Advertisement

ಸ್ಥಳೀಯಾಡಳಿತಗಳಿಗೆ ಅಧಿಕಾರ: ಹೊಸ ಮೀಸಲಾತಿ ಪಟ್ಟಿ ಸಲ್ಲಿಸಲು ಸರಕಾರದ ಮೀನಮೇಷ!

02:15 AM Jan 24, 2020 | mahesh |

ಸುಳ್ಯ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ನಡೆಸಿ ಚುನಾಯಿತ ಸದಸ್ಯರಿಗೆ ಅಧಿಕಾರ ಕಲ್ಪಿಸಲು ಅವಕಾಶ ನೀಡುವಲ್ಲಿ ರಾಜ್ಯ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಅನುಮಾನ ವ್ಯಕ್ತವಾಗಿದೆ! ಒಂದು ವರ್ಷದೊಳಗೆ ಎರಡು ಹಂತದಲ್ಲಿ ಚುನಾವಣೆ ನಡೆದ 208 ಸ್ಥಳೀಯಾಡಳಿತಗಳ ಪೈಕಿ ಗರಿಷ್ಠ ಸಂಸ್ಥೆಗಳು ಅಧಿಕಾರಕ್ಕೆ ಕಾದು ಕುಳಿತಿವೆ. ಆದರೆ ರಾಜ್ಯ ಸರಕಾರ ನ್ಯಾಯಾಲಯದ ನೆಪವೊಡ್ಡಿ ದಿನದೂಡುತ್ತಿರುವುದು ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ.

Advertisement

ಮೀಸಲಾತಿ ಬಿಕ್ಕಟ್ಟು!
ರಾಜ್ಯ ಸರಕಾರವು 2018ರ ಆ.31ರಂದು ಮೊದಲ ಹಂತದಲ್ಲಿ 109 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಿತು. ಚುನಾವಣೆಗೆ ದಿನಾಂಕ ಘೋಷಣೆ ಮೊದಲೇ ಅಧ್ಯಕ್ಷ -ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟಿಸಿತ್ತು. ಫಲಿತಾಂಶ ಪ್ರಕಟವಾದ ಅನಂತರ ಮೀಸಲಾತಿ ಬದಲಾಯಿಸಿತು. ಇದರ ವಿರುದ್ಧ ಆಕಾಂಕ್ಷಿಗಳು ನ್ಯಾಯಾಲಯದ ಮೆಟ್ಟಲೇರಿದರು. ಕೆಲವು ತಿಂಗಳಲ್ಲಿ ಮೊದಲು ಪ್ರಕಟಿಸಿದ ಮೀಸಲಾತಿ ಅನ್ವಯವೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನ್ಯಾಯಾಲಯದ ಮುಂದೆ ಸರಕಾರ ಒಪ್ಪಿತು. ಆದರೆ ಅದು ಜಾರಿಗೆ ಬರಲಿಲ್ಲ. ಇದರ ನಡುವೆ ಸರಕಾರ ಎರಡನೇ ಹಂತದಲ್ಲಿ 103 ಸ್ಥಳೀಯ ಸಂಸ್ಥೆಗಳಿಗೆ 2019ರ ಮೇ 29ಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಿಗದಿ ಮಾಡಿ, ಮೇ 31ಕ್ಕೆ ಫಲಿತಾಂಶ ಪ್ರಕಟಿಸಿತು. ಮೊದಲ ಹಂತದ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಕಾರಣ ಎರಡನೇ ಹಂತದಲ್ಲಿ ಚುನಾವಣೆ ನಡೆದ ಸ್ಥಳೀಯಾಡಳಿತಗಳಿಗೆ ಅಧಿಕಾರ ಸಿಗಲಿಲ್ಲ.

ವ್ಯಾಜ್ಯ ವಿಚಾರಣೆಯ ಹಂತದಲ್ಲಿರುವ ಸಂದರ್ಭದಲ್ಲೇ 226 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ 2018ರ ಸೆ.3ರಂದು ಹೊರಡಿಸಿದ್ದ ಮೂಲ ಅಧಿಸೂಚನೆ ಹಿಂಪಡೆಯುವುದಾಗಿ ರಾಜ್ಯ ಸರಕಾರವು 2019ರ ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತು. ಹೊಸದಾಗಿ ಮೀಸಲಾತಿ ಮರು ನಿಗದಿಪಡಿಸಿ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿತ್ತು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಮೇಲ್ಮನವಿಗಳನ್ನು ವಿಲೇವಾರಿ ಮಾಡಿ ಆದೇಶ ಹೊರಡಿಸಿತು. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ 2019ರ ಜ.18 ಮತ್ತು 2018ರ ಅ.9ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಪ್ರತ್ಯೇಕ ಆದೇಶ ರದ್ದುಗೊಳಿಸುವುದಾಗಿ ತಿಳಿಸಿತು.

ವಿಳಂಬ ಧೋರಣೆ
ಉಚ್ಚ ನ್ಯಾಯಾಲಯಕ್ಕೆ 2019ರ ನವೆಂಬರ್‌ನಲ್ಲಿ ತಿಂಗಳೊಳಗೆ ಹೊಸ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವುದಾಗಿ ಹೇಳಿದ್ದ ಸರಕಾರ ಅದನ್ನು ಪಾಲಿಸಿಲ್ಲ. ಹೊಸ ಮೀಸಲಾತಿ ಪಟ್ಟಿ ಅಂತಿಮಗೊಂಡು ಪೌರಾಡಳಿತ ಇಲಾಖೆಯಲ್ಲಿ ಇದೆ ಎಂದು ಆಡಳಿತ ಪಕ್ಷದ ಕೆಲವು ಚುನಾಯಿತ ಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ. ನ್ಯಾಯಾಲಯಕ್ಕೆ ಭರವಸೆ ನೀಡಿ ಎರಡೂವರೆ ತಿಂಗಳು ಕಳೆದರೂ ರಾಜ್ಯ ಸರಕಾರ ಪಟ್ಟಿ ಸಲ್ಲಿಕೆ ಮಾಡಿಲ್ಲ. ಸರಕಾರದ ಈ ವಿಳಂಬ ನೀತಿಯಿಂದ ಅಧಿಕಾರ ಹಂಚಿಕೆ ವಿಳಂಬ ಆಗುತ್ತಿದೆ.

ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಸಿಗದ ಕಾರಣ ಸ್ಥಳೀಯಾಡಳಿತವು ಆಡಳಿತಾಧಿಕಾರಿ ವ್ಯವಸ್ಥೆಯಲ್ಲೇ ಮುಂದುವರಿದಿದೆ. ಚುನಾಯಿತ ಪ್ರತಿನಿಧಿಗಳೂ ಜನರ ಬೇಡಿಕೆಗಳಿಗೆ ಸ್ಪಂದಿಸುವ ಸ್ಥಿತಿಯಲ್ಲಿ ಇಲ್ಲ. ಫಲಿತಾಂಶದ ಸಂದರ್ಭ ಹೊಸ ಸದಸ್ಯರಲ್ಲಿ ಇದ್ದ ಉತ್ಸಾಹ ಬತ್ತಿದೆ. ಸ್ಥಳೀಯಾಡಳಿತಗಳು ಅಧಿಕಾರಿ ಕೇಂದ್ರಿತ ನೆಲೆ ಆಗಿ ಬದಲಾಗಿವೆ.

Advertisement

ಹಿಂದಿನ ಸರಕಾರದ ತಪ್ಪಿನಿಂದ ವಿಳಂಬವಾಗಿತ್ತು. ನಮ್ಮ ಸರಕಾರ ಕಾನೂನು ತಜ್ಞರ ಜತೆ ಚರ್ಚಿಸಿ, ಹೈಕೋರ್ಟ್‌ಗೆ ಅಫಿದಾವಿತ್‌ ಸಲ್ಲಿಸಿತ್ತು. ಮೀಸಲಾತಿ ಪಟ್ಟಿಯನ್ನು ಪುನಃ ನೀಡಬೇಕು ಎನ್ನುವುದನ್ನು ಹೈಕೋರ್ಟ್‌ ಸಹಮತದೊಂದಿಗೆ ನಿರ್ಧರಿಸಲಾಗಿತ್ತು. ಕೆಲವೇ ದಿನಗಳಲ್ಲಿ ತೀರ್ಮಾನ ಆಗಬಹುದು.
-ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ , ಸಚಿವರು ದ.ಕ.

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next