ಬೆಂಗಳೂರು: ಬರೋಬ್ಬರಿ ಮೂರು ವರ್ಷಗಳ ಪರಿಶ್ರಮದ ಬಳಿಕ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಅಭಿನಯದ ಬಹುನಿರೀಕ್ಷಿತ “ಅವನೇ ಶ್ರೀಮನ್ನಾರಾಯಣ” ಸಿನಿಮಾ ಗುರುವಾರ ರಾಜ್ಯಾದ್ಯಂತ ತೆರೆ ಕಂಡಿದೆ. ಇದಕ್ಕೂ ಮುನ್ನ ನಿನ್ನೆ ರಾತ್ರಿ ಚಿತ್ರತಂಡ ಆಯೋಜಿಸಿದ್ದ ಪ್ರೀಮಿಯರ್ ಶೋ ವೀಕ್ಷಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹುಪರಾಕ್ ಹೇಳಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾದ ಟಿಕೆಟ್ ಸೋಲ್ಡ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಹೆಸರಿಗೂ, ಕಥೆಗೂ ಥಳಕು ಹಾಕಲು ಹೋಗಬೇಡಿ. ಯಾಕೆಂದರೆ ಈ ಸಿನಿಮಾ ಅಮರಾವತಿ ಎಂಬ ಕಾಲ್ಪನಿಕ ಊರಿನ ನಿಧಿಯೊಂದರ ಸುತ್ತ ಸುತ್ತುವ ಕಳ್ಳ-ಪೊಲೀಸ್ ಕಥೆಯಾಗಿದೆ.
ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡುತ್ತಾ…ನೋಡುತ್ತಾ ನಿಮಗೆ ಥಟ್ಟನೆ ಹಾಲಿವುಡ್ ನ ಪೈರೇಟ್ಸ್ ಆಫ್ ದಿ ಕೆರಿಬಿಯನ್” ಸಿನಿಮಾದ ನೆನಪು ಬಂದರು ಅಚ್ಚರಿ ಇಲ್ಲ. ಆದರೆ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಎಬ್ಬಿಸಿದ ಭರ್ಜರಿ ಹವಾದ ನಂತರ ಮತ್ತೊಂದು ವಿಭಿನ್ನ ಕಥಾನಕದ ಸಿನಿಮಾ ಇದಾಗಿದೆ ಎಂದು ಹೇಳಬಹುದಾಗಿದೆ.
ನಿಧಿಯನ್ನು ಹುಡುಕುವ ತಂಡ ಒಂದೆಡೆ, ಮತ್ತೊಂದೆಡೆ ಲೂಟಿಯ ಗ್ಯಾಂಗ್ ಹಿಂದೆ ಬಿದ್ದಿರುವ ಪೊಲೀಸ್ ಇನ್ಸ್ ಪೆಕ್ಟರ್ ತಂಡದ ನಡುವೆ ಚಿತ್ರಕಥೆ ಮುಂದುವರಿಯುತ್ತದೆ. ಕೊನೆಗೂ ಈ ನಿಧಿ ಯಾರಿಗೆ ದಕ್ಕುತ್ತದೆ, ಅದನ್ನು ಹುಡುಕಲು ನಡೆಸುವ ಪ್ರಯತ್ನ ಏನು ಎಂಬುದನ್ನು ಕಣ್ತುಂಬಿಕೊಳ್ಳಬೇಕಾಗಿದ್ದರೆ ನೀವೇ ಖುದ್ದಾಗಿ ಸಿನಿಮಾ ವೀಕ್ಷಿಸಿ.
ಮೂರು ಗಂಟೆ ದೀರ್ಘಾವಧಿಯ ಸಿನಿಮಾವಾಗಿದ್ದರೂ ಕೂಡಾ ಸಿನಿಮಾದಲ್ಲಿನ ಹಾಸ್ಯ, ಸಾಹಸ, ಕಥಾಹಂದರ ಪ್ರೇಕ್ಷಕನಿಗೆ ಬೋರ್ ಹೊಡೆಸುವುದಿಲ್ಲ. ಅಷ್ಟರ ಮಟ್ಟಿಗೆ ಚಿತ್ರತಂಡದ ಶ್ರಮ ಸಾರ್ಥಕವಾಗಿದೆ. ಲಕ್ಷ್ಮೀ-ನಾರಾಯಣರ ಅದ್ಭುತ ದೃಶ್ಯಕಾವ್ಯ ಚಿತ್ರಮಂದಿರದಲ್ಲಿಯೇ ನೋಡಿ ಆನಂದಿಸಬೇಕು.
ಸಂತೋಷ್ ಚಿತ್ರಮಂದಿರದಲ್ಲಿ ಜನಸಾಗರ:
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಲು ಸ್ವತಃ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಆಗಮಿಸಿದ್ದರಿಂದ ಮೊದಲ ಶೋ ನೋಡಲು ಜನ ಸಾಗರವೇ ತುಂಬಿದೆ.