Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಜೊಕೋವಿಕ್‌ 7 ಪ್ರಶಸ್ತಿಗಳ ದಾಖಲೆ

12:30 AM Jan 28, 2019 | Team Udayavani |

ಮೆಲ್ಬರ್ನ್: ಸರ್ಬಿಯಾದ ಸೂಪರ್‌ ಸ್ಟಾರ್‌ ನೊವಾಕ್‌ ಜೊಕೋವಿಕ್‌ ದಾಖಲೆ 7ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಒಡೆಯನೆನಿಸಿ ನೂತನ ಎತ್ತರ ತಲುಪಿದರು. ರವಿವಾರದ ಫೈನಲ್‌ನಲ್ಲಿ ಅವರು ಸ್ಪೇನ್‌ನ ರಫೆಲ್‌ ನಡಾಲ್‌ ವಿರುದ್ಧ 6-3, 6-2, 6-3 ಅಂತರದ ಸುಲಭ ಜಯ ಒಲಿಸಿಕೊಂಡರು.

Advertisement

ಈ ಸಾಧನೆಯೊಂದಿಗೆ 31ರ ಹರೆಯದ ಜೊಕೋವಿಕ್‌ “ಮೆಲ್ಬರ್ನ್ ಪಾರ್ಕ್‌ ಕಿಂಗ್‌’ ಆಗಿ ಮೆರೆದಾಡಿದರು. 6 ಸಲ ಈ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯದ ರಾಯ್‌ ಎಮರ್ಸನ್‌ ಮತ್ತು ಸ್ವಿಜರ್‌ಲ್ಯಾಂಡಿನ ರೋಜರ್‌ ಫೆಡರರ್‌ ದಾಖಲೆಯನ್ನು ಮುರಿದರು.

2ನೇ ಮೆಲ್ಬರ್ನ್ ಫೈನಲ್‌
ಜೊಕೋವಿಕ್‌-ನಡಾಲ್‌ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸೆಣಸಿದ್ದು ಇದು ಕೇವಲ 2ನೇ ಸಲ. 2012ರಲ್ಲಿ ಮೊದಲ ಸಲ ಮುಖಾಮುಖೀಯಾದಾಗ 5 ಗಂಟೆ, 53 ನಿಮಿಷಗಳ ತನಕ ಇವರ ಹೋರಾಟ ಸಾಗಿತ್ತು. ಇದು ಗ್ರ್ಯಾನ್‌ಸ್ಲಾಮ್‌ ಚರಿತ್ರೆಯ ಸುದೀರ್ಘ‌ ಫೈನಲ್‌ ಆಗಿ ದಾಖಲಾಗಿದೆ. ರವಿವಾರವೂ ಇಂಥದೇ ಜೋಶ್‌ ಕಂಡುಬಂದೀತೆಂಬ ನಿರೀಕ್ಷೆ ಟೆನಿಸ್‌ ಅಭಿಮಾನಿಗಳದ್ದಾಗಿತ್ತು. ಆದರೆ ಜೊಕೋ ಮುಂದೆ ನಡಾಲ್‌ ಆಟ ಸಾಗಲೇ ಇಲ್ಲ. ಹೀಗಾಗಿ ಇದು ಏಕಪಕ್ಷೀಯವಾಗಿಯೇ ಮುಗಿಯಿತು.

ಮೊದಲ ಸೆಟ್‌ ಗೆಲ್ಲಲು ಜೊಕೋವಿಕ್‌ಗೆ ಕೇವಲ 36 ನಿಮಿಷ ಸಾಕಾಯಿತು. ಮೊದಲ 4 ಸರ್ವೀಸ್‌ ಗೇಮ್ಸ್‌ ವೇಳೆ ಜೊಕೋ ಒಂದೂ ಅಂಕ ಬಿಟ್ಟುಕೊಡದೆ ಪ್ರಾಬಲ್ಯ ಮೆರೆದರು. ದ್ವಿತೀಯ ಸೆಟ್‌ನಲ್ಲೂ ಜೊಕೋ ಪ್ರಾಬಲ್ಯ ಮುಂದುವರಿಯಿತು. ಅಮೋಘ ಸರ್ವ್‌ ಸರ್ಬಿಯನ್‌ ಆಟಗಾರನೊಗೆ ಮೇಲುಗೈ ಒದಗಿಸಿತು. 3ನೇ ಗೇಮ್‌ನಲ್ಲೂ ನಡಾಲ್‌ಗೆ ತಿರುಗಿ ಬೀಳಲು ಸಾಧ್ಯವಾಗಲಿಲ್ಲ. ನೇರ ಸೆಟ್‌ ಗೆಲುವುಗಳ ಮೂಲಕವೇ ಫೈನಲ್‌ ತನಕ ಸಾಗಿ ಬಂದಿದ್ದ ನಡಾಲ್‌, ಇಲ್ಲಿ ಮೂರೂ ಸೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.

4-4 ಗ್ರ್ಯಾನ್‌ಸ್ಲಾಮ್‌ ದಾಖಲೆ
ಇದರೊಂದಿಗೆ ನಡಾಲ್‌ ವಿರುದ್ಧ ಜೊಕೋವಿಕ್‌ 28-25 ಗೆಲುವಿನ ದಾಖಲೆ ಹೊಂದಿದಂತಾಯಿತು. ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ಳಲ್ಲಿ ಈ ದಾಖಲೆ 4-4ರಿಂದ ಸಮನಾಯಿತು. ಕಳೆದ ವರ್ಷದ ವಿಂಬಲ್ಡನ್‌, ಯುಎಸ್‌ ಓಪನ್‌ ಪ್ರಶಸ್ತಿಗಳನ್ನೂ ಜಯಿಸಿದ್ದ ಜೊಕೋವಿಕ್‌ ಗ್ರ್ಯಾನ್‌ಸ್ಲಾಮ್‌ ಹ್ಯಾಟ್ರಿಕ್‌ ಸಾಧಿಸಿದ ಹೆಗ್ಗಳಿಕೆಗೂ ಪಾತ್ರರಾರು.

Advertisement

ಮೇ ತಿಂಗಳಲ್ಲಿ ನಡೆಯುವ ಫ್ರೆಂಚ್‌ ಓಪನ್‌ನಲ್ಲೂ ಚಾಂಪಿಯನ್‌ ಆಗಿ ಮೂಡಿಬಂದರೆ “ಓಪನ್‌ ಎರಾ’ದಲ್ಲಿ ಎಲ್ಲ ಗ್ರ್ಯಾನ್‌ಸ್ಲಾಮ್‌ಗಳನ್ನು ಕನಿಷ್ಠ 2 ಸಲ ಗೆದ್ದ ವಿಶ್ವದ ಮೊದಲ ಟೆನಿಸಿಗನೆಂಬ ಹಿರಿಮೆ ಜೊಕೋವಿಕ್‌ ಅವರದಾಗಲಿದೆ.

“ಇಷ್ಟು ವರ್ಷ ಇಲ್ಲಿ ನಿಮ್ಮೆದುರು ನಿಲ್ಲುವುದಕ್ಕೂ, ಈ ಬಾರಿ ನಿಲ್ಲುವುದಕ್ಕೂ ಬಹಳ ವ್ಯತ್ಯಾಸವಿದೆ. ಇದು ನನ್ನ ದಾಖಲೆಯ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ. ಹೆಮ್ಮೆಯಾಗುತ್ತಿದೆ, ಮಾತೇ ಹೊರಡುತ್ತಿಲ್ಲ’
-ನೊವಾಕ್‌ ಜೊಕೋವಿಕ್‌

ಫ್ರೆಂಚ್‌ ಜೋಡಿಗೆ ಡಬಲ್ಸ್‌ ಪ್ರಶಸ್ತಿ
ಆಸ್ಟ್ರೇಲಿಯನ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಫ್ರೆಂಚ್‌ ಜೋಡಿ ಪಿಯರೆ ಹ್ಯೂಸ್‌ ಹರ್ಬರ್ಟ್‌-ನಿಕೋಲಸ್‌ ಮಹುತ್‌ ಚಾಂಪಿಯನ್‌ ಆಗಿ ಮೂಡಿಬಂದಿದೆ. ಇವರು 2017ರ ಚಾಂಪಿಯನ್ಸ್‌ ಹೆನ್ರಿ ಕಾಂಟಿನೆನ್‌ (ಫಿನ್ಲಂಡ್‌)-ಜಾನ್‌ ಪೀರ್ (ಆಸ್ಟ್ರೇಲಿಯ) ವಿರುದ್ಧ 6-4, 7-6 (7-1) ಅಂತರದ ಗೆಲುವು ದಾಖಲಿಸಿ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಒಂದು ಗಂಟೆ, 38 ನಿಮಿಷಗಳ ವರೆಗೆ ನಡೆದ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಸೆಟ್‌ 4-4 ಸಮಬಲಗೊಂಡಿದ್ದಾಗ ಕುತೂಹಲ ತೀವ್ರಗೊಂಡಿತ್ತು. ಎರಡನೇ ಸೆಟ್‌ ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು.ಈ ಹಿಂದೆ ಯುಎಸ್‌ ಓಪನ್‌, ವಿಂಬಲ್ಡನ್‌ ಹಾಗೂ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದಿದ್ದ ಈ ಜೋಡಿ, ಈಗ “ಮೆಲ್ಬರ್ನ್ ಪಾರ್ಕ್‌’ನಲ್ಲೂ ಮೆರೆದಾಡಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಆವೃತ್ತವೊಂದನ್ನು ಪೂರ್ತಿಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next