ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ರೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ನಿರಂಕುಶಾಧಿಪತ್ಯದ ದಾರಿಯಲ್ಲಿ ಸಾಗುತ್ತಿರುವುದು ಸಾಬೀತಾಗಿದ್ದು, ಈ ಮೂಲಕ ಪ್ರಜಾಪ್ರಭುತ್ವದ ನೀತಿಯ ಸಂಹಿತೆಯನ್ನು ಗಾಳಿಗೆ ತೂರಲಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ.ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಶಿಕ್ಷೆ ವಿಧಿಸಿ ಮೇಲ್ಮನವಿಗೆ 30 ದಿನಗಳ ಕಾಲಾವಕಾಶ ನೀಡಿದೆ. ಹೀಗಿರುವಾಗ, ಆದೇಶ ಪ್ರಕಟಿಸಿದ ಒಂದೇ ದಿನದಲ್ಲಿ ಈ ರೀತಿಯ ಸೇಡಿನ ರಾಜಕೀಯ ಮಾಡಿರುವುದು ರಾಹುಲ್ ಗಾಂಧಿ ಅವರ ಕುರಿತಾದ ಭಯ 56 ಇಂಚಿನ ನರೇಂದ್ರ ಮೋದಿ ರಣಹೇಡಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಹುಲ್ ಮೇಲಿನ ಕ್ರಮದ ವಿರುದ್ಧ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದು ಅವರು ಹೇಳಿದರು.
ಸೌಹಾರ್ದವನ್ನು ಕೆಡಿಸುವ ಹೇಳಿಕೆ ನೀಡಿದಾಗ, ನರಮೇಧಕ್ಕೆ ಕರೆ ಕೊಟ್ಟವರ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾದ ಸರಕಾರ ಏನೂ ಮಾಡದೆ ಇದೀಗ 138 ವರ್ಷಗಳ ಇತಿಹಾಸವಿರುವ ರಾಜಕೀಯ ಪಕ್ಷವೊಂದರ ನಾಯಕನ ರಾಜಕೀಯ ಭಾಷಣದ ಮೇಲಿನ ಸೇಡಿನ ರಾಜಕಾರಣವು ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲಿನ ಗೌರವನ್ನು ತೋರಿಸಿದೆ ಎಂದು ಬಿ.ಕೆ. ಹರಿಪ್ರಸಾದ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
2 ಬಿ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈಬಿಡುವ ರಾಜ್ಯ ಸರಕಾರದ ನಿರ್ಣಯದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸಂಪೂರ್ಣ ಮೀಸಲಾತಿಯನ್ನೇ ರದ್ದುಗೊಳಿಸುವ ಹುನ್ನಾರ ಎಂದರು.
ದ.ಕನ್ನಡ ಜಿಲ್ಲೆಯ ಎಂಟು ಸ್ಥಾನಗಳಲ್ಲಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಲ್ಲಿ ಪಕ್ಷದಲ್ಲಿ ಯಾವುದೇ ಕಗ್ಗಂಟು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ, ಮುಖಂಡರಾದ ಶಶಿಧರ ಹೆಗ್ಡೆ, ಜೆ.ಆರ್. ಲೋಬೋ, ಸಂತೋಷ್ ಕುಮಾರ್, ಇಬ್ರಾಹೀಂ ಕೋಡಿಜಾಲ್, ಲಾರೆನ್ಸ್, ಅನ್ವಿತ್ ಉಪಸ್ಥಿತರಿದ್ದರು.