Advertisement

ಕರ್ನಾಟಕಕ್ಕೆ “ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ”ಪ್ರಶಸ್ತಿ

09:29 PM Oct 02, 2021 | Team Udayavani |

ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ದಿ ಇಂಡಿಯಾ ಟುಡೇ ಗ್ರೂಪ್ ನಿಂದ ನೀಡಲಾಗುತ್ತಿರುವ ‘ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ (Best State Combating Covid-19) ವಿಭಾಗದ ಇಂಡಿಯಾ ಟುಡೇ ಹೆಲ್ತ್ ಗಿರಿ ಪ್ರಶಸ್ತಿಗೆ ಕರ್ನಾಟಕ ಆಯ್ಕೆಯಾಗಿದೆ. ಈ ಪ್ರಯುಕ್ತ ಇಂದು ನಡೆದ ಸಮಾರಂಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರ್ನಾಟಕ ಸರ್ಕಾರದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

Advertisement

ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ. ಆರೋಗ್ಯ ಮೂಲಸೌಕರ್ಯ ಹೆಚ್ಚಳ, ಪರೀಕ್ಷೆ ಸಂಖ್ಯೆ ಹೆಚ್ಚಳ, ದಾಖಲೆ ಮಟ್ಟದಲ್ಲಿ ಕೋವಿಡ್ ಲಸಿಕೆ ನೀಡಿರುವುದು, ಪೋಸ್ಟ್ ಕೋವಿಡ್ ತಪಾಸಣೆ ಮೊದಲಾದ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಈ ಪ್ರಶಸ್ತಿಯ ಗೌರವ ಲಭ್ಯವಾಗಿದೆ.

ಪ್ರಶಸ್ತಿ ಆಯ್ಕೆಯ ಅಂತಿಮ ಹಂತದಲ್ಲಿ ಐದು ರಾಜ್ಯಗಳ ಹೆಸರಿದ್ದು, ಅತ್ಯುತ್ತಮ ನಿಯಂತ್ರಣ ಕ್ರಮಗಳಿಂದ ಸಾಧನೆ ತೋರಿದ ಕರ್ನಾಟಕಕ್ಕೆ ಪ್ರಶಸ್ತಿ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರು, ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಈ ಕುರಿತು ಅಭಿಪ್ರಾಯ ಹಂಚಿಕೊಂಡ ಸಚಿವ ಡಾ.ಕೆ.ಸುಧಾಕರ್, ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯ, ದಾಖಲೆಯಂತೆ ಲಸಿಕೆ ನೀಡಿರುವುದು, ಪರೀಕ್ಷೆ ಹೆಚ್ಚಿಸಿ ಸಂಪರ್ಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿರುವುದು ಮೊದಲಾದ ಕ್ರಮಗಳಿಂದಾಗಿ ಕೋವಿಡ್ ನಿಯಂತ್ರಣಕ್ಕೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೂಡ ರಾಜ್ಯ ಸರ್ಕಾರದ ದಿಟ್ಟ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯಿಂದಾಗಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ದೊರೆತಿದೆ.

ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಕಠಿಣ ಹಾಗೂ ತ್ವರಿತ ಕ್ರಮಗಳನ್ನು ವಹಿಸಿದೆ. ಇನ್ನಷ್ಟು ಕ್ರಮಗಳ ಮೂಲಕ ಕೊರೊನಾವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಹೊಸ ಹುರುಪು ದೊರೆತಿದೆ. ಇದಕ್ಕಾಗಿ ದಿ ಇಂಡಿಯಾ ಟುಡೇ ಗ್ರೂಪ್ ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next