Advertisement

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

01:28 AM Dec 01, 2021 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹಾಗೂ ಇತ್ತೀಚೆಗೆ ಹೊರ ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವ ಅದರ ರೂಪಾಂತರಿಯನ್ನು ತಡೆಗಟ್ಟುವಲ್ಲಿ ವಿಮಾನ ನಿಲ್ದಾಣ ಹಾಗೂ ನವಮಂಗಳೂರು ಬಂದರು ಟ್ರಸ್ಟ್‌ನ ಪಾತ್ರ ಅತಿ ಮುಖ್ಯವಾಗಿದ್ದು, ಸೋಂಕಿತರ ಪತ್ತೆಗಾಗಿ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.

Advertisement

ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ನಿಗಾ ವಹಿಸುವ ಕುರಿತು ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪರಿಶೀಲನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮಾನನಿಲ್ದಾಣಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿ ಹೊಂದಿರಬೇಕು. ಕೋವಿಡ್‌ ತಪಾಸಣೆ ವೇಳೆ ಪಾಸಿಟಿವ್‌ ಕಂಡುಬಂದಲ್ಲಿ ಕೂಡಲೇ ಆ್ಯಂಬುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು, ವಿಮಾನನಿಲ್ದಾಣ ಮ್ಯಾನೇಜರ್‌ಗೆ ಸೋಂಕಿತರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿ ನೀಡಲಾಗಿದೆ ಎಂದರು.

ನವಮಂಗಳೂರು ಬಂದರಿಗೆ ಆಗಮಿಸುವ ಪ್ರಯಾಣಿಕರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಬೇಕು ಹಾಗೂ ಆಗಮಿಸುವ ಪ್ರಯಾಣಿಕರು ಮತ್ತು ಹಡಗುಗಳ ವಿವರಗಳನ್ನು ಪ್ರತಿ ವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಎನ್‌ಎಂಪಿಟಿ ಪ್ರಬಂಧಕರಿಗೆ ಸೂಚಿಸಿದರು.

ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬಂದಿ ಕೋವಿಡ್‌ ವ್ಯಾಕ್ಸಿನ್‌ನ ಮೊದಲ ಹಾಗೂ ಎರಡನೇ ಡೋಸ್‌ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು, ಅದೇ ರೀತಿ ಸರಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕೂಡ ಕೋವಿಡ್‌ ವ್ಯಾಕ್ಸಿನ್‌ ಪಡೆದಿರಬೇಕು, ಪಡೆಯದವರ ಅನುಕೂಲಕ್ಕಾಗಿ ಸಮೀಪದಲ್ಲಿಯೇ ವ್ಯಾಕ್ಸಿನ್‌ ನೀಡುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.

ಇದನ್ನೂ ಓದಿ:ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

Advertisement

ಮನಪಾ ಮತ್ತು ಆರ್‌ಟಿಒ ಕಚೇರಿಗೆ ಪ್ರತಿನಿತ್ಯ ಬರುವ ಜನರು ವ್ಯಾಕ್ಸಿನ್‌ ಪಡೆದಿರುವ ಮಾಹಿತಿ ನೀಡಬೇಕು, ಕೇರಳ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಬೇಕು, ವಾಹನಗಳಲ್ಲಿರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿ ಇಟ್ಟುಕೊಂಡಿರಬೇಕು, ರ್‍ಯಾಂಡಮ್‌ ಆಗಿ ಪರಿಶೀಲಿಸುವ ಸಂದರ್ಭ ಈ ವರದಿ ನೀಡದಿದ್ದರೆ ಅಂತಾರಾಜ್ಯ ಸಾರಿಗೆಯನ್ನು ನಿರ್ಬಂಧಿಸುವ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿದರು.

ಜಿ. ಪಂ. ಸಿಇಒ ಡಾ| ಕುಮಾರ್‌, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಡಿಸಿಪಿ ಹರಿರಾಂ ಶಂಕರ್‌, ಅಪರ ಡಿಸಿ ಚನ್ನಬಸಪ್ಪ, ಇಒ ಮದನ್‌ ಮೋಹನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್‌ ಕುಮಾರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next