ಉಷಾ ಪಿ. ರೈಯವರು 1974ರಲ್ಲಿ ಬೆಂಗಳೂರಿಗೆ ಬಂದರು. ಆಗ ಡಾ. ಅನುಪಮಾ ನಿರಂಜನರವರು ಬರೆಯುತ್ತಿದ್ದ ನೆನಪು ಸಿಹಿ ಕಹಿ ಲೇಖನ ಮಾಲಿಕೆಯನ್ನು ಓದಿ ಆಕರ್ಷಿತರಾದ ಉಷಾರವರು ಅನುಪಮಾರವರನ್ನು ಭೇಟಿ ಮಾಡಿದ ಗಳಿಗೆ ಅಮೃತ ಗಳಿಗೆಯಾಗಿತ್ತು. ತಮ್ಮ ಬರವಣಿಗೆಯ ಮೂಲಕ ಅಷ್ಟರಲ್ಲೇ ಚಿರಪರಿಚಿತರಾಗಿದ್ದ ಅನುಪಮಾರವರು ತಮ್ಮ ಬಳಿ ಬಂದ ಉಷಾರವರಿಗೆ ಬೆಂಗಳೂರಿನಲ್ಲಿ ಆ ಕಾಲದಲ್ಲಿ ಬರೆಯುತ್ತಿದ್ದ
ಟಿ. ಸುನಂದಮ್ಮ, ಎ.ಪಂಕಜಾ, ಎಚ್. ಎಸ್. ಪಾರ್ವತಿ, ಎಂ. ಕೆ. ಇಂದಿರಾ ಹಾಗೂ ಡಾ. ನಿರುಪಮಾ ಮುಂತಾದವರನ್ನು ಪರಿಚಯಿಸಿಕೊಟ್ಟು ಬರೆಯಲು ಪ್ರೋತ್ಸಾಹ ನೀಡಿದರು.
ಕನ್ನಡ ಸಾರಸ್ವತ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರ. ಮೊದಲೆಲ್ಲಾ ಅಡಿಗೆ ಮನೆ ಸಾಹಿತ್ಯ ಎಂದು ಮೂಗು ಮುರಿಯುತ್ತಿದ್ದ ಸಾಹಿತ್ಯ ವಲಯದ ಮೂದಲಿಕೆಗೆ ದಿಟ್ಟ ಉತ್ತರ ನೀಡಿದ ಲೇಖಕಿಯರ ದೊಡ್ಡ ಪಟ್ಟಿಯೇ ಇದೆ. ಇಂದು ಸಾಹಿತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಹಿಳಾ ಲೇಖಕಿಯರು ಎಲ್ಲಾ ಪ್ರಕಾರದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅಂತಹ ಲೇಖಕಿಯರಲ್ಲಿ ಕೆ. ಉಷಾ ಪಿ. ರೈಯವರದ್ದು ಚಿರಪರಿಚಿತ ಹೆಸರು.
ಉಷಾ ಉಡುಪಿಯಲ್ಲಿ 1945ರಲ್ಲಿ ಜನಿಸಿದರು. ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗೂ “ನವಯುಗ ಪತ್ರಿಕೆ’ಯ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತರಾದ ಕೆ. ಹೊನ್ನಯ್ಯಶೆಟ್ಟಿಯವರು. ತಾಯಿ ಪದ್ಮಾವತಿ ಶೆಟ್ಟಿ. ಚಿಕ್ಕ ವಯಸ್ಸಿನಿಂದಲೂ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಚಳುವಳಿಗಳನ್ನು ಗಮನಿಸುತ್ತಿದ್ದರು. ದೇಶಭಕ್ತಿಯ ವಾತಾವರಣದಲ್ಲಿ ಬೆಳೆದುಬಂದ ಉಷಾ ತನ್ನ ತಂದೆಯದೇ ಹೋರಾಟ ಪ್ರವೃತ್ತಿಯನ್ನು ಮೈತುಂಬಿಕೊಂಡು ಬಂದವರು. ಇತ್ತೀಚೆಗೆ ಅವರು ರಸ್ತೆ ಅಪಘಾತವಾಗಿ ಹಾಸಿಗೆ ಹಿಡಿದಾಗ ಇನ್ನು ಮುಂದೆ ಬರೆಯಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶದಲ್ಲೂ ಧೃತಿಗೆಡಲಿಲ್ಲ. ಬರೆಯಲಾಗದಿದ್ದರೇನು ಎಂದು ಕೈಗೆ ಬ್ರಶ್ ಮತ್ತು ಪೆಯಿಂಟ್‌ಗಳನ್ನು ತೆಗೆದುಕೊಂಡು ತಮ್ಮ ಮನದ ಭಾವನೆಗಳಿಗೆ ಚಿತ್ರದ ಸ್ವರೂಪ ನೀಡಿದವರು. ಅದು ಕೇವಲ ಮನದ ತಾಕಲಾಟಗಳಿಗೆ ಚಿತ್ರರೂಪ ನೀಡಿದ ಪೈಂಟಿಂಗ್‌ಗಳಾಗಿರಲಿಲ್ಲ. ತಮ್ಮ 60ನೆಯ ವಯಸ್ಸಿನಲ್ಲಿ ಪೈಂಟಿಂಗ್‌ನ್ನು ಪ್ರಾರಂಭಿಸಿದ ಉಷಾ ಅದನ್ನು ಗಂಭೀರವಾಗಿ ಪರಿಗಣಿಸಿದರು. ತಮ್ಮ ಪೈಂಟಿಂಗ್‌ಗಳನ್ನು ವೆಬ್ ಗ್ಯಾಲರಿಗಳಲ್ಲಿ ಪ್ರದರ್ಶಿಸಿ¨ªಾರೆ. ಪ್ರಪಂಚದ ಚಿತ್ರಕಲಾ ಆಸಕ್ತರ ಮನ ಗೆದ್ದಿ¨ªಾರೆ. ಅವರ ಅನೇಕ ಕಲಾಕೃತಿಗಳು ಪ್ರಪಂಚದಾದ್ಯಂತ ಮಾರಾಟವಾಗಿವೆ. “ಆಕಾಂûಾ’ ಎನ್ನುವ ಗುಂಪನ್ನು ಪ್ರಾರಂಭಿಸಿ ಉಷಾರವರು ಆ ಮೂಲಕ ಯಾರು ಸಾಂಪ್ರದಾಯಿಕವಾಗಿ ಚಿತ್ರಕಲೆಯನ್ನು ಕಲಿತಿಲ್ಲವೋ, ಆದರೆ ಚಿತ್ರಕಲೆಯಲ್ಲಿ ಆಸಕ್ತಿಯುಳ್ಳವರೋ ಅವರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿ¨ªಾರೆ. ಅಂತಹ ಅನೇಕರು ಈ ಗುಂಪಿಗೆ ಸೇರಿಕೊಂಡಿದ್ದು, ಅವರ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಪ್ರೋತ್ಸಾಹಿಸುತ್ತಿ¨ªಾರೆ. ಇವರುಗಳ ಕಲಾಕೃತಿಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದ ಚಿತ್ರಕಲಾಕೃತಿಗಳಾಗಿ ಪ್ರದರ್ಶನಗೊಂಡಿವೆ. ತಮ್ಮದೇ ಏಕವ್ಯಕ್ತಿ ಪ್ರದರ್ಶನವಲ್ಲದೇ ಗುಂಪು ಪ್ರದರ್ಶನಗಳನ್ನು ಮಾಡಿ ಆಸಕ್ತರ, ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ. ಇದು ಉಷಾ ಪಿ. ರೈ ಎಂದರೆ ಏನೆಂದು ಅರ್ಥೈಸಿಕೊಳ್ಳಲು ಒಂದು ನಿದರ್ಶನವಷ್ಟೆ.
ಸಮಾಜ-ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗಿಯಾದ ಉಷಾರವರು ತುಳು-ಕನ್ನಡ ಲೇಖಕರಾದ ಪ್ರಭಾಕರ ರೈಯವರನ್ನು ಮದುವೆಯಾದರು. ಅಧಿಕಾರಿಯಾಗಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಲೇ ಬರವಣಿಗೆಯಲ್ಲಿ ತೊಡಗಿಕೊಂಡರು. ಬೇರೆ ಬೇರೆ ಊರುಗಳಲ್ಲಿ ಕಾರ್ಯನಿರ್ವಹಿಸಿದ ಉಷಾರವರು 1974ರಲ್ಲಿ ಬೆಂಗಳೂರಿಗೆ ಬಂದರು. ಆಗ ಡಾ. ಅನುಪಮಾ ನಿರಂಜನರವರು ಬರೆಯುತ್ತಿದ್ದ ನೆನಪು ಸಿಹಿ ಕಹಿ ಲೇಖನ ಮಾಲಿಕೆಯನ್ನು ಓದಿ ಆಕರ್ಷಿತರಾದ ಉಷಾರವರು ಅನುಪಮಾರವರನ್ನು ಭೇಟಿ ಮಾಡಿದ ಗಳಿಗೆ ಅಮೃತ ಗಳಿಗೆಯಾಗಿತ್ತು. ತಮ್ಮ ಬರವಣಿಗೆಯ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದ ಅನುಪಮಾರವರು ತಮ್ಮ ಬಳಿ ಬಂದ ಉಷಾರವರಿಗೆ ಬೆಂಗಳೂರಿನಲ್ಲಿ ಆ ಕಾಲದಲ್ಲಿ ಬರೆಯುತ್ತಿದ್ದ ಟಿ. ಸುನಂದಮ್ಮ, ಎ. ಪಂಕಜಾ, ಎಚ್.ಎಸ್. ಪಾರ್ವತಿ, ಎಂ.ಕೆ. ಇಂದಿರಾ ಹಾಗೂ ಡಾ. ನಿರುಪಮಾ ಮುಂತಾದವರನ್ನು ಪರಿಚಯಿಸಿಕೊಟ್ಟು ಬರೆಯಲು ಪ್ರೋತ್ಸಾಹ ನೀಡಿದರು. ಇವರ ಮೊದಲ ಕಾದಂಬರಿ ಅನುಬಂಧ “ಪ್ರಜಾಮತ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳು ಹಾಗೂ ಲೇಖಕರ ಪ್ರೋತ್ಸಾಹದ ಕಾರಣದಿಂದ ಸಾಹಿತ್ಯ ಕೃಷಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಉಷಾರವರು ಇದುವರೆಗೂ ಏಳು ಕಾದಂಬರಿಗಳು, ಮೂರು ಕವನ ಸಂಕಲನ, ತುಳುವಿನಲ್ಲಿ ಒಂದು ಕವನ ಸಂಕಲನ, ಎರಡು ಸಣ್ಣಕಥಾಸಂಕಲನಗಳಲ್ಲದೇ, ಮೂರು ಪ್ರಬಂಧ ಸಂಕಲನಗಳು, ಎರಡು ವ್ಯಕ್ತಿ ಪರಿಚಯಗಳು, ಒಂದು ಪ್ರವಾಸಿ ಕಥನವನ್ನು ಬರೆದಿದ್ದಾರೆ. ಯಾವ ನಾಳೆಯೂ ನಮ್ಮದಲ್ಲ ಎನ್ನುವ ಅವರ ಆತ್ಮಕಥೆ ಸಹೃದಯರ ಮನಗೆದ್ದಿದೆ. ಕನ್ನಡ, ತುಳು, ಇಂಗ್ಲೀಷ್ ಭಾಷೆಯ ಪಾಂಡಿತ್ಯವಿರುವ ಉಷಾರವರು ತುಳುವಿನಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ. ನಾಡಿನ ಪ್ರಸಿದ್ಧ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕೆಲವು ಕವಿತೆಗಳನ್ನು ತುಳುವಿಗೆ ಅನುವಾದಿಸಿದ್ದಾರೆ. ಇವರ ಇಂಗ್ಲಿಶ್ ಲೇಖನಗಳು, ಕವನಗಳು ಫೆಮಿನಾ ಮುಂತಾದ ಪತ್ರಿಕೆಗಳಲ್ಲಿಯೂ ಇ-ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಇದಲ್ಲದೆ ಸ್ಮರಣ ಸಂಚಿಕೆಗಳು, ಅಭಿನಂದನಾ ಗ್ರಂಥಗಳಿಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.
ಕೇವಲ ಲೇಖಕಿಯಾಗಿ ಗುರುತಿಸಿಕೊಂಡಿದ್ದಷ್ಟೇ ಅಲ್ಲದೇ “ಕರ್ನಾಟಕ ಲೇಖಕಿಯರ ಸಂಘ’ದ ಅಧ್ಯಕ್ಷೆಯಾಗಿ ಅನೇಕ ಹೊಸತನಗಳಿಗೆ ನಾಂದಿ ಮಾಡಿಕೊಟ್ಟರು. ಹೊಸ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸಿದ್ದಲ್ಲದ್ದೇ ಅವರನ್ನು ಸಂಘದ ಜೊತೆ ಒಡನಾಡುವಂತೆ ಮಾಡಿ ಬರೆಯಲು ಪ್ರೇರೇಪಿಸಿದ್ದು ಉಷಾ ಪಿ. ರೈಯವರು. ಸ್ತ್ರೀಲೋಕದ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಅದಕ್ಕೆ ಪರಿಹಾರಗಳನ್ನು ವ್ಯಾಪಕವಾಗಿ ಅನೇಕ ಸಂದರ್ಭಗಳಲ್ಲಿ ಚರ್ಚಿಸಿದ್ದಾರೆ. “ಮಹಿಳಾ ದಕ್ಷತಾ ಸಮಿತಿ’ ಮತ್ತು “ವನಿತಾ ಸಹಾಯವಾಣಿ’ ಸಂಘಟನೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಉಷಾರವರು ಮಹಿಳೆಯರ ಆಂತರ್ಯದ ನೋವುಗಳಿಗೆ ಸ್ಪಂದಿಸುವ ಸೂಕ್ಷ್ಮವಂತೆ. ಅವರ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಸಹಾಯ- ಸಹಕಾರ ನೀಡಬಹುದೆಂಬುದನ್ನು ಸದಾ ಚಿಂತಿಸುವ ಚಿಂತನಶೀಲೆ.
ಇವರ ಸಾಹಿತ್ಯ ಕ್ಷೇತ್ರದಲ್ಲಿನ ಅನನ್ಯ ಸೇವೆಯನ್ನು ಗಮನಿಸಿ ಅನೇಕ ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಪ್ರಮುಖವಾದವು “ಕರಾವಳಿ ರತ್ನ ಪ್ರಶಸ್ತಿ’, “ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ’, “ಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ’, “ನೀಲಗಂಗಾ ದತ್ತಿನಿಧಿ ಪ್ರಶಸ್ತಿ’, “ಅಮ್ಮ ಪ್ರಶಸ್ತಿ’, “ಆರ್ಯಭಟ ಪ್ರಶಸ್ತಿ’, “ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ’ಗಳಿಂದ ಪುರಸ್ಕೃತರಾಗಿದ್ದಾರೆ. ಇದೀಗ “ಕರ್ನಾಟಕ ಲೇಖಕಿಯರ ಸಂಘ’ ನೀಡುವ ಪ್ರತಿಷ್ಟಿತ “ಅನುಪಮಾ ಪ್ರಶಸ್ತಿ’ಗೆ ಉಷಾ ಪಿ. ರೈಯವರು ಭಾಜನರಾಗಿದ್ದು ಕಳೆದ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಾಡೋಜ ಕಮಲಾ ಹಂಪನಾರವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಸದಾ ನಗುಮೊಗದ, ಜೀವನೋತ್ಸಾಹದ, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ, ಯಾವ ಗುಂಪುಗಾರಿಕೆಗೂ ಸೇರದ ಉಷಾರವರು ಬರವಣಿಗೆಯ ಜೊತೆ ಕಸೂತಿ, ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿ¨ªಾರೆ. ಕರಾವಳಿಯಲ್ಲಿ ಹುಟ್ಟಿ ಬೆಳೆದು, ಬೆಂಗಳೂರಿನಲ್ಲಿ ನೆಲೆ ನಿಂತಿರುವ ಉಷಾರವರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹಿಸುವ ಅವರ ಅಭಿಮಾನಿ ಬಳಗ ದೊಡ್ಡದಿದೆ.
ಪದ್ಮಿನಿ ನಾಗರಾಜು