Advertisement
420,000 ಡಾಲರ್ ಬಹುಮಾನದ “ಆಸ್ಟ್ರೇಲಿಯನ್ ಓಪನ್ ಸೂಪರ್-500′ ಬ್ಯಾಡ್ಮಿಂಟನ್ ಪಂದ್ಯಾವಳಿ ಮಂಗಳವಾರ ಆರಂಭವಾಗಲಿದೆ. ಇಲ್ಲಾದರೂ ಸಿಂಧು ಫಾರ್ಮ್ ಕಂಡುಕೊಳ್ಳ ಬಹುದೇ ಎಂಬುದೊಂದು ನಿರೀಕ್ಷೆ. ಸಿಂಧು ಮೊದಲ ಸುತ್ತಿನಲ್ಲಿ ಭಾರತದವರೇ ಆದ ಅಶ್ಮಿತಾ ಚಲಿಹಾ ಅವರನ್ನು ಎದುರಿಸಲಿದ್ದಾರೆ. ಇವರಿಬ್ಬರು ಈವರೆಗೆ 2 ಸಲ ಮುಖಾಮುಖೀಯಾಗಿದ್ದು, ಎರಡರಲ್ಲೂ ಸಿಂಧು ಜಯ ಸಾಧಿಸಿದ್ದಾರೆ. ಮಾಜಿ ನಂ.1 ಖ್ಯಾತಿಯ ಕೆ. ಶ್ರೀಕಾಂತ್ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಿಡ್ನಿ ಅಂಕಣ ವೇದಿಕೆಯಾದೀತೇ ಎಂಬುದೊಂದು ಪ್ರಶ್ನೆ.
ಇತ್ತೀಚಿನ ಕೂಟಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದವರೆಂದರೆ ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್, ಎಚ್.ಎಸ್. ಪ್ರಣಯ್ ಮಾತ್ರ. ವಿಶ್ವದ ನಂ.2 ಜೋಡಿಯಾಗಿರುವ ಚಿರಾಗ್-ಸಾತ್ವಿಕ್ ಅವರಂತೂ ಈ ವರ್ಷ 4 ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ಪ್ರಣಯ್ ಮಲೇಷ್ಯಾ ಮಾಸ್ಟರ್ ಚಾಂಪಿಯನ್‌ಶಿಪ್ ಜಯಿಸುವ ಜತೆಗೆ 4 ಕ್ವಾರ್ಟರ್ ಫೈನಲ್ ಕಂಡಿದ್ದಾರೆ. ಸಿಡ್ನಿಯಲ್ಲಿ ಎಚ್.ಎಸ್. ಪ್ರಣಯ್ ಹಾಂಕಾಂಗ್‌ನ ಲೀ ಚುಕ್ ವ್ಯೂ ವಿರುದ್ಧ, ಕೆನಡಾ ಓಪನ್ ಚಾಂಪಿಯನ್ ಲಕ್ಷ್ಯ ಸೇನ್ ಚೀನದ ಲು ಗುವಾಂಗ್ ಜು ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಯುವ ಆಟಗಾರ ಪ್ರಿಯಾಂಶು ರಾಜಾವತ್ ಕೂಡ ಸಿಡ್ನಿ ಕಣದಲ್ಲಿದ್ದಾರೆ. ಇವರು ಆಸ್ಟ್ರೇಲಿಯದವರೇ ಆದ ನಥನ್ ಟಾಂಗ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.