ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಡೆಂಘೀ ಮಹಾಮಾರಿಯ ಕುರಿತ ಜಾಗೃತಿ ಜಾಥಾಕ್ಕೆ ಸೋಮವಾರ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್.ಬಸರೆಡ್ಡಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮುಂಬರುವ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಡೆಂಘೀ ಜ್ವರವು ಹೆಚ್ಚಾಗಿ ಹರಡುವ ಸಂಭವಿರುವುದರಿಂದ ಸಮುದಾಯದ ಸಹಕಾರವನ್ನು ಪಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಡೆಂಘೀ ತಡೆಗಟ್ಟಬಹುದು-ಬನ್ನಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಡಾ|ಆರ್. ಅಬ್ದುಲ್ಲಾ ಮಾತನಾಡಿ, ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದ್ದು, ಡೆಂಘೀ ಜ್ವರವು ಈಡೀಸ್ ಈಜಿಫ್ಟಿ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಕಚ್ಚುವುದರಿಂದ ಹರಡುತ್ತದೆ. ಈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಬೆಳೆದು ತನ್ನ ಸಂತಾನ ಅಭಿವೃದ್ಧಿ ಮಾಡುತ್ತದೆ. ಡೆಂಘೀ ಜ್ವರದ ಲಕ್ಷಣಗಳಾದ ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲ ಸೇವೆಗಳು ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಜಾಗೃತಿ ಜಾಥಾವು ನಗರದ ವಿವಿಧ ಪ್ರದೇಶಗಳಲ್ಲಿ ಮೈಕ್ ಮೂಲಕ ಹಾಗೂ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಮತ್ತು ಸೊಳ್ಳೆ ಮರಿಗಳನ್ನು ಸಾರ್ವಜನಿಕರಿಗೆ ತೋರಿಸಿ ಡೆಂಘೀ ಕುರಿತು ಆರೋಗ್ಯ ಜಾಗೃತಿಯನ್ನು ಮೂಡಿಸುತ್ತಾ ಸಂಚರಿಸಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ| ಮೋಹನ್‌ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ, ವಿಬಿಡಿಸಿ ಕನ್ಸಲ್ಟೆಂಟ್ ಗಳಾದ ಪ್ರತಾಪ್.ಹೆಚ್, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಪ್ರಯೋಗಶಾಲಾ ತಂತ್ರಜ್ಞರು, ಶಾಂತಮ್ಮ, ಬಿಎಚ್‌ಇಓ, ತಾಲೂಕು ಆರೋಗ್ಯ ಸಿಬ್ಬಂದಿ, ಡಿವಿಬಿಡಿಸಿಪಿ ಕಚೇರಿಯ ಎಲ್ಲ ಸಿಬ್ಬಂದಿ ಇದ್ದರು.