ರಾಮದುರ್ಗ: ದೇಶದಲ್ಲಿರುವ ಎಲ್ಲ ಹಿಂದೂಗಳು ಒಟ್ಟಾಗಿ ಮೊಘಲ್‌ರು ಹಾಗೂ ಬಾಬರ್ ಸಂತತಿಯ ವಿರುದ್ಧ ಹೋರಾಟ ನಡೆಸಿ ದೇಶವನ್ನು ಉಳಿಸಬೇಕಾದ ಅನಿವಾರ್ಯತೆ ಬಂದಿದ್ದು, ಅದಕ್ಕಾಗಿ ದೇಶದುದ್ದಕ್ಕೂ ಹಿಂದೂ ಸಂಘಟನೆಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ತಾಲೂಕಿನ ಗೊಡಚಿ ಗ್ರಾಮದ ವೀರಭದ್ರೇಶ್ವರ ಮೈದಾನದಲ್ಲಿ ಅಲ್ಲಿನ ಗಜಾನನ ಯಂಗ್ ಸ್ಟಾರ್ ಕಮೀಟಿಯಿಂದ ಹಮ್ಮಿಕೊಂಡ ಹಿಂದೂ ಪರ ಸಂಘಟನೆ ಮತ್ತು ಬೃಹತ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಸುಭಾಶ್ಚಂದ್ರ ಬೋಸ್, ಭಗತಸಿಂಗ್, ವೀರ ಸಾವರಕರ, ವೀರರಾಣಿ ಕಿತ್ತೂರ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯದ ಸಂತಸದಲ್ಲಿದ್ದರೆ, ದೇಶದಲ್ಲಿರುವ ದುಷ್ಟ ಶಕ್ತಿಗಳು ಇಸ್ಲಾಂ ರಾಷ್ಟ್ರದ ಕನಸು ಕಾಣುವ ಕೆಲಸ ಮಾಡುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳ ದಮನ ಮಾಡಲು ನಾವೆಲ್ಲಾ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
200 ವರ್ಷಗಳ ಕಾಲ ದೇಶವನ್ನಾಳಿದ ಕ್ರಿಶ್ಚಿಯನ್ನರು ಹಾಗೂ ಮೊಘಲ್‌ರು ಇಡೀ ದೇಶದಲ್ಲಿ ತಮ್ಮ ಧರ್ಮದ ಪ್ರಚಾರಕ್ಕಾಗಿ ಏನು ಬೇಕು ಆ ರೀತಿಯಲ್ಲಿ ವ್ಯವಸ್ಥೆ ಮಾಡಿ ಇಂದು ಸಹ ಆ ಕೆಲಸವನ್ನು ನಿರಂತರಗೊಳಿಸುವ ಕಾರ್ಯದಲ್ಲಿದ್ದಾರೆ. ಅಂತಹ ಮತಾಂಧ ಶಕ್ತಿಗಳಿಗೆ ತಕ್ಕ ಪಾಠ ಕಲಿಸುವಲ್ಲಿ ನಾವೆಲ್ಲಾ ಗುದ್ದಾಡಬೇಕಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾ ದಾಗಿನಿಂದ ಪಾಕಿಸ್ಥಾನ ಬಾಲ ಮುದಿರಿಕೊಂಡು ಕುಳಿತುಕೊಳ್ಳುವಂತಾಗಿದೆ. ಸದಾ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ನಮ್ಮ ಹಿಂದೂಗಳನ್ನೆ ಕೊಲ್ಲುವ ಕೆಲಸ ಮಾಡಿ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಕೆಲಸ ನಡೆಸುತ್ತಿತ್ತು. ಇನ್ನು ಇಂತಹ ಕುತಂತ್ರ ನಡೆಯುವುದಿಲ್ಲ. ದೇಶದಲ್ಲಿರುವ ಹಿಂದೂಗಳು ಶಾಂತಿಗೂ ಸಿದ್ದ-ಸಮರಕ್ಕೂ ಸಿದ್ಧ ಎಂಬುದನ್ನು ತೋರಿಸಿದ್ದಾರೆ ಎಂದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ನಾಡಿನ ಹಿಂದೂಗಳ ರಕ್ಷಣೆಗಾಗಿ ಪ್ರಮೋದ ಮುತಾಲಿಕ್ ಅವರು ಹಿಂದೂ ಸಂಘಟನೆಯ ಮೂಲಕ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರ ಹೋರಾಟಕ್ಕೆ ನಾವೆಲ್ಲಾ ಕೈಜೋಡಿಸಲು ಮುಂದಾಗಬೇಕಿದೆ ಎಂದು ಹೇಳಿದರು. ಚಡಚಣದ ಬಾಲವಾಗ್ಮೀ ಭಾಗ್ಯಶ್ರೀ ಬಿರಾದಾರ ಮಾತನಾಡಿ, ನಮ್ಮ ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕಾಗಿ ನಾವೆಲ್ಲಾ ತಲ್ವಾರ್ ಹಿಡಿದು ಹೋರಾಡಲು ಸಹ ಸಿದ್ದರಾಗಬೇಕಿದೆ ಎಂದು ಕರೆ ನೀಡಿದರು.
ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು. ಸಂಜಯಸಿಂಹ ಶಿಂದೆ ಮಹಾರಾಜರು, ಜಿ.ಪಂ ಮಾಜಿ ಸದಸ್ಯ ಮಾರುತಿ ತುಪ್ಪದ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಬೀಳಗಿ, ಮುಪ್ಪಯು ಹಿರೇಮಠ, ರಮೇಶ ಪಾಕನಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ದು ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಯ್ಯ ಪೂಜಾರ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ ಜಾಮದಾರ ವಂದಿಸಿದರು.