ಮೂಡಿಗೆರೆ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಮೂಡಿಗೆರೆ ತಾಲೂಕು ಆಟೋ ಚಾಲಕರ ಸಂಘ ಮತ್ತು ಮಾಲೀಕರ ಸಂಘ, ತಾಲೂಕಿನ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿ ಮುಕ್ತಾಯಗೊಂಡಿತು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿ ಸಿ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರವನ್ನು ತಹಶೀಲ್ದಾರ್ ರಮೇಶ್ ಅವರಿಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಯು.ಬಿ. ನಾಗೇಶ್, ಪ್ರತೀ ನಿತ್ಯ ಆಟೋ ಓಡಿಸಿ ಜೀವನ ಸಾಗಿಸುತ್ತಿರುವವರು ದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಇದ್ದಾರೆ. ಇನ್ನು ವಿವಿಧ ರೀತಿಯ ವಾಹನಗಳನ್ನು ಚಲಾಯಿಸಿ ಜೀವನ ಸಾಗಿಸುತ್ತಿರುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ದಿನೇ ದಿನೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಳ ಮಾಡಿದರೆ ವಾಹನಗಳನ್ನು ನಂಬಿ ಜೀವನ ಸಾಗಿಸುವವರ ಕಥೆ ಏನು ಎಂಬುದನ್ನು ಸರ್ಕಾರವನ್ನು ನಡೆಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಇಂಧನದ ಬೆಲೆ ಹೆಚ್ಚಾಗಿದೆ ಎಂದು ಪ್ರಯಾಣಿಕರ ಮೇಲೆ ಹೊರೆ ಹೊರಿಸಿದರೆ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಜೀವನದ ಕಥೆ ಏನು. ಸಾಲಮಾಡಿ ಆಟೋಗಳನ್ನು ತಂದು ಜೀವನ ಸಾಗಿಸುತ್ತಿರುವ ಅನೇಕರಿಗೆ ಸಾಲದ ಕಂತುಗಳನ್ನು ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗೆ ಇಂಧನಗಳ ಬೆಲೆ ಹೆಚ್ಚಳ ಮಾಡುತ್ತಾ ಸಾಗಿದರೆ ನಮ್ಮ ಕುಟುಂಬಗಳ ಸ್ಥಿತಿ ಕಷ್ಟಕರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಟೋ ಚಾಲಕ ದಿನೇಶ್ ಮಾತನಾಡಿ, ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತೀ ನಿತ್ಯ ಪೈಸೆಗಳ ಲೆಕ್ಕದಲ್ಲಿ ಹೆಚ್ಚಳ ಮಾಡುತ್ತಿದ್ದು ಜನರನ್ನು ಮೋಸ ಮಾಡಲು ಹುನ್ನಾರ ನಡೆಸಲಾಗಿದೆ. ಇಂಧನಗಳ ಬೆಲೆ ಹೆಚ್ಚಳ ಮಾಡುವುದರ ಬದಲು ಅಮಲು ಪದಾರ್ಥಗಳ ಮೇಲೆ ಇನ್ನೂ ಹೆಚ್ಚಿನ ತೆರಿಗೆ ಹಾಕಿ ನಷ್ಟವನ್ನು ಭರ್ತಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ನೇರವಾಗಿ ಇಂಧನದ ಮೇಲೆ ತೆರಿಗೆ ಹಾಕಿ ನೇರವಾಗಿ ಹಾಗೂ ಪರೋಕ್ಷವಾಗಿ ಜನರ ಜೀವನವನ್ನು ಮೂರಾಬಟ್ಟೆ ಮಾಡಬೇಡಿ. ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಅಚ್ಛೇ ದಿನ್ ಘೋಷ ವಾಕ್ಯಗಳೊಂದಿಗೆ ಅಧಿಕಾರಕ್ಕೆ ಬಂದ ನಂತರದಲ್ಲಿ ಜನಸಮಾನ್ಯರ ಮೇಲೆ ಅನಾವಶ್ಯಕ ತೆರಿಗೆಗಳನ್ನು ಹೇರಲಾಗುತ್ತಿದೆ. ಕೂಡಲೇ ಎಚ್ಚತ್ತುಕೊಂಡು ತೆರಿಗೆ ನೀತಿಯಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿದರು.