ಸುಳ್ಯ: ಸುಳ್ಯ ಭಾಗದಲ್ಲಿ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರನಾಗಿ, ಅವಿನಾಶ್ ಮೋಟಾರ್ಸ್ ನ ಮಾಲಕರಾಗಿ ಖ್ಯಾತಿಯಾಗಿದ್ದ ನಾರಾಯಣ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಇಂದು (ಮಂಗಳವಾರ )ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಅವಿನಾಶ್ ರೈಯವರು ಅರಂಬೂರಿನ ತನ್ನ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದ ಹಿನ್ನಲೆಯಲ್ಲಿ ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45 ರ ಸುಮಾರಿಗೆ ಅವರು ಅವಿನಾಶ್ ಮೋಟಾರ್ಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತನ್ನ ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ಅವರು ಇಂದು ಬೆಳಿಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು. ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದಾಗ ಅವರು ಫೋನ್ ತೆಗೆದಿರಲಿಲ್ಲ. ಈ ಹಿನ್ನಲೆಯಲ್ಲಿ ಫಿಟ್ಟರ್‌ಗೆ ಕರೆ ಮಾಡಿ ತಕ್ಷಣ ಹೋಗುವಂತೆ ತಿಳಿಸಿದರು. ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು.
ಬಳಿಕ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಲಾಯಿತು. ಮೃತದೇಹದ ಪಕ್ಕದಲ್ಲಿ ಡೆತ್‌ನೋಟ್ ಕೂಡಾ ಪತ್ತೆಯಾಗಿದ್ದು, ಅಸೌಖ್ಯದ ಹಿನ್ನಲೆಯಲ್ಲಿ ತನಗೆ ಬದುಕಲು ಕಷ್ಟವಾಗುತ್ತಿದೆ, ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಅವರು ಅದರಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ತನ್ನ ಮರಣದ ಕಾರಣದಿಂದ ಬಸ್‌ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು ಎಂದೂ ಅದರಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
ಮೃತ ನಾರಾಯಣ ರೈಗಳು ಪತ್ನಿ ವಿಜಯಾ ರೈ, ಪುತ್ರರಾದ ಅವಿನಾಶ್ ರೈ, ಅಭಿಲಾಷ್ ರೈಯವರನ್ನು ಅಗಲಿದ್ದಾರೆ.
ಪೇರಾಲು ಪೂಜಾರಿಮೂಲೆ ರಾಮಣ್ಣ ರೈ ಮತ್ತು ಸೀತಮ್ಮ ರೈ ದಂಪತಿಯ ಪುತ್ರನಾದ ನಾರಾಯಣ ರೈಗಳು ಪ್ರೌಢ ಶಿಕ್ಷಣದ ಬಳಿಕ ಮಂಗಳೂರಿನಲ್ಲಿ ಖಾಸಗಿ ಉದ್ಯೋಗ ನಡೆಸಿ ಬಳಿಕ ಸ್ವಲ್ಪ ಕಾಲ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದು ತಾವೇ ಬಸ್ ಖರೀದಿಸಿ ಗ್ರಾಮೀಣ ಭಾಗಗಳಿಗೆ ಸಂಚಾರ ಆರಂಭಿಸಿದರು. ಇದು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಯಿತು. ಹಾಗೇ ಉದ್ಯಮದಲ್ಲಿ ಬೆಳೆದ ಅವರು ಒಂದು ಕಾಲದಲ್ಲಿ 18 ಬಸ್‌ಗಳ ಒಡೆಯರಾಗಿದ್ದರು. ಬೆಂಗಳೂರು, ಮಂಗಳೂರುಗಳಿಗೂ ಬಸ್ ಓಡಾಟ ನಡೆಸಿದ್ದರು. ಆದರೆ ವರ್ಷ ಕಳೆದಂತೆ ಈ ಉದ್ಯಮ ಅಷ್ಟು ಲಾಭದಾಯಕವಾಗಿಲ್ಲದ ಕಾರಣ ಉಳಿದ ಬಸ್‌ಗಳನ್ನು ನಿಲ್ಲಿಸಿ ಗ್ರಾಮೀಣ ಪ್ರದೇಶಗಳ ಬಸ್ ಸಂಚಾರವನ್ನಷ್ಟೇ ನಡೆಸುತ್ತಿದ್ದರು.
ಕೆಲವು ತಿಂಗಳ ಹಿಂದೆ ಅವರು ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿದ್ದರು. ನಿಧಾನಕ್ಕೆ ಚೇತರಿಸಿಕೊಂಡ ಅವರು ಕಾರಿನಲ್ಲಿ ಸುಳ್ಯಕ್ಕೆ ಬಂದು ಹೋಗುತ್ತಿದ್ದರು.
ನಾರಾಯಣ ರೈಗಳ ಹಠಾತ್ ಅಗಲಿಕೆ ಅವರ ಸಿಬ್ಬಂದಿ ವರ್ಗದವರಲ್ಲಿ ಮತ್ತು ಸುಳ್ಯದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ.