Advertisement
ಶನಿವಾರ ದುಬೈಯಲ್ಲಿ ಫಿಂಚ್-ಮಾರ್ಗನ್ ಪಡೆಗಳು ಸೆಣೆಸಲಿವೆ.
Related Articles
Advertisement
ಇನ್ನೊಂದೆಡೆ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಅಜೇಯವಾಗಿ ಉಳಿದಿದೆ.
50-50 ಪಂದ್ಯ: ಬಲಾಬಲದ ಲೆಕ್ಕಾಚಾರದಲ್ಲಿ ಇದೊಂದು 50-50 ಪಂದ್ಯ. ಎರಡೂ ತಂಡಗಳ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸದೃಢವಾಗಿದೆ. ಅದರಲ್ಲೂ ರನ್ ಬರಗಾಲದಲ್ಲಿದ್ದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಲಂಕೆಯೆದುರು ಅರ್ಧಶತಕ ಬಾರಿಸಿ ಲಯಕ್ಕೆ ಮರಳಿರುವುದು ಕಾಂಗರೂ ಪಡೆಯ ಶಕ್ತಿಯನ್ನು ಹೆಚ್ಚಿಸಿದೆ. ನಾಯಕ ಫಿಂಚ್ ಕೂಡ ಲಯ ಕಂಡುಕೊಂಡಿದ್ದಾರೆ. ಮಾರ್ಷ್, ಮ್ಯಾಕ್ಸ್‌ವೆಲ್, ಸ್ಮಿತ್, ಸ್ಟಾಯಿನಿಸ್, ವೇಡ್ ಅವರಿಂದ ಆಸೀಸ್ ಬ್ಯಾಟಿಂಗ್ ಸರದಿ ಬೆಳೆಯಲಿದೆ.
ತ್ರಿವಳಿ ವೇಗಿಗಳಾದ ಸ್ಟಾರ್ಕ್, ಕಮಿನ್ಸ್, ಹೇಝಲ್‌ವುಡ್; ಸ್ಪಿನ್ನರ್ ಝಂಪ ಆಸ್ಟ್ರೇಲಿಯದ ಬೌಲಿಂಗ್ ಶಕ್ತಿಯಾಗಿದ್ದಾರೆ. ಕಳೆದ ಪಂದ್ಯದ ಆರಂಭದಲ್ಲಿ ಶ್ರೀಲಂಕಾ ಸಿಡಿದು ನಿಂತಾಗ ಝಂಪ ಭರ್ಜರಿ ಬ್ರೇಕ್ ಹಾಕಿದ್ದರು. ಆದರೆ ಆಲ್‌ರೌಂಡರ್‌ಗಳಾದ ಮ್ಯಾಕ್ಸ್‌ವೆಲ್ ಮತ್ತು ಸ್ಟಾಯಿನಿಸ್ ಅವರ ಎಸೆತಗಳು ಪರಿಣಾಮಕಾರಿ ಆಗಿರಲಿಲ್ಲ. ಇವರಿಬ್ಬರ 4 ಓವರ್‌ಗಳಲ್ಲಿ 51 ರನ್ ಸೋರಿ ಹೋಗಿತ್ತು.
ಇಂಗ್ಲೆಂಡ್ ಬೌಲಿಂಗ್ ಬಲ: ವೆಸ್ಟ್ ಇಂಡೀಸನ್ನು 55ಕ್ಕೆ ಉರುಳಿಸಿದ ಜೋಶ್‌ನಲ್ಲಿದ್ದ ಇಂಗ್ಲೆಂಡ್, ಬಳಿಕ ಬಾಂಗ್ಲಾದೇಶಕ್ಕೆ ಬಿಟ್ಟುಕೊಟ್ಟದ್ದು 124 ರನ್ ಮಾತ್ರ. ಬಾಂಗ್ಲಾ ವಿರುದ್ಧ ಜೇಸನ್ ರಾಯ್ 61 ರನ್ ಬಾರಿಸಿ ಮೆರೆದಿದ್ದರು. ಇವರ ಜತೆಗಾರ ಬಟ್ಲರ್, ಮಾಲನ್, ಬೇರ್‌ಸ್ಟೊ, ಮಾರ್ಗನ್, ಲಿವಿಂಗ್‌ಸ್ಟೋನ್ ಅವರೆಲ್ಲ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭವಾಗಿದ್ದಾರೆ.
ಆದರೆ ಇಂಗ್ಲೆಂಡಿನ ಸ್ಟಾರ್ ಕ್ರಿಕೆಟಿಗನಾಗಿ ಮೆರೆಯುತ್ತಿರುವವರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೊಯಿನ್ ಅಲಿ. ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಆರಂಭಿಸಿರುವ ಅಲಿ 4 ವಿಕೆಟ್ ಉರುಳಿಸಿದ್ದಾರೆ. ಮತ್ತೋರ್ವ ಸ್ಪಿನ್ನರ್ ಆದಿಲ್ ರಶೀದ್ ಕೂಡ ಕಾಂಗರೂಗಳನ್ನು ಕಾಡಬಹುದು. ವೇಗಿ ಟೈಮಲ್ ಮಿಲ್ಸ್ ಡೆತ್ ಓವರ್‌ಗಳಲ್ಲಿ ಹೆಚ್ಚು ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಒಟ್ಟಾರೆ, ಸಮಬಲದ ತಂಡಗಳ ನಡುವಿನ ಈ ಹೋರಾಟ ವಿಶ್ವಕಪ್ ಕೂಟದ ಬಿಗ್ ಮ್ಯಾಚ್ ಎನಿಸುವುದರಲ್ಲಿ ಅನುಮಾನವಿಲ್ಲ.