ಜಮಖಂಡಿ: ಇಂದಿನ ದಿನ ಮಾನದಲ್ಲಿ ತಮ್ಮ ಜಾತಿಗಳಿಗೆ ಸೀಮಿತವಾಗುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಮಾಡುತ್ತಿದ್ದಾರೆ. ಅಂಜುಮನ್-ಎ- ಇಸ್ಲಾಂ ಕಮೀಟಿ ತಮ್ಮ ಮುಸ್ಲಿಂ ಧರ್ಮದ ಜತೆಗೆ ಬೇರೆ ಧರ್ಮದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಕಾಯಕ ಶ್ಲಾಘನೀಯವಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಹಜರತ್ ಅಬುಬಕರ್ ಅಲ್ಪ ಸಂಖ್ಯಾತರ ಭವನದಲ್ಲಿ ಶನಿವಾರ ಅಂಜುಮನ್-ಎ-ಇಸ್ಲಾಂ ಕಮೀಟಿ ಹಮ್ಮಿಕೊಂಡಿದ್ದ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗೆ ಮತ್ತು ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ಮುಸ್ಲಿಂಯೇತರರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಅಂಜುಮನ್ -ಎ-ಇಸ್ಲಾಂ ಕಮೀಟಿ ಭಾವೈಕ್ಯತೆ ಮುನ್ನುಡಿ ಬರೆದಿದೆ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮುಖ್ಯವಾಗಿರಬೇಕು. ಶಾಲೆಗಳಲ್ಲಿ ಧರ್ಮ, ಜಾತಿಗಳಿಗೆ ಮಾನ್ಯತೆ ನೀಡಬಾರದು. ಇಂದಿನ ಪ್ರತಿಭಾ ಪುರಸ್ಕಾರ ಸಮಾರಂಭ ಮುಂದಿನ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಲಿದೆ. ವಿವಿಧ ಧರ್ಮ ಮತ್ತು ಸಮುದಾಯದವರು ತಮ್ಮ ವಿದ್ಯಾರ್ಥಿಗಳ ಜತೆಗೆ ಬೇರೆ ಧರ್ಮದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ವಾಡಿಕೆ ಆರಂಭಗೊಂಡಲ್ಲಿ ಭಾವೈಕ್ಯತೆ ಮತ್ತಷ್ಟು ಮಹತ್ವ ಹೆಚ್ಚಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಜುಮನ್ -ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಜಾಕೀರಹುಸೇನ ನದಾಫ ಮಾತನಾಡಿ, ಭಾವೈಕತೆ ಮೂಡಿಸುವ ನಿಟ್ಟಿನಲ್ಲಿ ಅಂಜುಮನ್-ಎ-ಇಸ್ಲಾಂ ಕಮೀಟಿ ಮುಸ್ಲಿಂ ವಿದ್ಯಾರ್ಥಿಗಳ ಸಹಿತ ವಿವಿಧ ಧರ್ಮದ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್ ಎಲ್‌ಸಿ. ಪರೀಕ್ಷೆಯಲ್ಲಿ ಉರ್ದು ಮಾಧ್ಯಮದಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿ ಮಕಾನದಾರ ಸಹಿತ ಹೆಚ್ಚು ಅಂಕಪಡೆದು ಅತ್ಯುತ್ತಮ ವಿಶೇಷ ಸಾಧನೆಗೈದ 132 ವಿದ್ಯಾರ್ಥಿಗಳನ್ನು ಅಂಜುಮನ್ -ಎ-ಇಸ್ಲಾಂ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು.
ವಿಜಯಪುರ ಅಲ್‌ಹಾರಿ ಟ್ರಸ್ಟ್ ಅಧ್ಯಕ್ಷ ಮೌಲಾನಾ ಸೈಯದ್ ತನ್ವೀರ್ ಹಾಸ್ಕಿಸಾಹೇಬ ಸಾನಿಧ್ಯ ವಹಿಸಿದ್ದರು. ಹಾಜಿ ಇಲಾಹಿ ಕಂಗನೊಟ್ಟ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮನರಶೀದ್ ಪಾರತನಳ್ಳಿ, ಯುಕೆಪಿ ಅಧಿ ಕಾರಿ ಅಜೀದ ಗದ್ಯಾಳ, ಸಾಬರಾಬಾನು ನದಾಫ್, ಜವಳಿ ನಿಗಮ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ, ಕಾಶೀಂಸಾಬ ಅವಟಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್.ಐ ಮಧು, ವೆಲ್ಫೇರ್ ಇಲಾಖೆ ಸಹಾಯಕ ನಿರ್ದೇಶಕಿ ಸಾಯಿರಾಬಾನು ನದಾಫ, ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಅಹಮ್ಮದಉಮರ್ ಮುಲ್ಲಾ, ಗ್ರೇಡ್-2 ತಹಶೀಲ್ದಾರ್ ಎ.ಎಚ್. ನಿಂಬಾಳಕರ, ಉಪವಿಭಾಗದ ಶಿಕ್ಷಣ ಇಲಾಖೆ ಉರ್ದು ಮಾಧ್ಯಮದ ಸಮನ್ವಯಾಧಿಕಾರಿ ಸಲೀನಾ ಸೌದಾಗರ ಇದ್ದರು.