Advertisement

ಫ್ರೆಂಚ್‌ ಓಪನ್‌: ಹಿಂದೆ ಸರಿದ ಚುಂಗ್‌ ಹಿಯೋನ್‌

06:00 AM May 24, 2018 | |

ಪ್ಯಾರಿಸ್‌: ದಕ್ಷಿಣ ಕೊರಿಯಾದ ಅಪಾಯಕಾರಿ ಆಟಗಾರ ಚುಂಗ್‌ ಹಿಯೋನ್‌ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಪಾದದ ನೋವಿನಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ. ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ತನಕ ಸಾಗಿದ ಚುಂಗ್‌ ಹಿಯೋನ್‌, ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ರಫೆಲ್‌ ನಡಾಲ್‌ ಅವರನ್ನು ಸೋಲಿಸ ಬಲ್ಲ ಸಾಮರ್ಥ್ಯವುಳ್ಳ ಆಟಗಾರನೆಂದು ಗುರುತಿಸಲ್ಪಟ್ಟಿದ್ದರು. 

Advertisement

“ಈ ಋತುವಿನುದ್ದಕ್ಕೂ ಪಾದದ ಸೆಳೆತಕ್ಕೊಳ ಗಾಗಿದ್ದೆ. ಇದಕ್ಕೆ ಸಣ್ಣ ಚಿಕಿತ್ಸೆಯ ಅಗತ್ಯವಿದೆ. ಬಳಿಕ ವಿಶ್ರಾಂತಿ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ ಚುಂಗ್‌ ಹಿಯೋನ್‌. ಇದೇ ಕಾರಣಕ್ಕಾಗಿ ಕಳೆದ ತಿಂಗಳ ಹ್ಯೂಸ್ಟನ್‌ ಮತ್ತು ಬಾರ್ಸಿಲೋನಾ ಓಪನ್‌ ಕೂಟಗಳಲ್ಲೂ ಹಿಯೋನ್‌ ಆಡಿರಲಿಲ್ಲ. ಕಳೆದ ತಿಂಗಳಷ್ಟೇ ಜೀವನಶ್ರೇಷ್ಠ 19ನೇ ರ್‍ಯಾಂಕಿಂಗ್‌ ಪಡೆದ ಹೆಗ್ಗಳಿಕೆ 21ರ ಹರೆಯದ ಹಿಯೋನ್‌ ಅವರದಾಗಿತ್ತು.  

ಅಂಕಿತಾ ನಿರ್ಗಮನ
ಪ್ಯಾರಿಸ್‌:
ಭಾರತದ ಅಂಕಿತಾ ರೈನಾ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿಗೇರುವಲ್ಲಿ ವಿಫ‌ಲರಾಗಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲೇ ಅವರು ರಶ್ಯದ ಎವೆನಿಯಾ ರೊಡಿನಾ ವಿರುದ್ಧ 6-3, 7-6 ಅಂತರದ ಸೋಲನುಭವಿಸಿದರು. 10ನೇ ಶ್ರೇಯಾಂಕದ ಎದುರಾಳಿ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡ ಬಳಿಕ ತಿರುಗಿ ಬಿದ್ದರೂ ಅಂಕಿತಾಗೆ ಗೆಲುವಿನ ಅಂಕ ಲಭಿಸಲಿಲ್ಲ. ಇವರಿಬ್ಬರ ಹೋರಾಟ ಒಂದು ಗಂಟೆ, 41 ನಿಮಿಷಗಳ ತನಕ ಸಾಗಿತು. “ಇದೊಂದು ಕ್ಲೋಸ್‌ ಮ್ಯಾಚ್‌ ಆಗಿತ್ತು. ಅಂಕಿತಾ ಆವೆಯಂಗಳದಲ್ಲಿ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿದರು’ ಎಂದು ಅಂಕಿತಾ ರೈನಾ ಕೋಚ್‌ ಹೇಮಂತ್‌ ಬೆಂಡ್ರೆ ಹೇಳಿದರು.

ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಕೂಡ ಮೊದಲ ಸುತ್ತಿನಲ್ಲಿ ಸೋಲುಂಡಿದ್ದಾರೆ. ಅವರನ್ನು ಸ್ಲೊವಾಕಿಯಾದ ಮಾರ್ಟಿನ್‌ ಕ್ಲಿಝಾನ್‌ 4-6, 6-4, 6-1 ಅಂತರದಿಂದ ಪರಾಭವಗೊಳಿಸಿದರು. ಭಾರತದ ಖ್ಯಾತ ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. ಭಾಂಬ್ರಿ ಟಾಪ್‌-100 ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಂಡು ಈ ಅರ್ಹತೆ ಸಂಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next