಕಿವಿ ಗಳುಳ್ಳ ಶೈಲಿಯ ದೇವತಾ ಮೂರ್ತಿಗಳು ಬಂದವು. ನಾನು ಇದರ ಹೊರತಾಗಿ ಭಾರತೀಯ ಶಿಲ್ಪಶಾಸ್ತ್ರದಲ್ಲಿ ಹೇಳಿದ ದೇವರ ಅಂಗಾಂಗ ಲಕ್ಷಣ, ಪ್ರಭಾವಳಿ, ಶಸ್ತ್ರ, ಉಪಕರಣಗಳನ್ನು ಪ್ರತಿನಿಧಿ ಸುವಂತೆ ಅಖಂಡ ಏಕಶಿಲೆಯಲ್ಲಿ ಮೂರ್ತಿ ರಚಿಸಿದೆ. ಬಿಲ್ಲುಬಾಣವಾಗಲಿ, ಕಿರೀಟವಾಗಲಿ ಪ್ರತ್ಯೇಕವಾಗಿ ಕೂರಿಸುವ ಅಗತ್ಯ ಇಲ್ಲದಂತೆ ಕೆತ್ತಿದ್ದೇನೆ. ಭಾರತೀಯ ಮೂರ್ತಿಶಾಸ್ತ್ರದಲ್ಲಿ ಮನುಷ್ಯನನ್ನು ಹೋಲದ ದೇವಮೂರ್ತಿಗಳನ್ನು ದೇವ ಲೋಕದ ದೇವರಂತೆ ಸೃಷ್ಟಿಸಬೇಕೆಂದು ಹೇಳಲಾಗಿದೆ. ನನ್ನ ಮೂರ್ತಿ ಹಿಂದೂ ಸಂಸ್ಕೃತಿ, ಸನಾತನ ಸಮಾಜದ ಕಾಲದ ಪರಂ ಪರೆಯಲ್ಲಿ ಭಾರತದಲ್ಲಿರುವ ವಿವಿಧ ಶೈಲಿಯ ಶಿಲ್ಪ ಶಾಸ್ತ್ರಗಳ ಸೂಕ್ಷ ¾ವನ್ನು ಒಳಗೊಂಡಿದೆ. ಎರಡು ಸಾವಿರ ವರ್ಷ ಹಿಂದಿನ ರಾಮನನ್ನು ಕಲ್ಪಿಸಿಕೊಂಡು ಆ ಕಾಲದ ದೇವಾ ಲ ಯದ ಕಲ್ಪನೆಯಲ್ಲಿ ಮೂರ್ತಿ ರಚಿಸಿದ್ದೇನೆ. ಅಂಗ, ಉಪಾಂಗ, ಸರ್ವಾಂಗ ಸುಂದರವಾಗಿ ಮೂರ್ತಿ ರಚಿಸಲು ಶಿಲ್ಪಶಾಸ್ತ್ರದಲ್ಲಿ ಹೇಳಿದ ಎಲ್ಲ ಪಠ್ಯಗಳನ್ನು ತಪ್ಪದೇ ಪಾಲಿಸಿದ್ದೇನೆ. ವಾಸ್ತವದ ಐದು ವರ್ಷದ ಮಗುವಿಗೆ ಹೋಲುವಂತೆ ರಾಮನನ್ನು ಚಿತ್ರಿಸದೆ ವಾಲ್ಮೀಕಿ ವರ್ಣಿಸಿದಂತೆ ವೈಭವೋಪೇತವಾಗಿ ಚಿತ್ರಿಸಿದ್ದೇನೆ. ನೀವು ರಚಿಸಿದ ವಿಗ್ರಹದಲ್ಲಿ ಬಾಲರಾಮನನ್ನು ಮಾತ್ರ ಕೆತ್ತಲಾಗಿದೆಯಾ? ಅಥವಾ ಇತರೆ ಅಂಶಗಳೂ ಇವೆಯಾ?
ನೀಲಮೇಘಶ್ಯಾಮ ಶಿಲೆಯನ್ನೇ ಆಯ್ದುಕೊಂಡು ಏಳು ಅಡಿ ಎತ್ತರದ ರಾಮ ಮೂರ್ತಿಯನ್ನು ಕಾಶ್ಮೀರದಿಂದ ಕನ್ಯಾ ಕುಮಾರಿ ಯವರೆಗಿನ ಭಾರತೀಯ ಶಿಲ್ಪ ಶೈಲಿಯ ಉತ್ತಮ ಅಂಶಗಳನ್ನು ಬಳಸಿಕೊಂಡಿದ್ದೇನೆ. ಕಮಲದ ಮೇಲೆ ಐದು ವರ್ಷದ ಎಳೆಯ ಶ್ರೀರಾಮ ನೆಲೆಯಾಗಿದ್ದು, ಯುವ ರಾಜನಾದ ಕಾರಣ ಮುಕುಟ ಇಟ್ಟಿದ್ದೇನೆ. ಸೂರ್ಯ ವಂಶಿಯನಾದ ಕಾರಣ ಕಿರೀಟದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಕಾಣುವಂತೆ ಪುಟ್ಟ ಸೂರ್ಯನನ್ನು ರೂಪಿಸಿದ್ದೇನೆ. ಚಕ್ರವರ್ತಿಯಾದ ಕಾರಣ ಕಿರೀಟದ ಹಿಂಭಾಗದಲ್ಲಿ ಸೂರ್ಯನನ್ನು ಚಿತ್ರಿಸಿದ್ದೇನೆ. ಮೂರ್ತಿಯಲ್ಲಿ ದಶಾ ವತಾರವಿದೆ. ಪ್ರಭಾವಳಿಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರಿ ದ್ದಾರೆ. ಆದಿ ನಾರಾಯಣನ ಸಂಕೇತವಾದ ಶಂಖಚಕ್ರಗಳಿವೆ. ರಾಮನ ಜೀವಿತಾವಧಿ ಯಲ್ಲಿಯೇ ಆಂಜನೇಯ ಇದ್ದ ಕಾರಣ ಯುಗದ ದಾಖಲೆಯಾಗಿ ಬಾಲಾಂಜನೇಯನ್ನು ಕೂರಿಸಿದ್ದೇನೆ. ಗರುಡ, ಪೂರ್ಣಕುಂಭ, ಸ್ವಸ್ತಿಕ್, ಓಂ ಚಿಹ್ನೆಗಳಿವೆ. ಭಾರತೀಯ ಸಂಪ್ರದಾ ಯದಂತೆ ಏಕ ದುಂಡುಶಿಲೆಯಲ್ಲಿ ಎಲ್ಲವನ್ನೂ ರಚಿಸಿದ್ದೇನೆ. ಇದನ್ನು ನಾನು ಮಾಡಿಲ್ಲ, ರಾಮ ಮಾಡಿಸಿಕೊಂಡ ಎಂಬ ವಿಶ್ವಾಸವಿದೆ. ಶಿಲ್ಪಿಯಾಗಿದ್ದಕ್ಕೆ ಜೀವನ ಸಾರ್ಥಕವಾಯಿತು ಅನಿಸಿದೆ. ಮೂರೂ ರಾಮಂದಿರು ಅಯೋಧ್ಯೆಯಲ್ಲಿ ನೆಲೆಸುತ್ತಾರೆ. ರಾಮಮಂದಿರ ದರ್ಶನದಿಂದ ಮನುಕುಲಕ್ಕೆ ರಾಮರಾಜ್ಯದ ಪ್ರಜೆಗಳಾಗಲು ಪ್ರೇರಣೆ ಸಿಗಲಿ ಎಂಬ ದೃಷ್ಟಿಕೋನದಿಂದ ಮೂರ್ತಿಗಳನ್ನು ರಚಿಸಿದ್ದೇನೆ. ನೀವು ಕೆತ್ತಿದ ಮೂರ್ತಿ ಅಯೋಧ್ಯೆಯಲ್ಲಿರುತ್ತದೆ. ಈ ಬಗ್ಗೆ ನಿಮಗೆ ಏನು ಅನಿಸುತ್ತಿದೆ?
ಭಾರತದ ಶಿಲ್ಪಕಲಾ ಪರಂಪರೆಯ ಅಖಂಡ ಮೂರ್ತಿಯಾಗಿ ಯಾವುದೇ ವಿದೇಶಿ ಶಿಲ್ಪದ ಕಿಂಚಿತ್ ಪ್ರಭಾವ ಇಲ್ಲದೇ ನೋಡುಗರಿಗೆ ಭಾರತದ ಶಿಲ್ಪ ಪರಂಪರೆಯ ಸ್ಪಷ್ಟ ಕಲ್ಪನೆ ಬರುವಂತೆ ಬಾಲ ಶ್ರೀರಾಮನ ಪ್ರತಿ ಅಂಗ, ಆಭರಣ, ಭಂಗಿ ಭಾರತದ ಭವ್ಯತೆಯನ್ನು, ದಿವ್ಯತೆಯನ್ನು ಸಾರುವಂತೆ ರಚಿಸಿದ ಆತ್ಮತೃಪ್ತಿ ಇದೆ. ಮೂರ್ತಿಯನ್ನು ನಿತ್ಯ ವೀಕ್ಷಿಸುವ ಲಕ್ಷ ಲಕ್ಷ ಜನರ ಧನ್ಯತೆ, ತೃಪ್ತಿ, ಅವರಲ್ಲಿ ಆವಾಹನೆಗೊಳ್ಳುವ ರಾಮತ್ವ ನೆನೆಸಿಕೊಳ್ಳುತ್ತೇನೆ, ನೋಡುಗರು ನಿತ್ಯ ನನ್ನನ್ನು ನೆನಪಿಸುತ್ತಾರೆ. ಇಂತಹ ನೋಟಗಳು ಚಿರಂತರ. ನನ್ನನ್ನು ಚಿರಂಜೀವಿಗೊಳಿಸು ತ್ತವೆ ಎಂಬುದು ಧನ್ಯತೆಯ ಕ್ಷಣ. ವಿಶೇಷ ಸಂದರ್ಶನ : ಜೀಯು ಹೊನ್ನಾವರ