ರಾಮೇಶ್ವರಂ : ಶ್ರೀಲಂಕಾದ ಥಲೈಮನ್ನಾರ್ ಕಡಲ ತೀರದಿಂದ ಧನುಷ್ಕೋಡಿಯ ಅರಿಚಲ್ಮುನೈ ವರೆಗೆ 13 ವರ್ಷದ ಬಾಲಕಿ ಯೊಬ್ಬಳು ಬರೋಬ್ಬರಿ 13 ಗಂಟೆಗಳ ಕಾಲ ಈಜಿ ದಾಖಲೆ ಬರೆದಿದ್ದಾಳೆ.
ಮಕ್ಕಳಲ್ಲಿ ಕಂಡು ಬರುವ ಸ್ವಲೀನತೆ (ಆಟಿಸಂ)ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಯಾ ರಾಯ್ ಭಾನುವಾರ ಈ ಸಾಹಸ ಮಾಡಿದ್ದು, ಕಡಲ ತೀರದಲ್ಲಿ ತಮಿಳುನಾಡಿದ ಡಿಜಿಪಿ ಶೈಲೇಂದ್ರ ಬಾಬು ಸೇರಿದಂತೆ ಭಾರಿ ಸಂಖ್ಯೆಯ ಜನಸ್ತೋಮ ಆಕೆಯನ್ನು ಸ್ವಾಗತಿಸಿದೆ.
ಮುಂಬಯಿಯ ನೌಕಾಪಡೆಯ ಅಧಿಕಾರಿ ಮದನ್ ರಾಯ್ ಅವರ ಪುತ್ರಿಯಾಗಿರುವ ಜಿಯಾ 13 ಗಂಟೆ ಐದು ನಿಮಿಷಗಳಲ್ಲಿ ನಿಗದಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. ಜಯಾಳನ್ನು ಅಭಿನಂದಿಸಿ ಮಾತನಾಡಿದ, ಸ್ವಯಂ ಈಜುಪಟು ಆಗಿರುವ ಡಿಜಿಪಿ ಶೈಲೇಂದ್ರ ಬಾಬು, ನಾನು ಈ ಹಿಂದೆ ಪಾಕ್ ಜಲಸಂಧಿಯಲ್ಲಿ ಈಜಿದ್ದೇನೆ. ಜಿಯಾ ದೇಶಕ್ಕೆ ಹೆಮ್ಮೆ ತಂದಿದ್ದಾಳೆ.ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಕೊಂಡಾಡಿದರು.
ಜಿಯಾ ಈ ಹಿಂದೆ ಮುಂಬಯಿಯಲ್ಲಿ ಬಾಂದ್ರದಿಂದ ಗೇಟ್ ವೆ ಆಫ್ ಇಂಡಿಯಾ ವರೆಗೆ 40 ನಿಮಿಷಗಳಲ್ಲಿ ಈಜಿ ದಾಖಲೆ ಬರೆದಿದ್ದಳು. ಪ್ರಧಾನಿ ನರೇಂದ್ರ ಮೋದಿ ಅವರೂ ಈಕೆಯ ಸಾಧನೆಯನ್ನು ಮನ್ ಕೀ ಬಾತ್ ನಲ್ಲಿ ಪ್ರಶಂಸಿಸಿದ್ದರು.
ವಲಸೆ ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ತರಬೇತು ದಾರರು ಮತ್ತು ಪೋಷಕರ ನೆರವಿನಿಂದ ಬೆಳಗ್ಗೆ 4.15 ಕ್ಕೆ ಈಜು ಆರಂಭಿಸಿದ ಜಿಯಾ ಸಂಜೆ 5.20 ಕ್ಕೆ ಗುರಿ ತಲುಪಿದ್ದಾಳೆ.
ಶ್ರೀಲಂಕಾದಿಂದ ಧನುಷ್ಕೋಡಿಗೆ ಈಜಿದ ಕುಟ್ರಾಲೀಶ್ವರನ್ (1994), ಆರ್ ಜೈ ಜಸ್ವಂತ್ (2019), ಯುಎಸ್‌ಎಯ ಎಡಿ ಹೂ (2020), ತೆಲಂಗಾಣದ ಶ್ಯಾಮಲಾ ಕೋಲಿ (2021) ಸೇರಿದಂತೆ ಆಯ್ದ ಈಜುಗಾರರ ಪಟ್ಟಿಯಲ್ಲಿ ಜಿಯಾ ಸೇರಿಕೊಂಡಿದ್ದಾಳೆ . ಸ್ಥಳದಲ್ಲಿ ನೆರೆದಿದ್ದ ಅನೇಕ ಪ್ರವಾಸಿಗರು ಜಿಯಾ ರಾಯ್ ಅವರನ್ನು ಸ್ವಾಗತಿಸಿ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಸ್ವಲೀನತೆ) ಹೊಂದಿರುವ ವ್ಯಕ್ತಿಗಳಿಗೆ ನೀನು ರೋಲ್ ಮಾಡೆಲ್ ಎಂದು ಬಣ್ಣಿಸಿದ್ದಾರೆ.
ಸ್ವಲೀನತೆ ಎಂದರೆ ಸಂವಹನ ತೊಂದರೆಗಳು, ಸಂಕುಚಿತ ಆಸಕ್ತಿಗಳು ಮತ್ತು ಪುನರಾವರ್ತಿತ ನಡವಳಿಕೆ ಮಕ್ಕಳಲ್ಲಿ ಕಂಡು ಬರುವ ಜಾಗತಿಕ ಸಮಸ್ಯೆಯಾಗಿದೆ.