Advertisement

Congress; ಸ್ನೇಹ ಶಾಶ್ವತ, ಮುನಿಸು ಕ್ಷಣಿಕ: ಸಿದ್ದರಾಮಯ್ಯ-ಶ್ರೀನಿವಾಸ್ ಪ್ರಸಾದ್ ಸಮಾಗಮ

12:44 AM Apr 14, 2024 | Vishnudas Patil |

ಮೈಸೂರು: ರಾಜಕೀಯ ನಿವೃತ್ತಿ ಘೋಷಿಸಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಜಯಲಕ್ಷ್ಮಿಪುರಂ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಇದು ರಾಜಕೀಯ ಎದುರಾಳಿಗಳಿಬ್ಬರು ಏಳು ವರ್ಷಗಳ ನಂತರ ಜತೆಯಾಗಿ ಕಾಣಿಸಿಕೊಂಡಿರುವುದಕ್ಕೆ ಸಾಕ್ಷಿಯಾಯಿತು ಮತ್ತು ರಾಜಕೀಯ ಲೆಕ್ಕಾಚಾರಗಳಿಗೂ ಕಾರಣವಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರು ”ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಪರಸ್ಪರ ಎದುರಾಳಿಗಳಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ನಾನು ಇಂದು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದೆವು. ಶ್ರೀನಿವಾಸ ಪ್ರಸಾದ್ ಅವರ ಹೋರಾಟದ ಬದುಕು ಮತ್ತು ಜನಪರ ಕಾಳಜಿಯ ಬಗ್ಗೆ ನಾನು ಸದಾ ಗೌರವ ಇಟ್ಟುಕೊಂಡವನು. “ಸ್ನೇಹ ಶಾಶ್ವತ, ಮುನಿಸು ಕ್ಷಣಿಕ’’ ಎಂದು ನಂಬಿರುವ ನನಗೆ ಇಂದು ಅದರ ಪ್ರತ್ಯಕ್ಷ ಅನುಭವವಾಯಿತು. ರಾಜಕೀಯದಿಂದ ನಿವೃತ್ತರಾದರೂ ಶ್ರೀನಿವಾಸ ಪ್ರಸಾದ್ ಅವರು ಹೊಸ ತಲೆಮಾರಿಗೆ ಮಾರ್ಗದರ್ಶಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರಬೇಕು. ಇದಕ್ಕೆ ಬೇಕಾದ ಆರೋಗ್ಯ ಮತ್ತು ಆಯುಷ್ಯ ಅವರಿಗೆ ಒದಗಿ ಬರಲಿ ಎಂದು ಹಾರೈಸುತ್ತೇನೆ” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರವನ್ನು ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ ಅವರು ನಾನಾ ರಣತಂತ್ರಗಳನ್ನು ಹಣೆದಿದ್ದು, ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ತನ್ನದೇ ಆದ ಪ್ರಾಬಲ್ಯವಿದೆ. ಅವರ ಅಳಿಯನಿಗೆ ಬಿಜೆಪಿ ಟಿಕೆಟ್ ಕೈತಪ್ಪಿದುದರ ಬಗ್ಗೆ ಅಸಮಾಧಾನವೂ ಇದೆ. ಚಾಮರಾಜನಗರ ಎಸ್ ಸಿ ಮೀಸಲು ಕ್ಷೇತ್ರದ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಧೀರಜ್ ಪ್ರಸಾದ್(ಶ್ರೀನಿವಾಸ್ ಪ್ರಸಾದ್ ಅವರ ಅಳಿಯ) ಅವರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಚಾಮರಾಜನಗರದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಮತ್ತು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಸ್. ಬಾಲರಾಜ್ ಅವರ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

ಮೈಸೂರು ಸಮಾವೇಶಕ್ಕೆ ಬರುತ್ತಾರೆ: ಬಿಎಸ್‌ವೈ
ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ-ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಚಳ್ಳಕೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಶ್ರೀನಿವಾಸ ಪ್ರಸಾದ್‌ ನಮ್ಮ ದೊಡ್ಡ ಶಕ್ತಿ. ಖಂಡಿತವಾಗಿಯೂ ನಮಗೆ ಸಹಕಾರ ಕೊಡುತ್ತಾರೆ. ರವಿವಾರ ನಾನು ಮೈಸೂರಿಗೆ ಹೋದ ಬಳಿಕ ಅವರ ಜತೆ ಮಾತನಾಡುತ್ತೇನೆ. ಅವರ ಅಸಮಾಧಾನ ಸರಿಪಡಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next