ಧಾರವಾಡ: ಬಾಲ್ಯವಿವಾಹದ ಪಿಡುಗು ಹಾಗೂ ದೌರ್ಜನ್ಯಗಳಿಂದ ಮುಕ್ತಗೊಳಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಜಿಪಂ ಸಿಇಒ ಆರ್. ಸ್ನೇಹಲ್ ಹೇಳಿದರು. ಸರಕಾರಿ ವೀಕ್ಷಣಾಲಯ ಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ‘ಬಾಲ್ಯ ವಿವಾಹ ತಡೆಯುವಲ್ಲಿ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯಗಳು’ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಲ್ಯವಿವಾಹಗಳ ಕುರಿತು ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು. 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಹಾಗೂ ನಿರಂತರವಾಗಿ ಶಾಲೆಗೆ ಗೈರಾಗುವ ವಿದ್ಯಾರ್ಥಿನಿಯರ ಮದುವೆ ಮಾಡಲಾಗಿದೆಯೇ ಎಂಬ ಬಗ್ಗೆ ಜಾಗೃತಿ ವಹಿಸಬೇಕು. ಮಗುವಿನ ಮಾನಸಿಕ ಹಾಗೂ ದೈಹಿಕ ತೊಂದರೆಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧಿಧೀಶ ಚಿನ್ನಣ್ಣವರ ಆರ್. ಎಸ್. ಮಾತನಾಡಿ, ಬಾಲ್ಯವಿವಾಹ ತಡೆಗಟ್ಟಲು ಕಾನೂನು ರೂಪಿಸಿ ಬಾಲ್ಯವಿವಾಹ ನಿಷೇಧಾಧಿಕಾರಿಗಳ ನೇಮಕ ಮಾಡಲಾಗಿದೆ. ಇದು ಕೆಲ ಇಲಾಖೆಗಳ ಕೆಲಸವಲ್ಲ, ಬಾಲ್ಯ ವಿವಾಹ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ. ದೇಶದಲ್ಲಿ ಈಗಲೂ ಸಾಕಷ್ಟು ಬಾಲ್ಯವಿವಾಹಗಳು ನಡೆಯುತ್ತಿವೆ. ಬಾಲ್ಯ ವಿವಾಹ ಮಾಹಿತಿ ಬಂದ ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿ ಕಾರಿ ಡಾ| ಆರ್.ಎಂ. ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿ ಅನ್ನಪೂರ್ಣಾ ಸಂಗಳದ, ಹಿರಿಯ ನ್ಯಾಯವಾದಿ ಎಚ್.ಎಚ್. ಶಿವಳ್ಳಿ ವೇದಿಕೆ ಮೇಲಿದ್ದರು.
ತಹಶೀಲ್ದಾರ ನವೀನ ಹುಲ್ಲೂರ, ಬಸವರಾಜ ಮೆಳವಂಕಿ, ಪ್ರಶಾಂತ ನಾಯಕ ಇದ್ದರು. ಶ್ವೇತಾ ಕಿಲ್ಲೇದಾರ ಪ್ರಾರ್ಥಿಸಿದರು. ಡಾ| ಎಚ್.ಎಚ್. ಕುಕನೂರ ಸ್ವಾಗತಿಸಿದರು. ಜಯರಾಜ ನಿರೂಪಿಸಿದರು. ದೀಪಾ ಜೇವೂರ ವಂದಿಸಿದರು.