ಬೀದರ: ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ನಗರದಲ್ಲಿ ನ. 12ರಂದು “ಮಾಲಿನ್ಯ ಅಳಿಸಿ ಜೀವ ಉಳಿಸಿ’ ಘೋಷ ವಾಕ್ಯದಡಿ ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ನಿಮಿತ್ತ ನಗರದ ಅಂಬೇಡ್ಕರ್ ವೃತ್ತ ಹತ್ತಿರ ನಡೆದ ಬೀದಿನಾಟಕ ಕಾರ್ಯಕ್ರಮ ಹಾಗೂ ಸಸಿ ವಿತರಣೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಚಾಲನೆ ನೀಡಿದರು. ಇದೇ ವೇಳೆ ಡಿಸಿ ವಾಹನ ಚಾಲಕರಿಗೆ ಸಸಿ ವಿತರಣೆ ಮಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಮಾತನಾಡಿ, ಮನುಕುಲದ ಒಳಿತಿಗೆ ಪರಿಸರ ಸಮತೋಲನದಿಂದ ಇಟ್ಟುಕೊಳ್ಳಬೇಕು.
ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು. ವಾಹನಗಳಿಗೆ ಕಳಪೆ ಇಂಧನ ಬಳಸಬಾರದು. ಇದರಿಂದ ಸಾಕಷ್ಟು ಹೊಗೆ ಉಂಟಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದರು.
ಹೊಗೆ ಸೇವನೆಯಿಂದ ಮನುಷ್ಯನ ಶ್ವಾಸಕೋಶದ ಮೇಲೆ ಪರಿಣಾಮವಾಗಲಿದೆ. ಅಲ್ಲದೇ ಕಣ್ಣು ಮಂಜಾಗಲಿವೆ. ಕ್ಯಾನ್ಸರ್, ಅಸ್ತಮಾ ಮತ್ತು ದಮ್ಮಿನಂತಹ ಕಾಯಿಲೆಗಳು ಬರುತ್ತವೆ. ಆದ್ದರಿಂದ ಜನರು ವಾಹನಗಳಿಗೆ ಗುಣಮಟ್ಟದ ಇಂಧನ ಬಳಸಬೇಕು. ವಾಹನಗಳಿಗೆ ತಪ್ಪದೇ ಆರು ತಿಂಗಳಿಗೊಮ್ಮೆ ವಾಯುಮಾಲಿನ್ಯ ತಪಾಸಣೆ ಮಾಡಿಸಬೇಕು. ಇಲ್ಲವಾದರೆ ದ್ವಿಚಕ್ರ ವಾಹನಗಳಿಗೆ 1500ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ 3000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾಫರ ಸಾಕ್ ಮಾತನಾಡಿ, ಮನುಷ್ಯನಿಗೆ ಗಾಳಿ ಅತೀಮುಖ್ಯ. ಹೀಗಾಗಿ ಕಾಲಕಾಲಕ್ಕೆ ವಾಹನ ಪರಿಶೀಲಿಸುತ್ತ ಹೊಗೆಬಾರದಂತೆ ಸುಸ್ಥಿತಿಯಲ್ಲಿಟ್ಟುಕೊಳ್ಳೋಣ. ಚಿಕ್ಕ ಮಕ್ಕಳಿಗೆ ವಾಹನ ನೀಡಬಾರದು ಎಂದು ಸೂಚಿಸಿದರು.
ಕಚೇರಿ ಅಧೀಕ್ಷಕ ಖಾಜಾ ಬಿರಾನಿಬಾಷಾ, ವಾಹನ ನಿರೀಕ್ಷಕ ಮಂಜುನಾಥ ಎಂ.,ಪ್ರಮುಖರಾದ ಶಿವರಾಜ ಜಮಾದಾರ, ಪ್ರಕಾಶ ಗುಮ್ಮೆ, ಸಮೀರ್ ಅಹ್ಮದ್, ಅನೀಲಕುಮಾರ, ರಾಜಕುಮಾರಬಿರಾದಾರ, ವಿಲಿಯಂ ಹೊಸಮನಿ, ಜೇಮ್ಸ್, ವಿಶ್ವನಾಥ ಎಂ, ಸಯ್ಯದ್ ಖಲೀಂ, ವೀರೇಂದ್ರ ಇತರರು ಇದ್ದರು.
ಜಾಗೃತಿ ಕಾರ್ಯಕ್ರಮ: ದೇವದಾಸ್ ಚಿಮಕೋಡ್ ನೇತೃತ್ವದ ನಂದೀಶ್ವರ ನಾಟ್ಯ ಸಂಘದಿಂದ ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಹತ್ತಿರ ಜಾಗೃತಿ ಕಾರ್ಯಕ್ರಮ ನಡೆದವು. ವಾಯುಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಗೀತೆ ಹೇಳಿ ಅರಿವು ಮೂಡಿಸಲಾಯಿತು.