ಆಳಂದ: ಪಟ್ಟಣದ ಜೂನಿಯರ್ ಕಾಲೇಜಿನ ಪ್ರಾಂಗಣದಲ್ಲಿ ಪದವಿ, ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗೆ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಜಿಲ್ಲಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅರಿವಿನ ಪಯಣ-ಜಾಥಾ ಕಾರ್ಯಕ್ರಮಕ್ಕೆ ಒಕ್ಕೂಟದಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಲೇಖಕಿ ಡಾ| ದು. ಸರಸ್ವತಿ, ಮಂಗಳೂರಿನ ಹೋರಾಟಗಾರತಿ ವಾಣಿ ಪರಿಯೋಡಿ, ಡಾ| ಶರಣಮ್ಮ ಕುಡ್ಡಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ಸೇರಿ ಹಲವು ರೀತಿಯ ದೌರ್ಜನ್ಯಕ್ಕೆ ತಡೆಯುವ ಉದ್ದೇಶದಿಂದ ಅರಿವಿನ ಪಯಣ ಜಾಥಾದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರು, ವಿದ್ಯಾರ್ಥಿನಿಯರು ತಮ್ಮ ಮೇಲೆ ಆಗುವ ಅನ್ಯಾಯ ಸಹಿಸಿಕೊಳ್ಳದೆ ಎದುರಿಸುವ ಜಾಗೃತಿಯನ್ನು ತಂದುಕೊಳ್ಳಬೇಕು. ಸಮಸ್ಯೆಗಳಿದ್ದರೆ ಮಹಿಳಾ ಒಕ್ಕೂಟದ ಗಮನಕ್ಕೆ ತರಬೇಕು ಎಂದು ಹೇಳಿದರು.
ನಾಯಕಿ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ಮಹಿಳೆಯರ ಲಿಂಗ ಸಮಾನತೆ ಸಂಬಂಧಿತ ನಾಟಕ, ಹಾಡು ಸಂವಾದ ಮೂಲಕ ಎಲ್ಲಡೆ ಜಾಗೃತಿ ಕೈಗೊಳ್ಳಲಾಗುತ್ತಿದೆ. ಸಮಾಜದಲ್ಲಿನ ಮಹಿಳಾ ದೌರ್ಜನ್ಯ ತಡೆಗಟ್ಟಬೇಕು. ತಾರತಮ್ಯ ನಿಲ್ಲಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಸರ್ವರು ಕೈಜೋಡಿಸಬೇಕು ಎಂದರು.
ಈಗಾಗಲೇ ಕಲಬುರಗಿಯಲ್ಲಿ ಫೆ.18ರಂದು ಪ್ರಾರಂಭಗೊಂಡಿದ್ದು, ಅರಿವಿನ ಪಯಣವು ಜಿಲ್ಲೆಯ ವಿವಿಧ ತಾಲೂಕು ನಗರದ ವಿವಿಧ ಬಡಾವಣೆಯಲ್ಲಿ ನಡೆಯಲಿದೆ. ಮಾರ್ಚ್ 7ರಂದು ಎಲ್ಲ ಜಿಲ್ಲೆಗಳಿಂದ ಕಲಬುರಗಿಯಲ್ಲಿ ರಾತ್ರಿ ಡಾ| ಅಂಬೇಡ್ಕರ್ ಸರ್ಕಲ್ ನಲ್ಲಿ ಕಪ್ಪು ಉಡುಗೆಯಲ್ಲಿ ಮೌನ ಮೆರವಣಿಗೆ ನಡೆಯುವುದು. ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿ ಈ ಕುರಿತು ವಿಚಾರ ಸಂಕಿರಣ ಜರುಗಲಿದೆ. ಈ ವೇಳೆ ನಮ್ಮ ಶೀಲ್ಪಿ ನಾವೆ ಎಂಬ ಘೋಷ ವಾಕ್ಯದಡಿ ಮಹಿಳಾ ಹಕ್ಕುಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ಹೇಳಿದರು.
ಒಕ್ಕೂಟದ ಶಿವಲೀಲಾ ಧೋತ್ರೆ, ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪೂರೆ, ಕೊದಂಡರಾಮಯ್ಯ, ಕಾಶಿನಾಥ, ಅಶ್ವಿನಿ, ಮದಕರ್, ಪೂಜಾ ಸಿಗೆ, ಪ್ರೇಮಕುಮಾರ ಮಾವೀನಕರ್, ಉಪನ್ಯಾಸಕ ರಮೇಶ ಮಾಡಿಯಾಳಕರ್, ಪ್ರಾಚಾರ್ಯರಾದ ನಿಂಗಪ್ಪ ಪೂಜಾರಿ, ಜೋಹಾರಾ ಫಾತೀಮಾ, ಪ್ರೊ| ಶಿವಶರಣಪ್ಪ ಬಿರಾದಾರ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು.