Advertisement

ಅಮ್ಮನ ಪ್ರೀತಿ ಸಾಕ್ಷಾತ್ಕರಿಸಿದ ಅವ್ವ 

12:30 AM Mar 08, 2019 | |

ಕೊಡವೂರಿನಲ್ಲಿ ಸುಮನಸಾ ಕೊಡವೂರು ತಂಡದವರಿಂದ ಪ್ರದರ್ಶಿತವಾದ ನಾಟಕ “ಅವ್ವ’ ಮಕ್ಕಳ ಮೇಲೆ ಅಮ್ಮನ ಪ್ರೀತಿಯ ನೈಜ ಚಿತ್ರಣವನ್ನು ಪರಿಚಯ ಮಾಡಿಸಿತು. ಡಾ| ಪದ್ಮಿನಿ ನಾಗರಾಜು ಅವರ ನಾಟಕವನ್ನು ರಂಗಕ್ಕಿಳಿಸಿದವರು ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್‌. ಪ್ರಮುಖ ಪಾತ್ರಧಾರಿ “ಅವ್ವ’ನ ಮಾತಿನಲ್ಲೇ ಹೇಳುವುದಾದರೆ ಕಚ್ಚೆ ಹರುಕ ಗಂಡ ನಂದಿಬಸಪ್ಪನ ಪರಸಂಗ, ಬೀಡಿ ಸೇವನೆ ಮುಂತಾದ ದುಶ್ಚಟಗಳ ಹೊರತಾಗಿಯೂ ಅವನೊಂದಿಗೆ ಸಂಸಾರ ಮಾಡುತ್ತಾ ಮಕ್ಕಳನ್ನು ಸಲಹಿ, ಅವರ, ಅದರಲ್ಲೂ ಮುಖ್ಯವಾಗಿ ಮಗ ಲಂಕೇಶನ ವಿದ್ಯಾಭ್ಯಾಸಕ್ಕಾಗಿ ಮಗ ವಿದ್ಯಾವಂತನಾಗಿ ಊರಿಗೆ ಹೆಸರು ತರಬೇಕೆಂದು, ಅದಕ್ಕಾಗಿ ತನ್ನ ಸರ್ವಸ್ವವನ್ನು ಧಾರೆಯೆರೆಯಲು ಸಿದ್ಧಳಾಗಿರುವ ಮಮತಾ ಮೂರ್ತಿಯಾಗಿ ಕಂಡು ಬರುತ್ತಾಳೆ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಉನ್ನತ ವಿದ್ಯಾಭ್ಯಾಸದವರೆಗೂ ಅವನೆಲ್ಲ ಹಂಬಲಗಳಿಗೆ ಇಂಬು ನೀಡುತ್ತಾಳೆ. ಬೇರೆ ಯಾವ ವಿಷಯದಲ್ಲೂ ಗಂಡನಿಗೆ ಎದುರಾಡದ “ಅವ್ವ’ ಮಗನ ವಿಷಯ ಬಂದಾಗ ಚಾಮುಂಡಿಯಾಗಿ ಗಂಡನನ್ನೆ ಮಣಿಸುವ ತಾಕತ್ತು ಮಾತೃ ಹೃದಯದ ಮಿಡಿತಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುಂದೆ ಮಗ ಉದ್ಯೋಗಸ್ಥನಾಗಿ ಮನೆಗೆ ಮರಳಿದಾಗ ಊರಿನವರನ್ನೆಲ್ಲಾ ಕರೆದು ಸಂಭ್ರಮಿಸುವ ಅಪ್ಪ ಒಂದೆಡೆಯಾದರೆ ತನ್ನ ಮಗಳ ಮಗಳನ್ನೇ ಮದುವೆಯಾಗಬೇಕೆಂದು ಒತ್ತಾಯಿಸುವ “ಅವ್ವ’ನ ಮಾತು ಆಕೆಯ ತಾಯಿ ಮಮತೆಯ ಮತ್ತೂಂದು ಮಗ್ಗುಲನ್ನು ತೆರೆದಿಡುತ್ತದೆ. ಮಗನಿಗೆ ಈ ಮಾತು ಒಪ್ಪಿಗೆ ಇಲ್ಲದಿದ್ದರೂ ಅಷ್ಟೊಂದು ಸಬಲೆಯಾಗಿರದ ಮಗಳ ಬಾಳು ಹಸನಾಗಲೆಂದು ಬಯಸುವ ತಾಯಿಯ ಅಸಹಾಯಕತೆ ಈ ಒತ್ತಾಯಪೂರ್ವಕ ಬೇಡಿಕೆಯಲ್ಲಿ ಅಡಗಿದೆ. ಅಂತಿಮವಾಗಿ ಮಗ ಉದ್ಯೋಗಸ್ಥನಾಗಿ ನೆಲೆ ಕಂಡುಕೊಳ್ಳುವಂತಾದಾಗ ವಯೋಸಹಜ ಕಾರಣದಿಂದಾಗಿ ಭೂಮಿಯಲ್ಲಿ ನೆಲೆ ಕಳೆದುಕೊಂಡು ಗತ ಪ್ರಾಣಳಾಗುವ “ಅವ್ವ’ ಚಿರಕಾಲ ನೆನಪಿನಲ್ಲಿ ಉಳಿಯುತ್ತಾಳೆ.

Advertisement

“ಅವ್ವ’ ದೇವೀರಿಯ ಸುತ್ತ ಹೆಣೆಯಲಾದ ಕಥೆಯಾದರೂ ನಾಟಕದ ಮಧ್ಯೆ ಜಾತ್ರೆಯ ಸನ್ನಿವೇಶ, ಪ್ರಾಥಮಿಕ ಶಾಲಾ ವಾತಾವರಣ, ಮುಂದೆ ಕಾಲೇಜು ವಿದ್ಯಾಭ್ಯಾಸದಲ್ಲಿ ಹದಿಹರೆಯದ ಸುಮಧುರ ಕಂಪನ ಮುಂತಾದ ವಿಷಯಗಳು ರಂಜನೀಯವಾಗಿ ಮೂಡಿ ಬಂದು ಒಟ್ಟಂದವನ್ನು ಹೆಚ್ಚಿಸಿತು. ದೇವೀರಿ (ಅವ್ವ) ಪಾತ್ರಧಾರಿ ಕು| ವಿದ್ಯಾದಾಯಿನಿಯ ಪ್ರೌಢ ಅಭಿನಯ ಶ್ಲಾಘನೀಯ. ಅದರಲ್ಲೂ ಜಾತ್ರೆಗೆ ಹೋಗಿ ಬಂದು ಒಂದೊಂದೇ ವಸ್ತುವನ್ನು ಆಣೆ ಲೆಕ್ಕದಲ್ಲಿ ತೆಗೆದಿರಿಸಿ ಸಂಭ್ರಮಿಸುವ ಪರಿ, ಮಗನ ವಿದ್ಯಾಭ್ಯಾಸಕ್ಕೆ ಮಿಡುಕುವ ಮನ, ಅವನಿಗಾಗಿ ವಿಶೇಷ ಅಡುಗೆ ಮಾಡಿ ತೋರುವ ಪ್ರೀತಿ, ಕೊನೆಗೆ ತಾನು ಸಾಯುವ ಕ್ಷಣದಲ್ಲಿ ಮಗ ಹಾಗೂ ಮಗಳ ಮೇಲೆ ಪ್ರಕಟ ಪಡಿಸುವ ಮಮಕಾರವನ್ನು ನಾಜೂಕಾಗಿ, ನೈಜವಾಗಿ ಅಭಿನಯಿಸಿದ ಪರಿ ಅದ್ಭುತ. ಅಂತೆಯೇ ಮಗ ಲಂಕೇಶನ ಪಾತ್ರದಲ್ಲಿ ಮಿಂಚಿದ ಅಕ್ಷತ್‌ ಅಮೀನ್‌ ಹಾಗೂ ದೇವೀರಿಯ ಗಂಡ ತೆವಲುಗಳ ದಾಸನಾಗಿ ನಂದಿಬಸಪ್ಪ ಪಾತ್ರ ವಹಿಸಿದ ಯೋಗೀಶ್‌ ಕೊಳಲಗಿರಿ ಅಭಿನಯ ಮನಮುಟ್ಟುತ್ತದೆ. 

 ಅಬ್ಬರವಿಲ್ಲದ ಹಿತಮಿತವಾದ ಹಿನ್ನಲೆ ಸಂಗೀತ ಬಳಸಿಕೊಂಡಿದ್ದರೆ ಪೂರಕವಾಗಿರುತ್ತಿತ್ತು. ಕೆಲವನ್ನು ಪರಿಕರ ಬಳಸಿ ಮತ್ತೆ ಹಲವನ್ನು ಮೂಕಾಭಿನಯದ ಮೂಲಕ ವ್ಯಕ್ತ ಪಡಿಸುವ ಬದಲಾಗಿ ಎಲ್ಲವನ್ನೂ ಅಂಗಾಭಿನಯದ ಮುಖಾಂತರ ಪ್ರಸ್ತುತ ಪಡಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಬೆಂಕಿ ಹಚ್ಚದ ಬೀಡಿ, ಮೈ ತುರಿಸುವ ಪುಡಿ ಸಂಗ್ರಹಣೆ ಮುಂತಾದವು. ನಾಟಕ ಸಾಮಾನ್ಯ ಕಥೆ ಹೊಂದಿರುವುದರಿಂದ ಇನ್ನಷ್ಟು ಪರಿಣಾಮಕಾರಿ ಸೂತ್ರಗಳನ್ನು ಅಳವಡಿಸಿ ನಾಟಕದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. 

ಜನನಿ ಭಾಸ್ಕರ, ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next