ಚೆನ್ನೈ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆರೆಕಂಡ ಕಾಲಿವುಡ್ ನ ಬಹು ನಿರೀಕ್ಷಿತ ʼಅಯಲಾನ್ʼ ನಿರೀಕ್ಷೆಗೆ ತಕ್ಕಂತೆ ಸಿನಿಮಂದಿಯನ್ನು ರಂಜಿಸಿದೆ. ಆ ಮೂಲಕ ಶಿವಕಾರ್ತಿಕೇಯನ್ ಅವರಿಗೆ ಕಂಬ್ಯಾಕ್ ಹಿಟ್ ತಂದುಕೊಟ್ಟಿದೆ.
ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದೊಂದಿಗೆ ಪೈಪೋಟಿಯಾಗಿ ತೆರೆಕಂಡ ʼಅಯಲಾನ್ʼ ಬಾಕ್ಸ್ ಆಫೀಸ್ ನಲ್ಲಿ 90 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಎಲಿಯನ್ ಹಾಗೂ ಮನುಷ್ಯನ ನಡುವಿನ ಸ್ನೇಹದ ಕಥೆಯನ್ನೊಳಗೊಂಡಿರುವ ʼಅಯಲಾನ್ʼ ವಿಎಫ್ ಎಕ್ಸ್ ಕೆಲಸದಿಂದ ಮೆಚ್ಚುಗೆಗಳಿಸಿಕೊಂಡಿದೆ.
ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿದ್ದು, ಸಿನಿಮಾದ ಸೀಕ್ವೆಲ್ ಬಗ್ಗೆ ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎಂದು ಸಂದರ್ಶನವೊಂದಲ್ಲಿ ಶಿವಕಾರ್ತಿಕೇಯನ್ ಹೇಳಿದ್ದರು. ಅದರಂತೆ ಅಧಿಕೃತವಾಗಿ ʼಅಯಲಾನ್-2ʼ ಬಗ್ಗೆ ಚಿತ್ರತಂಡ ಘೋಷಿಸಿದೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಸಿನಿಮಾದ ವಿಎಫ್ ಎಕ್ಸ್ ಕೆಲಸ ಮಾಡಿರುವ ಫ್ಯಾಂಟಮ್ FX, “ಅಯಾಲನ್ 2-ವಿನ ವಿಎಫ್ ಎಕ್ಸ್ ಗಾಗಿ 50 ಕೋಟಿ ರೂ. ಬಜೆಟ್ ಇಡಲಾಗಿದೆ. ಸಿನಿಮಾ ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ. ಸಿನಿಮಾದಲ್ಲಿ ಅದ್ಭುತ ದೃಶ್ಯಗಳ ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಳ್ಳಬಹುದೆಂದು” ಫ್ಯಾಂಟಮ್ FX ಹೇಳಿದೆ.
‘ಅಯಾಲನ್’ ಚಿತ್ರದಲ್ಲಿ ಶಿವಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್, ಯೋಗಿ ಬಾಬು, ಕರುಣಾಕರನ್ ಮತ್ತು ಇತರರು ನಟಿಸಿದ್ದು, ಕೆಜೆಆರ್ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವನ್ನು ಆರ್.ರವಿಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಎಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.