Advertisement

ಫೆ.23ಕ್ಕೆ ಆವಣಿ ಜಾತ್ರೆ; ಅದ್ಧೂರಿ ಆಚರಣೆಗೆ ಸಿದ್ಧತೆ

08:51 PM Jan 29, 2020 | Lakshmi GovindaRaj |

ಮುಳಬಾಗಿಲು: ತಾಲೂಕಿನ ಆವಣಿ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ಫೆ.23ರಂದು ವಿಜೃಂಭಣೆಯಿಂದ ಆಚರಣೆ ಮಾಡಲು ಗ್ರಾಮಸ್ಥರು ಮತ್ತು ಅಧಿಕಾರಿಗಳು ಸಹಕಾರ ನೀಡಬೇಕೆಂದು ತಹಶೀಲ್ದಾರ್‌ ರಾಜಶೇಖರ್‌ ಮನವಿ ಮಾಡಿದರು. ತಾಲೂಕಿನ ಆವಣಿ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರತಿ ಶಿವರಾತ್ರಿ ಹಬ್ಬದ ಮರು ದಿನ ನಡೆಯುವ ಬ್ರಹ್ಮ ರಥೋತ್ಸವ ಮತ್ತು ಜಾತ್ರೆಗೆ ಜಾನುವಾರುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದರಿಂದ ಉತ್ತಮವಾಗಿ ನಡೆಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕೆಂದು ಕೋರಿದರು.

Advertisement

ತಹಶೀಲ್ದಾರ್‌ ನಡುವೆ ಗೊಂದಲ: ನೆರೆದಿದ್ದ ಸ್ಥಳೀಯರು ಕೆಲವು ವರ್ಷಗಳಿಂದ ಮೂಲ ಸೌಕರ್ಯಗಳಾದ ನೀರು ಹಾಗೂ ಮತ್ತಿತರ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ತಾಪಂ ಸದಸ್ಯ ರವಿಶಂಕರ್‌ ಆರೋಪಿಸಿದರು. ಆಗ ತಹಶೀಲ್ದಾರ್‌ ನಡುವೆ ಮಾತಿನ ಚಕಮಕಿ ಉಂಟಾಗಿ, ಸಭೆ ಗೊಂದಲಮಯವಾಯಿತು. ಮಧ್ಯ ಪ್ರವೇಶಿಸಿದ ಗ್ರಾಮಾಂತರ ಪಿ.ಎಸ್‌.ಐ ಅನಿಲ್‌ಕುಮಾರ್‌, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಈ ಬಾರಿ ಸರಿಪಡಿಸಲಾಗುವುದೆಂದು ಹೇಳಿದಾಗ ಸಭೆ ಸುಗಮವಾಗಿ ನಡೆಯಿತು.

ನೀರಿನ ಸೌಲಭ್ಯ ಕಲ್ಪಿಸಿ: ಕೀಲುಹೊಳಲಿ ಗ್ರಾಮದಿಂದ ಬರುವ ಸಲ್ಲಾಪುರಮ್ಮ ದೇವಿ ಉತ್ಸವ ಬರುವ ದಾರಿಯಲ್ಲಿ ಹಳ್ಳ ದಿನ್ನೆಗಳಿಂದ ಕೂಡಿದೆ. ಇದನ್ನು ಅರಣ್ಯ ಇಲಾಖೆಯವರು ಸಮದಟ್ಟು ಮಾಡಿಕೊಡಬೇಕು. ಜಿಪಂನಿಂದ 4, ಗ್ರಾಪಂನಿಂದ 2 ಮೊಬೈಲ್‌ ಶೌಚಾಲಯ ಆಯಾ ಕಟ್ಟಿನ ಪ್ರದೇಶದಲ್ಲಿ ಇಡಲಾಗುವುದು, ಕುಡಿಯುವ ನೀರಿನ ವಿಚಾರ ಈಗಾಗಲೇ ಕೊಳವೆ ಬಾವಿಗಳಿಂದ ನೀರು ಸಿಗುತ್ತಿದ್ದು, ಯಾವುದೇ ತೊಂದರೆಯಿಲ್ಲವೆಂದಾಗ 4-5 ಕೊಳವೆಬಾವಿ ಕೊರೆಯಿಸಿ ನೀರಿನ ಅನುಕೂಲ ಕಲ್ಪಿಸಲು ತಹಶೀಲ್ದಾರ್‌ ತಿಳಿಸಿದರು.

ಸೂಕ್ತ ಭದ್ರತೆ ಕೈಗೊಳ್ಳಿ: ರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಜಾತ್ರೆಯಲ್ಲಿ 15 ಪೊಲೀಸ್‌ ತಂಡಗಳನ್ನು ರಚಿಸಿ ಸರಗಳ್ಳತನ, ಜೇಬುಗಳ್ಳತನ ಮುಂತಾದ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಬೇಕೆಂದು ಪೊಲೀಸರಿಗೆ ಸೂಚಿಸಿದರು. ಅಬಕಾರಿ ಇಲಾಖೆಯಿಂದ 10 ಸಿ.ಸಿ ಕ್ಯಾಮರಾ ಅಳವಡಿಸಿ ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಳಲಾಗುವುದು. ಅಲ್ಲದೇ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ಹಾಜರಿರಬೇಕೆಂದು ಆರೋಗ್ಯಾಧಿಕಾರಿ ಡಾ.ವರ್ಣಶ್ರೀಗೆ ಸೂಚಿಸಿದರು.

24 ಗಂಟೆ ವಿದ್ಯುತ್‌ ನೀಡಿ: ಆವಣಿ ಜಾತ್ರೆಗೆ ಸೇರುವ ಯಳಗೊಂಡಹಳ್ಳಿಯಿಂದ ಬರುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಕೂಡಲೇ ಮುಚ್ಚಿ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಲೋಕೋಪಯೋಗಿ ಎಇಇ ಗೋಪಾಲ್‌ಗೆ ಸೂಚಿಸಿದರು. ಆವಣಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೋರಣಗಳಂತೆ ನೇತಾಡುತ್ತಿರುವ ವಿದ್ಯುತ್‌ ತಂತಿ ಸರಿಪಡಿಸಿ ಜಾತ್ರೆ ನಡೆಯುವಷ್ಟು ದಿನ 24 ಗಂಟೆ ವಿದ್ಯುತ್‌ ನೀಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನೀರು ಪೂರೈಸಿ: ಜಾತ್ರೆಯಲ್ಲಿ ತೊಟ್ಟಿಗಳನ್ನು ನಿರ್ಮಿಸಿರುವುದರಿಂದ ಅವುಗಳಿಗೆ ನಿರಂತರವಾಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಮೂಲಕ ಜನರು/ಜಾನುವಾರುಗಳಿಗೆ ನೀರಿನ ಕೊರತೆಯುಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ವೈದ್ಯರ ನಿಯೋಜಿಸಿ: ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಜಾನುವಾರು ಬರುವುದರಿಂದ ಜಾತ್ರೆಯಲ್ಲಿ ಯಾವುದೇ ರೋಗ ರುಜಿನೆಗಳು ಹರಡದಂತೆ ಸಾಕಷ್ಟು ಪಶು ವೈದ್ಯರನ್ನು ನಿಯೋಜಿಸಿ, ಸೂಕ್ತ ಮುಂಜಾಗ್ರತೆ ಕ್ರಮಕೈಗೊಳ್ಳಬೇಕೆಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ತುಳಸಿರಾಂಗೆ ಸೂಚಿಸಿದರು. ಮನರಂಜನೆಗಾಗಿ ವಿಶೇಷವಾಗಿ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಗಾರುಡಿಗೊಂಬೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಉಪ ತಹಶೀಲ್ದಾರ್‌ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಬ್ರಮಣಿ, ಜಿಪಂ ಸದಸ್ಯ ಕೃಷ್ಣಪ್ಪ, ತಾಪಂ ಸದಸ್ಯ ರವಿಶಂಕರ್‌, ದೇವಾಲಯದ ಪ್ರಧಾನ ಅರ್ಚಕ ರವಣಪ್ಪ, ಸುನೀಲ್‌, ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ, ಕನ್ವೀನರ್‌ಗಳಾದ ತಮ್ಮಣ್ಣಗೌಡ, ರಾಮಚಂದ್ರಪ್ಪ, ಕೀಲುಹೊಳಲಿ ಚಂಗಲರಾಯಪ್ಪ, ಪಿಡಿಒ ಮಂಗಳಾಂಬ, ಆವಣಿ ಗೋಪಿ, ಪಿಡಬ್ಲೂಡಿ ಗೋಪಾಲ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಇದ್ದರು.

ಊ.ಮಿಟ್ಟೂರು ಗ್ರಾಪಂ ವ್ಯಾಪ್ತಿಯ ಬಟ್ಲಬಾವನಹಳ್ಳಿ ಗ್ರಾಮದಲ್ಲಿ ಕಳೆದ 2 ತಿಂಗಳಿಂದ ಕುಡಿಯುವ ನೀರಿನ ಅಭಾವ ಉಂಟಾಗಿದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಖಾಲಿ ಕೊಡಗಳೊಂದಿಗೆ ಆಗಮಿಸಿದ ಮಹಿಳೆಯರು, ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್‌ಗೆ ಮುತ್ತಿಗೆ ಹಾಕಿದರು. ಶೀಘ್ರದಲ್ಲಿ ಕೊಳವೆಬಾವಿ ಕೊರೆಸಲಾಗುವುದು, ಅದುವರೆಗೂ ಟ್ಯಾಂಕರ್‌ ಮೂಲಕ ನೀರಿನ ಸೌಕರ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ತಹಶೀಲ್ದಾರ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next