Advertisement

ಆಟೋರಿಕ್ಷಾ ದರ ಪರಿಷ್ಕರಣೆ

04:56 PM Dec 25, 2018 | |

ಧಾರವಾಡ: ಧಾರವಾಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷರಾಗಿರುವ ಡಿಸಿ ದೀಪಾ ಚೋಳನ್‌ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಿರುವಂತೆ ಆಟೋರಿಕ್ಷಾಗಳ ಫೇರ್‌ ಮೀಟರ್‌ ದರವನ್ನು ಪರಿಷ್ಕರಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಆಟೋರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಟೋರಿಕ್ಷಾ ಫೇರ್‌ ಮೀಟರ್‌ ದರಗಳನ್ನು ಪರಿಷ್ಕರಿಸುವಂತೆ ಹಾಗೂ ಆಟೋರಿಕ್ಷಾ ರಹದಾರಿ ನೀಡುವುದನ್ನು ನಿರ್ಬಂಧಿಸುವಂತೆ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಗಿದೆ.

Advertisement

ಆಟೋರಿಕ್ಷಾಗಳ ದರ, ಕಾಲಕಾಲಕ್ಕೆ ಪೆಟ್ರೋಲ್‌ ಮತ್ತು ಎಲ್‌.ಪಿ.ಜಿ. ದರಗಳಲ್ಲಿನ ಏರಿಕೆ, ರಾಜ್ಯದ ಇತರೆ ಪ್ರಾಧಿಕಾರಗಳಲ್ಲಿ ನಿಗಪಡಿಸಿರುವ ದರಗಳ ಅಂಕಿ-ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಸಭೆಯಲ್ಲಿ ಚರ್ಚಿಸಿ, ಪ್ರಸ್ತುತ ಪೆಟ್ರೋಲ್‌, ಎಲ್‌.ಪಿ.ಜಿ ಇಂಧನಗಳ ಬೆಲೆ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿ 2019ರ ಜನವರಿ 01 ರಿಂದ ಜಾರಿಗೆ ಬರುವಂತೆ ಫೇರ್‌ ಮೀಟರ್‌ ದರ ಪರಿಷ್ಕರಿಸಲಾಗಿದೆ. ನಿಗದಿಪಡಿಸಿರುವ ದರಗಳನ್ವಯ ಬಾಡಿಗೆ ಪಡೆಯತಕ್ಕದ್ದು. ನಿಗದಿತ ದರಗಳನ್ವಯ ಬಾಡಿಗೆ ಪಡೆಯದೇ ಇರುವ ಆಟೋರಿಕ್ಷಾಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಪರವಾನಗಿ ನಿರ್ಬಂಧ: ಅವಳಿನಗರದಲ್ಲಿ ಆಟೋರಿಕ್ಷಾ ವಾಹನಗಳ ಸಂಚಾರವು ಅಧಿಕವಾಗಿದ್ದು, ಆಟೋರಿಕ್ಷಾ ಪಾರ್ಕಿಂಗ್‌ ಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಹಾಗೂ ಅನಧಿಕೃತ ಆಟೋರಿಕ್ಷಾಗಳ ಸಂಚಾರ ನಿರ್ಬಂಧಿಸುವ ದಿಶೆಯಲ್ಲಿ ಹೊಸದಾಗಿ ಆಟೋರಿಕ್ಷಾಗಳಿಗೆ ಪರವಾನಗಿ ನೀಡುವುದನ್ನು (ಸರ್ಕಾರದ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಆಟೋರಿಕ್ಷಾಗಳು ಹಾಗೂ ಬ್ಯಾಟರಿ ಚಾಲಿತ ಗ್ರೀನ್‌ ಆಟೋರಿಕ್ಷಾಗಳನ್ನು ಹೊರತು ಪಡಿಸಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಆಟೋರಿಕ್ಷಾಗಳಿಗೆ ಪರವಾನಗಿ ನೀಡುವುದನ್ನು ನಿರ್ಬಂಧಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ವಿ.ಕವಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next