ಮೆಲ್ಬರ್ನ್: ಕಳೆದ 6 ವರ್ಷಗಳಿಂದ 28 ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಜೇಯರಾಗಿರುವ ನೊವಾಕ್ ಜೊಕೋವಿಕ್ 2024ರ ಕೂಟವನ್ನು 4 ಸೆಟ್ ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಕ್ರೊವೇಶಿಯಾದ ಡಿನೊ ಪ್ರಿಜ್ಮಿಕ್ ವಿರುದ್ಧದ ಮೊದಲ ಸುತ್ತಿನ ಪಂದ್ಯವನ್ನು 6-2, 6-7 (5-7), 6-3, 6-4 ಅಂತರದಿಂದ ಗೆದ್ದರು.
4ನೇ ಶ್ರೇಯಾಂಕದ ಇಟಲಿ ಆಟಗಾರ ಜಾನಿಕ್ ಸಿನ್ನರ್ ನೇರ ಸೆಟ್‌ಗಳ ಜಯದೊಂದಿಗೆ ದ್ವಿತೀಯ ಸುತ್ತು ತಲುಪಿದರು. ಅವರು ನೆದರ್ಲೆಂಡ್ಸ್‌ನ ಬೋಟಿಕ್ ವಾನ್ ಡಿ ಝಾಂಡ್‌ಶಲ್ಪ್ ವಿರುದ್ಧ 6-4, 7-5, 6-3 ಅಂತರದ ಮೇಲುಗೈ ಸಾಧಿಸಿದರು.
ಆದರೆ ರಷ್ಯಾದ ಆ್ಯಂಡ್ರೆ ರುಬ್ಲೇವ್ ಮೊದಲ ಸುತ್ತು ದಾಟಲು 5 ಸೆಟ್‌ಗಳ ಕಠಿನ ಕಾದಾಟ ನಡೆಸಬೇಕಾಯಿತು. ಮೊದಲ ಸಲ ಮೆಲ್ಬರ್ನ್ ಪಾರ್ಕ್ ಟೂರ್ನಿಯಲ್ಲಿ ಆಡಲಿಳಿದ ಬ್ರಝಿಲ್‌ನ ಥಿಯಾಗೊ ಸೆಬೋತ್ ವೈಲ್ಡ್ ರಷ್ಯನ್ ಟೆನಿಸಿಗನಿಗೆ ಭಾರೀ ಬೆವರಿಳಿಸಿದರು. ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟ 5ನೇ ಸೆಟ್ ವಶಪಡಿಸಿಕೊಳ್ಳುವ ಮೂಲಕ ರುಬ್ಲೇವ್ ನಿಟ್ಟುಸಿರೆಳೆದರು. ಅವರ ಗೆಲುವಿನ ಅಂತರ 7-5, 6-4, 3-6, 4-6, 7-6 (6). ಸೆಬೋತ್ ವೈಲ್ಡ್ ಕಳೆದ ಫ್ರೆಂಚ್ ಓಪನ್ ಕೂಟದ ಮೊದಲ ಸುತ್ತಿನಲ್ಲೇ ಡ್ಯಾನಿಲ್ ಮೆಡ್ವೆಡೇವ್‌ಗೆ ಆಘಾತವಿಕ್ಕಿದ್ದರು.
ಅಮೆರಿಕದ 12ನೇ ಶ್ರೇಯಾಂಕಿತ ಆಟಗಾರ ಟೇಲರ್ ಫ್ರಿಟ್ಜ್ ಕೂಡ 5 ಸೆಟ್‌ಗಳ ಹೋರಾಟದಲ್ಲಿ ಗೆದ್ದು ಬಂದರು. ಆರ್ಜೆಂಟೀನಾದ ಡಯಾಝ್ ಅಕೋಸ್ಟ ಅವರನ್ನು 4-6, 6-3, 3-6, 6-2, 6-4ರಿಂದ ಸೋಲಿಸಿದರು.
ಲೇಲಾ, ಸಕ್ಕರಿ ಜಯ
ವನಿತಾ ವಿಭಾಗದಲ್ಲಿ ಕೆನಡಾದ ಲೇಲಾ ಫೆರ್ನಾಂಡಿಸ್ ಜೆಕ್‌ನ ಅರ್ಹತಾ ಆಟಗಾರ್ತಿ ಸಾರಾ ಬಿಜೆÉಕ್ ವಿರುದ್ಧ 7-6 (7-5), 6-2 ಅಂತರದಿಂದ ಗೆದ್ದು ಬಂದರು.
ಜೆಕ್‌ನ ಮತ್ತೋರ್ವ ಆಟಗಾರ್ತಿ ಬಾಬೋìರಾ ಕ್ರೆಜಿಕೋವಾ ಜಪಾನ್‌ನ ಮೈ ಹೊಂಟಾಮಾ ಅವರನ್ನು 2-6, 6-4, 6-3ರಿಂದ ಮಣಿಸಿದರು. ಗ್ರೀಸ್ ಆಟಗಾರ್ತಿ ಮರಿಯಾ ಸಕ್ಕರಿ 6-4, 6-1 ನೇರ ಸೆಟ್‌ಗಳಿಂದ ಜಪಾನ್‌ನ ನಾವೊ ಹಿಬಿನೊ ಅವರನ್ನು ಪರಾಭವಗೊಳಿಸಿದರು.