ಧಾರವಾಡ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಹಣಕಾಸು ಸೇವೆಗಳ ಕ್ಷೇತ್ರದಲ್ಲಿನ ಕಾರ್ಯ ಗಮನಿಸಿ ಮುಂಬೈನ ಭಾರತೀಯ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವರ್ಗದ ಅಡಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅನ್ನು ಅತ್ಯುತ್ತಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಎಂದು ಗುರುತಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಆರ್.ಗುರುಮೂರ್ತಿ ಅವರು ಬ್ಯಾಂಕಿನ ಅಧ್ಯಕ್ಷ ಪಿ. ಗೋಪಿಕೃಷ್ಣ ಅವರಿಗೆ ಅಸೋಚಾಮ್ ಪ್ರಶಸ್ತಿ ಫಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್. ಗುರುಮೂರ್ತಿ, ದೇಶವು ನಗದು ರಹಿತ ಆರ್ಥಿಕತೆಯತ್ತ ಸಾಗುತ್ತಿದೆ ಮತ್ತು ದೇಶದಲ್ಲಿ ಡಿಜಿಟಲೀಕರಣಕ್ಕೆ ಸಂಬಂಧಿಸಿ ಮಾಡುವ ಎಲ್ಲ ಪ್ರಯತ್ನಗಳೂ ವೇಗವಾಗಿ ಬದಲಾಗುತ್ತಿರುವ ಪ್ರಪಂಚದೊಂದಿಗೆ ಹೆಜ್ಜೆ ಇಡಲು ಸಹಾಯಕವಾಗಲಿದೆ. ತ್ವರಿತ-ಸುರಕ್ಷಿತ ವಹಿವಾಟುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕೆಂದರು.
ಕೆನರಾ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ಬ್ರಿಜ್ ಮೋಹನ್ ಶರ್ಮಾ ಮಾತನಾಡಿ, ಡಿಜಿಟಲ್ ವಾತಾವರಣ ಸೃಷ್ಟಿಸುವುದು ಈಗ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಆದ್ಯತೆಯಾಗಿದೆ. ಡಿಜಿಟಲೀಕರಣವು ಗ್ರಾಮೀಣ ಆರ್ಥಿಕತೆಯ ಮುಖ ಬದಲಾಯಿಸುವ ಸಮಯ ದೂರವಿಲ್ಲ ಎಂದರು. ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ನೀರಜ್ ಕುಮಾರ್ ವರ್ಮಾ ಮಾತನಾಡಿ, ನಬಾರ್ಡ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್‌ಆರ್‌ಬಿ) ಪ್ರಗತಿ ಮತ್ತು ಒಳಗೊಳ್ಳುವಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಮಯೋಚಿತ ಮಾರ್ಗದರ್ಶನ ಹಾಗೂ ಬೆಂಬಲ ನೀಡುತ್ತಲಿದೆ ಎಂದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಮಾತನಾಡಿ, 40ಕ್ಕೂ ಹೆಚ್ಚು ಗ್ರಾಮಗಳನ್ನು ಶೇ.100 ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಬ್ಯಾಂಕ್‌ನ ಅತ್ಯುತ್ತಮ ಪ್ರಯತ್ನದಿಂದ ಗ್ರಾಮೀಣ ಜನರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಮೈಕ್ರೋ ಎಟಿಎಂಗಳಿಂದ 24 ಗಂಟೆ ಬ್ಯಾಂಕ್ ಸೇವೆ ಪಡೆಯುವಂತಾಗಿದೆ. ಬ್ಯಾಂಕ್ ಜಾರಿಗೆ ತಂದ ಡಿಜಿಟಲೀಕರಣದಿಂದ ನಗದು ರಹಿತ ವಹಿವಾಟು ಗ್ರಾಮೀಣ ಪ್ರದೇಶಗಳಲ್ಲೂ ತೀವ್ರಗೊಳ್ಳುತ್ತಲಿದ್ದು, ಈ ದಿಸೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೊಡುಗೆ ಗಮನಾರ್ಹ ಎಂದರು. ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ಮತ್ತು ರಾಜ್ಯ ಬ್ಯಾಂಕರ್‌ಗಳ ಸಮಿತಿ ಸಂಚಾಲಕ ಬಿ. ಚಂದ್ರಶೇಖರ ರಾವ್ ಇದ್ದರು.