Advertisement

Kundapura: ಕುಡಿಯುವ ನೀರಿಗೆ ಬಿಲ್ಲಿನ ಭಾರ: ನಗರದಲ್ಲಿ ಏರಿದ ದರ

04:30 PM Apr 02, 2024 | Team Udayavani |

ಕುಂದಾಪುರ: ಒಂದೆಡೆ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಕುಂದಾಪುರ ಪುರಸಭೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಕಳೆದ ವರ್ಷ 10 ವರ್ಷದ ಬಳಿಕ ಮೊದಲ ಬಾರಿ ಎಂಬಂತೆ ಕುಡಿಯಲು ಉಪ್ಪು ನೀರು ಬಂದು ಸಮಸ್ಯೆ ಆಗಿತ್ತು. ಸದ್ಯ ಕುಡಿಯುವ ನೀರಿನ ನಿರ್ವಹಣೆಯನ್ನು ಜಲಸಿರಿ ಯೋಜನೆ ಮೂಲಕ ನಡೆಸಲಾಗುತ್ತಿದೆ. ಈ ಮಧ್ಯೆ ಪುರಸಭೆ ನೀರಿನ ದರ ಪರಿಷ್ಕರಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

Advertisement

ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಏರಿಸಿದ್ದು ಎ.1ರಿಂದ ಜಾರಿಗೆ ಬಂದಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿದ್ದಾಗ ನೀರಿನ ದರ ಏರಿಕೆ ಮಾಡಿರುವುದು ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರಿಗೆ
ಇನ್ನೂ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದ ಕಾರಣ ಗೊಂದಲ ಉಂಟಾಗಿದೆ. ದರ ಏರಿಕೆ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಸೂಚನೆಯಂತೆ ಏರಿಕೆ
ರಾಜ್ಯ ಸರಕಾರದ 2021ರ ಸೂಚನೆಯಂತೆ ಮೂರು ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಿಸಬೇಕು. ಆದರೆ ಕುಂದಾಪುರದಲ್ಲಿ
ಕಳೆದ 4 ವರ್ಷಗಳಿಂದ ಹಳೆಯ ದರವೇ ಇದೆ. ಅದರಂತೆ ನೂತನ ಪರಿಷ್ಕೃತ ದರವನ್ನು ಪುರಸಭೆ ಆಡಳಿತಾಧಿಕಾರಿ ಅವರು ಸಭೆಯಲ್ಲಿ ಮಂಜೂರು ಮಾಡಿದ್ದಾರೆ.

ಮನೆಗಳಿಗೆ
ಗೃಹಬಳಕೆಗೆ ಪ್ರತೀ ಸಾವಿರ ಲೀ.ಗೆ 2013ರಲ್ಲಿ 7 ರೂ., 2017ರಲ್ಲಿ 8 ರೂ., 2020ರಲ್ಲಿ 9 ರೂ. ಇದ್ದುದು 2024ರಿಂದ 10 ರೂ. ಆಗಲಿದೆ. ಇದು 8 ಸಾವಿರ ಲೀ.ವರೆಗಿನ ಬಳಕೆಗೆ. 25 ಸಾವಿರ ಲೀ.ಗಿಂತ ಹೆಚ್ಚು ಬಳಸಿದರೆ ಈ ದರ ಪ್ರತೀ ಸಾವಿರ ಲೀ.ಗೆ 16 ರೂ. ಆಗಲಿದೆ. ಮಾಸಿಕ ಕನಿಷ್ಠ ದರ 2013ರಲ್ಲಿ 56 ರೂ., 2017ರಲ್ಲಿ 64 ರೂ., 2020ರಲ್ಲಿ 72 ರೂ., 2024ರಲ್ಲಿ 80 ರೂ. ಆಗಲಿದೆ.

ಗೃಹೇತರ
ಗೃಹೇತರ ಬಳಕೆಗೆ ಪ್ರತೀ ಸಾವಿರ ಲೀ.ಗೆ 2013ರಲ್ಲಿ 14 ರೂ., 2017ರಲ್ಲಿ 16 ರೂ., 2020ರಲ್ಲಿ 18 ರೂ. ಇದ್ದುದು 2024ರಿಂದ 20 ರೂ. ಆಗಲಿದೆ. 25 ಸಾವಿರ ಲೀ.ಕ್ಕಿಂತ ಹೆಚ್ಚಿನ ಬಳಕೆಗೆ 32 ರೂ. ಆಗಲಿದೆ. ಮಾಸಿಕ ಕನಿಷ್ಠ ದರ 2013ರಲ್ಲಿ 112 ರೂ., 2017ರಲ್ಲಿ 128 ರೂ., 2020ರಲ್ಲಿ 144 ರೂ., 2024ರಲ್ಲಿ 160 ರೂ. ವಿಧಿಸಲಾಗಿದೆ.

Advertisement

ವಾಣಿಜ್ಯ
ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಗೆ ದರ ಏರಿಸಲಾಗಿದ್ದು ಸಂಪರ್ಕ ಪಡೆಯಲು 6 ಸಾವಿರ ರೂ. ನಿಗದಿಪಡಿಸಲಾಗಿದೆ. ಮನೆಗೆ 1,500 ರೂ., ಗೃಹೇತರ 3 ಸಾವಿರ ರೂ. ನಿಗದಿಯಾಗಿದೆ. ಪ್ರತೀ ಸಾವಿರ ಲೀ.ಗೆ 2013ರಲ್ಲಿ 28 ರೂ., 2017ರಲ್ಲಿ 32 ರೂ., 2020ರಲ್ಲಿ 36 ರೂ., 2024ರಲ್ಲಿ 40 ರೂ. ನಿಗದಿಪಡಿಸಲಾಗಿದೆ. 25 ಸಾವಿರ ಲೀ.ಗಿಂತ ಹೆಚ್ಚು  ಬಳಸಿದರೆ ಪ್ರತೀ ಸಾವಿರ ಲೀ.ಗೆ 64 ರೂ. ದರ
ನೀಡಬೇಕಾಗುತ್ತದೆ. ಮಾಸಿಕ ಕನಿಷ್ಠ ದರ 2013ರಲ್ಲಿ 224 ರೂ., 2017ರಲ್ಲಿ 256 ರೂ., 2020ರಲ್ಲಿ 282 ರೂ. ಇದ್ದುದು ಈಗ 320 ರೂ. ನಿಗದಿಯಾಗಿದೆ.

ಖಂಡನೆ
ಎ. 1ರಿಂದ ಬಿಲ್ಲಿನಲ್ಲಿ ಹೆಚ್ಚಳ ಮಾಡಲು ಪುರಸಭಾ ಆಡಳಿತಾಧಿಕಾರಿಯ ಅಧ್ಯಕ್ಷತೆಯಲ್ಲಿ ನಿರ್ಣಯ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ. ಜನರಿಗೆ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದು ತೊಂದರೆ ಆಗುತ್ತದೆ. ಪುರಸಭೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರದಲ್ಲಿದ್ದು, ಅವರ ಗಮನಕ್ಕೂ ತಾರದೇ ನಿರ್ಣಯ ಮಾಡಿರುವುದು ಖಂಡನೀಯ. ನಾವು ಇದನ್ನು ಪ್ರತಿಭಟಿಸುತ್ತೇವೆ ಎಂದು ಪುರಸಭೆ ಸದಸ್ಯ, ಕಾಂಗ್ರೆಸ್‌ ಮುಖಂಡ ಚಂದ್ರಶೇಖರ ಖಾರ್ವಿ ಹೇಳಿದ್ದಾರೆ.

ಮಾಹಿತಿ ಇಲ್ಲ
ಅಚ್ಚರಿ ಎಂದರೆ ನೀರಿನ ದರ ಏರಿಸಿರುವುದು ಜನಪ್ರತಿನಿಧಿಗಳಿಗೂ ಮಾಹಿತಿ ಇಲ್ಲ, ಜನರಿಗೂ ಮಾಹಿತಿ ಇಲ್ಲ. ಸದಸ್ಯರು ಆಯ್ಕೆ ಮಾಡಿದ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಮಂಡಳಿ ಇಲ್ಲ ವಿನಾ ಪುರಸಭೆ ಬರ್ಖಾಸ್ತುಗೊಂಡಿಲ್ಲ. ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಿಲ್ಲ. ಹೀಗಿರುವಾಗ ಏಕಾಏಕಿ, ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ನೀರಿನ ದರ ಏರಿಸಿರುವುದು ಸರಿಯಲ್ಲ. ಇದಕ್ಕೆ ನಮ್ಮ ಆಕ್ಷೇಪವಿದೆ ಎನ್ನುತ್ತಾರೆ ಬಿಜೆಪಿ ಸದಸ್ಯರಾದ ಮೋಹನದಾಸ ಶೆಣೈ ಹಾಗೂ ಸಂತೋಷ್‌ ಕುಮಾರ್‌ ಶೆಟ್ಟಿ .

ನಿಗದಿಯಂತೆ ಏರಿಕೆ
3 ವರ್ಷಗಳಿಗೊಮ್ಮೆ ದರ ಏರಿಸಲು ಸರಕಾರದ ಆದೇಶ ಇದ್ದು 4 ವರ್ಷಗಳಿಂದ ನೀರಿನ ದರ ಏರಿಸಿಲ್ಲ. ಈ ಬಾರಿ ಕನಿಷ್ಠ ದರ ಏರಿಸಿ ನಿರ್ಣಯಿಸಲಾಗಿದೆ. ಸದಸ್ಯರಿಗೆ ಮಾಹಿತಿ ನೀಡಲು ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ.
ರಶ್ಮೀ ಎಸ್‌.ಆರ್‌. ಪುರಸಭೆ ಆಡಳಿತಾಧಿಕಾರಿ/ ಸಹಾಯಕ ಕಮಿಷನರ್‌

ದರ ವ್ಯತ್ಯಾಸ
ಕಳೆದ 4 ಅವಧಿಯಲ್ಲಿ ಆದರ ದರದ ವ್ಯತ್ಯಾಸ ಈ ರೀತಿಯಾಗಿದೆ. ದರ ಏರಿಕೆಯಲ್ಲ ಗರಿಷ್ಠ 8 ಸಾವಿರ ಲೀ. ಬಳಕೆಗೆ ಒಂದು ದರ, ಗರಿಷ್ಠ 15 ಸಾವಿರ ಲೀ. ಬಳಕೆಗೆ ಒಂದು ದರ, ಗರಿಷ್ಠ 25 ಸಾವಿರ ಲೀ. ಬಳಕೆಗೆ ಒಂದು ದರ, 25 ಸಾವಿರ ಲೀ.ಗಿಂತ ಹೆಚ್ಚಿನ ಬಳಕೆಗೆ ಹೆಚ್ಚಿನ ದರ ನಿಗದಿಪಡಿಸಲಾಗಿದೆ.

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next