Advertisement

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

09:05 PM Oct 26, 2021 | Team Udayavani |

ನವದೆಹಲಿ: ಕೋವಿಡ್‌ ಡೆಲ್ಟಾ ರೂಪಾಂತರಿಯಿಂದ ಮರುರೂಪಾಂತರಗೊಂಡ ಎವೈ.4.2 ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಅದು ಡೆಲ್ಟಾದಷ್ಟು ಅಪಾಯಕಾರಿಯೂ ಅಲ್ಲ. ಆದರೆ, ಅತ್ಯಂತ ಕ್ಷಿಪ್ರವಾಗಿ ಹರಡುತ್ತದೆ ಎನ್ನುವುದು ನಿಜ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿ ಸಮೀರನ್‌ ಪಾಂಡಾ ಹೇಳಿದ್ದಾರೆ.

Advertisement

ಯಾರೂ ಅನಗತ್ಯ ಭೀತಿಗೆ ಒಳಗಾಗಬೇಕಾಗಿಲ್ಲ. ಆದರೆ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಜತೆಗೆ, ಮಾಸ್ಕ್ ಧರಿಸುವುದರಿಂದ ಸೋಂಕು ತಗಲುವುದನ್ನು ತಪ್ಪಿಸಿಕೊಳ್ಳಬಹುದು ಮತ್ತು ಲಸಿಕೆ ಪಡೆಯುವುದರಿಂದ ಸಾವಿನಿಂದ ತಪ್ಪಿಸಿಕೊಳ್ಳಬಹುದು. ಯಾವ ರೂಪಾಂತರಿ ಬಂದರೂ ಇವೆರಡನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ ಎಂದೂ ಹೇಳಿದ್ದಾರೆ.

ಎವೈ.4.2 ಎನ್ನುವುದು ಇನ್ನೂ ಪರಿಶೀಲನಾ ಹಂತದಲ್ಲಿರುವ ರೂಪಾಂತರಿಯಾಗಿದ್ದು, ಅದು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿಲ್ಲ. ಈ ರೂಪಾಂತರಿ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಾದ ಅವಶ್ಯಕತೆಯಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ:ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿ ಗಾಂಜಾ ವಶ: ಆರೋಪಿ ಪರಾರಿ

2 ಕಂಟೈನರ್‌ ಆಧರಿತ ಸಂಚಾರಿ ಆಸ್ಪತ್ರೆ
ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಮೂಲಸೌಕರ್ಯ ಯೋಜನೆಯ ಅನ್ವಯ, ಎಲ್ಲ ಆರೋಗ್ಯಸೇವಾ ಸೌಲಭ್ಯಗಳನ್ನು ಒಳಗೊಂಡ ಎರಡು ಕಂಟೈನರ್‌ ಆಧರಿತ ಸಂಚಾರಿ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಘೋಷಿಸಿದ್ದಾರೆ.

Advertisement

ಈ ಆಸ್ಪತ್ರೆಗಳನ್ನು ತುರ್ತು ಅವಶ್ಯಕತೆ ಇರುವ ಯಾವುದೇ ಪ್ರದೇಶಕ್ಕೆ ರವಾನಿಸಲು ಸಾಧ್ಯ. ಪ್ರತಿ ಕಂಟೈನರ್‌ನಲ್ಲಿ ಸುಮಾರು 100 ಹಾಸಿಗೆಗಳನ್ನು ಅಳವಡಿಸಬಹುದಾಗಿದ್ದು, ದೆಹಲಿ ಮತ್ತು ಚೆನ್ನೈನಲ್ಲಿ ಇದನ್ನು ನಿಯೋಜಿಸಲಾಗುವುದು. ತುರ್ತು ಅಗತ್ಯ ಇದ್ದಾಗ, ವಿಮಾನ ಅಥವಾ ರೈಲಿನ ಮೂಲಕ ಈ ಕಂಟೈನರ್‌ಗಳನ್ನು ಎಲ್ಲಿಗೆ ಬೇಕಿದ್ದರೂ ಒಯ್ಯಬಹುದು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ ಮತ್ತೆ ಲಾಕ್‌ಡೌನ್‌
ಚೀನಾದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಕಾರಣ, 40 ಲಕ್ಷ ಜನಸಂಖ್ಯೆಯಿರುವ ಲಾಂಝೌ ನಗರದಲ್ಲಿ ಮಂಗಳವಾರ ಲಾಕ್‌ಡೌನ್‌ ಘೋಷಿಸಲಾಗಿದೆ. ತುರ್ತು ಅಗತ್ಯದ ಹೊರತಾಗಿ ಯಾರೂ ಮನೆಯಿಂದ ಹೊರಬರಬಾರದು ಎಂದೂ ಸೂಚಿಸಲಾಗಿದೆ. ಬಸ್ಸು, ಟ್ಯಾಕ್ಸಿಗಳ ಸೇವೆ ಸ್ಥಗಿತಗೊಂಡಿದ್ದು, 70ಕ್ಕೂ ಅಧಿಕ ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿದೆ. ಮಂಗಳವಾರ ಲಾಂಝೌದಲ್ಲಿ 6 ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟಾರೆ 29 ಹೊಸ ಡೆಲ್ಟಾ ಪ್ರಕರಣ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next