ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಇದೀಗ ಆರ್.ಬಿ.ಐ.ನಿಂದ ಆರ್ಥಿಕ ಚಟುವಟಿಕೆ ನಿರ್ಬಂಧಕ್ಕೊಳಗಾಗಿರುವ ಖಾಸಗಿ ರಂಗದ ಐದನೇ ಅತೀ ದೊಡ್ಡ ಬ್ಯಾಂಕ್ ಯೆಸ್ ಬ್ಯಾಂಕ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾಹಿತಿ ಕೇಂದ್ರ ಸರಕಾರಕ್ಕೆ 2017ರಲ್ಲೇ ಸಿಕ್ಕಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಯೆಸ್ ಬ್ಯಾಂಕಿನಲ್ಲಿ ಉಂಟಾಗಿರುವ ತೊಂದರೆಗಳಿಂದ ಆ ಬ್ಯಾಂಕಿನ ಗ್ರಾಹಕರಲ್ಲಿ ಉಂಟಾಗಿರುವ ಆತಂಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿತ್ತ ಸಚಿವರು ಬ್ಯಾಂಕ್ ಗ್ರಾಹಕರ ಹಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆಯನ್ನು ನೀಡಿದ್ದಾರೆ.
2017ರಿಂದಲೇ ನಾವು ಯೆಸ್ ಬ್ಯಾಂಕಿನ ಕಾರ್ಯಚಟುವಟಿಕೆಗಳ ಮೆಲೆ ನಿಗಾ ವಹಿಸಿದ್ದೆವು. ಬ್ಯಾಂಕಿನ ಆರ್ಥಿಕ ವ್ಯವಹಾರಗಳನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿದ ಬಳಿಕ ಬ್ಯಾಂಕಿನ ಆಡಳಿತ ನಿರ್ದೇಶಕರು ಮತ್ತು ಸಿ.ಇ.ಒ. ಅವರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಶಿಫಾರಸು ಮಾಡಿತ್ತು.
ಇದಾದ ಬಳಿಕ 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಸಿ.ಇ.ಒ. ಅವರನ್ನು ನೇಮಕ ಮಾಡಲಾಗಿತ್ತು, ಮತ್ತು ಅಂದಿನಿಂದಲೇ ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಗೊಂಡಿತ್ತು ಎಂದು ಹಣಕಾಸು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇನ್ನು ಬ್ಯಾಂಕಿನ ವ್ಯವಹಾರದ ವಿಚಾರಗಳಿಗೆ ಸಂಬಂಧಿಸಿದ ಸೆಬಿ 2019ರ ಸೆಪ್ಟಂಬರ್ ತಿಂಗಳಲ್ಲೇ ತನಿಖೆ ಪ್ರಾರಂಭಿಸಿತ್ತು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು. ಹೊಸದಾಗಿ ನಗದು ಹೂಡಿಕೆಗಳಿಗೆ ಕ್ರಮ ಕೈಗೊಳ್ಳುವುದಾಗಿ ಬ್ಯಾಂಕಿನ ಆಡಳಿತ ಮಂಡಳಿ ನಮಗೆ ಹೇಳುತ್ತಾ ಬಂದಿತ್ತಾದರೂ ಈ ನಿಟ್ಟಿನಲ್ಲಿ ಯಾವುದೇ ಉಪಕ್ರಮಗಳನ್ನು ಬ್ಯಾಂಕ್ ಕೈಗೊಂಡಿರಲಿಲ್ಲ ಎಂಬ ಮಾಹಿತಿಯೂ ಇದೇ ಸಂದರ್ಭದಲ್ಲಿ ಹೊರಬಿತ್ತು.
ಬ್ಯಾಂಕಿನ ಹಣಕಾಸು ಸ್ಥಿತಿ ಇನ್ನಷ್ಟು ಬಿಗಡಾಯಿಸುವುದನ್ನು ತಪ್ಪಿಸಲು ಮತ್ತು ಠೇವಣಿದಾರರ ಹಿತವನ್ನು ರಕ್ಷಿಸಲು ಆರ್.ಬಿ.ಐ. ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಈ ಪ್ರಕಾರವಾಗಿ ಬ್ಯಾಂಕಿನ ವಹಿವಾಟುಗಳ ಮೇಲೆ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಗಿದ್ದು ನಗದು ಹಿಂಪಡೆಯುವಿಕೆ ಮೇಲೆ ಮಿತಿ ಹೇರಲಾಗಿದೆ.
ಈಗಿರುವ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಹೊಸ ಆಡಳಿತ ಮಂಡಳಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಬ್ಯಾಂಕಿನ ಪುನಶ್ಚೇತನಕ್ಕಾಗಿ ಹೊಸ ನೀತಿಯೊಂದನ್ನು ಆರ್.ಬಿ.ಐ. ಸಿದ್ಧಗೊಳಿಸಿದೆ ಎಂದು ಹಣಕಾಸು ಸಚಿವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬ್ಯಾಂಕಿನ ಉದ್ಯೋಗಿಗಳನ್ನು ಒಂದು ವರ್ಷದವರೆಗೆ ಮುಂದುವರಿಸಲಾಗುವುದು ಈ ಕುರಿತಾಗಿ ಆರ್.ಬಿ.ಐ. ಭರವಸೆ ನೀಡಿದೆ ಮತ್ತು ಕಳೆದ ಆರು ತಿಂಗಳುಗಳಿಂದ ಬ್ಯಾಂಕಿನ ದಿನವಹಿ ವ್ಯವಹಾರದ ಮೇಲೆ ಕಣ್ಗಾವಲು ಇರಿಸಲಾಗಿತ್ತು ಎಂದು ಸಚಿವೆ ಸೀತಾರಾಮನ್ ತಿಳಿಸಿದರು.