Advertisement

ಅವರದೊಂದು ದಾರಿ, ದಾರಿಯಲ್ಲೊಂದು ನೆನಪು!

03:45 AM Feb 21, 2017 | |

ಪದವಿಯಲ್ಲಿ ಎಷ್ಟೋ ಸವಿಯಾದ ನೆನಪುಗಳು ಜೀವನದುಸಿರಾಗಿರುತ್ತವೆ. ಕಾಲೇಜಿಗೆ ಹೋಗುವ ಬಸ್‌ನಲ್ಲಿ, ಬಸ್‌ ಸ್ಟ್ಯಾಂಡಿನಲ್ಲಿ, ಕಾಲೇಜು ರಸ್ತೆಯಲ್ಲಿ ನಡೆಯುವಾಗ, ಹಲವೆಡೆ ಆಗೊಮ್ಮೆ ಈಗೊಮ್ಮೆ ಹಳೆಯ ಗೆಳೆಯರೊಂದಿಗೆ ಅಪರೂಪದ ಭೇಟಿಗಳು ಆಗುತ್ತಿರುತ್ತವೆ. ಅದೂ- ಇದೂ  ಅಂತ ಮಾತನಾಡುತ್ತಾ ಜೊತೆಗೇ ಚಹಾ- ತಿಂಡಿ ಸೇವಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೇವೆ. ಕಳೆದುಹೋದ ದಿನಗಳು- ಕ್ಷಣಗಳು ನೆನಪಾದಗಲೊಮ್ಮೆ ಮನಸಲ್ಲಿ ಜೇನು ಹೊಳೆ ಹರಿದಂತಾಗಿ, ಮುಂಗಾರು ಮಳೆಯಲ್ಲಿ ನೆನೆದಂತಾಗುತ್ತದೆ. ಕಾಲೇಜಿನಲ್ಲಿ ಬಂಕ್‌ ಹೊಡೆದ ಕ್ಲಾಸುಗಳಿಗೆ ಲೆಕ್ಕವಿಲ್ಲ. ಲೆಕ್ಚರರ್‌ ಪಾಠ ಮಾಡುವಾಗ ನಮ್ಮ ಪೋಕರಿ ಬುದ್ಧಿ ತೋರಿಸಿ ಅವರಿಂದ ಬೈಸಿಕೊಂಡು ಕ್ಲಾಸ್‌ನಿಂದ ಹೊರ ಹಾಕಿಸಿಕೊಂಡು ಅವರ ವಕ್ರದೃಷ್ಟಿಗೆ ಪಾತ್ರರಾದ ಉದಾಹರಣೆಗಳುಂಟು. ಅಬ್ಟಾ… ಆ ದಿನಗಳನ್ನು ನೆನಪಿಸಿಕೊಂಡರೆ ಮತ್ತೂಮ್ಮೆ ಪದವಿಯನ್ನು ಕಲಿಯಬೇಕೆನಿಸುತ್ತದೆ.     

Advertisement

ಪದವಿಯಲ್ಲಿ ನಮ್ಮದೊಂದು ಪುಟ್ಟ ಗ್ಯಾಂಗ್‌ ಇತ್ತು. ಅನು, ಶೋಭಾ, ಶಾಣು, ಗಿರಿಜಾ, ಕುಮಾರ,  ಅನಿಲ್‌ ಇವರೆಲ್ಲಾ ಗ್ಯಾಂಗ್‌ ಸದಸ್ಯರು. ಒಟ್ಟಿಗೆ ಅಲೆಯೋದು, ಒಟ್ಟಿಗೆ ತಿನ್ನೋದು, ಒಟ್ಟಿಗೆ ಬೈಸಿಕೊಳ್ಳೋದು… ನಮ್ಮ ಪಾಲಿಗೆ ಅಭ್ಯಾಸವಾಗಿ ಹೋಗಿತ್ತು. ವಾರಕ್ಕೊಮ್ಮೆ ಮನೇಲಿ ಕುಂಟು ನೆಪ ಹೇಳಿ ಕಿರುಪ್ರವಾಸ ಕೈಗೊಂಡ ನೆನಪುಗಳನ್ನ ಮರೆಯುವುದು ಹೇಗೆ?      

ತಂಡದಲ್ಲಿ ಯಾರದಾದರೂ ಬರ್ತ್‌ಡೇ ಇದ್ದರಂತೂ ಮುಗಿಯಿತು… ಅವತ್ತು ಅವರ ಪರ್ಸು ಖಾಲಿ ಆಗುವಂತೆ ಜಾಲಾಡಿಬಿಡುತ್ತಿದ್ದೆವು. ಆದರೆ ಅವರ ಹುಟ್ಟಿದ ಹಬ್ಬವನ್ನು ನೆನಪಿಟ್ಟುಕೊಳ್ಳುವಂತೆ ಕಾಣಿಕೆಯೊಂದನ್ನು ನೀಡಿ ಶುಭ ಹಾರೈಸಲು ಮರೆಯುತ್ತಿರಲಿಲ್ಲ. ನಮ್ಮ ನಡುವೆ ನಿಷ್ಕಲ್ಮಶವಾದ ಸ್ನೇಹವಿತ್ತು. ಅದರಲ್ಲಿ ಹಿತಮಿತವಾದ ಕಿತ್ತಾಟವೂ ಇತ್ತು. ಜಗಳ ಆಡಿದರೂ ಮರುಕ್ಷಣವೇ ಅದನ್ನು ಮರೆಸುವ ಕಾರ್ಯವನ್ನು ಯಾರಾದರೂ ಮಾಡುತ್ತಿದ್ದರು. ಜಗಳವನ್ನು ಬೆಳೆಯಗೊಡುತ್ತಿರಲಿಲ್ಲ. ಹೀಗೆ ನಮ್ಮ ಸ್ನೇಹದ ಸೇತುವೆ ಪದವಿಯ ಅವಧಿ ಮುಗಿಯುತ್ತಾ ಬಂದಂತೆ ಸಣ್ಣಗೆ ಸವೆಯುತ್ತಾ ನೆನಪಿನ ಅಂಗಳವನ್ನು ಹೊಕ್ಕಿದೆ. ಈಗ ಎಲ್ಲರದ್ದೂ ಒಂದೊಂದು ದಾರಿ, ಆ ದಾರಿಯಲ್ಲೊಂದು ಸವಿನೆನಪು. ಅಚಾನಕ್ಕಾಗಿ ಎಲ್ಲಾದರೂ ಭೇಟಿಯಾದರೆ ಹಳೆಯ ಸವಿನೆನಪುಗಳ ಮೆಲುಕು ಇದ್ದೆ ಇರುತ್ತದೆ…

– ಮುದಕನಗೌಡ ಎನ್‌. ಪಾಟೀಲ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next