Advertisement

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ

08:32 PM Sep 27, 2024 | Esha Prasanna |

ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಕೊಡಮಾಡುವ 2023-24ನೇ ಮತ್ತು 2024- 25ನೇ ಸಾಲಿನ ” ಗಡಿನಾಡ ಚೇತನ” ಪ್ರಶಸ್ತಿಯನ್ನು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಶುಕ್ರವಾರ ಪ್ರಕಟಿಸಿದರು.

Advertisement

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರಡಲ್ಲಿ ಸೆ.30ರಂದು ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಮತ್ತು ಹೊರನಾಡ ಗಡಿ ಕನ್ನಡಿಗರ ಸಮಾವೇಶದಲ್ಲಿ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಸಂಭ್ರಮ-50ರ ಆಚರಣೆ ನಿಮಿತ್ತ ಈಗಾಗಲೇ ರಾಯಚೂರು, ಮಂಗಳೂರು ಸೇರಿ ಮೂರು ಕಡೆಗಳಲ್ಲಿ ಕಾರ್ಯಕ್ರಮ ಮುಗಿದಿದೆ. ಕೊನೆಯ ಕಾರ್ಯಕ್ರಮ ಗುಡ್ಡಾಪುರದಲ್ಲಿ ಸಂಘಟಿಸಲಾಗಿದೆ ಎಂದರು.

ಹೊರರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದು. ಅಂದು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ಕನ್ನಡ  ನಲಿ-ಕಲಿ ಕಲಿಕಾ ಸಾಮಗ್ರಿಗಳ ವಿತರಣೆ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಲಾಂಛನ ಬಿಡುಗಡೆ ಮಾಡಲಾಗುವುದು. ಸಿಎಂ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿ ಪುರಸ್ಕೃತರು:
ಎರಡು ವರ್ಷಗಳ ಪ್ರಶಸ್ತಿಗಳಿಗೆ ಕನ್ನಡಕ್ಕಾಗಿ ಶ್ರಮಿಸುತ್ತಿರುವ ಗಡಿ ಮತ್ತು ಹೊರಭಾಗದ ಸಾಧಕರು ಹಾಗೂ ಸಂಸ್ಥೆಗಳನ್ನು ಡಾ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದೆ. ಹಲ್ಮಿಡಿ ಶಾಸನದ ಸ್ಮರಣಿಕೆ, ಪ್ರಮಾಣಪತ್ರ ಮತ್ತು 1 ಲಕ್ಷ ರೂ. ನಗದು ಬಹುಮಾನ ಪ್ರಶಸ್ತಿ ಒಳಗೊಂಡಿದೆ.

2023-24ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು ಹೆಸರಿನ ಗಡಿನಾಡ ಚೇತನ ಪ್ರಶಸ್ತಿಗೆ ಕೇರಳದ ಕಾಸರಗೋಡಿನ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನ ಪ್ರಶಸ್ತಿಗೆ ಬೀದರ್‌ನ ಪಂಚಾಕ್ಷರಿ ಪುಣ್ಯಶೆಟ್ಟಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಹೆಸರಿನ ಪ್ರಶಸ್ತಿಗೆ ಬೆಳಗಾವಿಯ ಬಿ.ಎಸ್.ಗವಿಮಠ ಭಜನರಾಗಿದ್ದಾರೆ ಎಂದು ವಿವರಿಸಿದರು.

Advertisement

2024-25ನೇ ಸಾಲಿನ ಗಡಿನಾಡು ಚೇತನ ಪ್ರಶಸ್ತಿಗಳಿಗೆ ಹೊರರಾಜ್ಯದ ನಾಲ್ಕು ಸಂಸ್ಥೆಗಳ ಆಯ್ಕೆ ಮಾಡಲಾಗಿದೆ. ಡಾ.ಚನ್ನಬಸವ ಪಟ್ಟದ್ದೇವರು ಹೆಸರಿನ ಪ್ರಶಸ್ತಿಗೆ ಗುಜರಾತ್ ರಾಜ್ಯದ ಅಹ್ಮದಾಬಾದ್‌ನ ಕನ್ನಡ ಸಂಘ, ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನ ಪ್ರಶಸ್ತಿಗೆ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ  ರೈ ಹೆಸರಿನ ಪ್ರಶಸ್ತಿಗೆ ಕೇರಳದ ಕಾಸರಗೋಡಿನ ಪೆರಡಾಲದ ಮಹಾಜನ ವಿದ್ಯಾಭಿವರ್ಧಕ ಸಂಘವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next