Advertisement

ಹಾಲೆಪ್‌-ವೋಜ್ನಿಯಾಕಿ ಫೈನಲ್‌ ಓಟ

09:52 AM Jan 26, 2018 | Team Udayavani |

ಮೆಲ್ಬರ್ನ್: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಮತ್ತು ನಂ.2 ಖ್ಯಾತಿಯ ಕ್ಯಾರೋಲಿನ್‌ ವೋಜ್ನಿಯಾಕಿ ಆಸ್ಟ್ರೇಲಿ ಯನ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿಗಾಗಿ ಶನಿವಾರ ಸೆಣಸಲಿದ್ದಾರೆ. ಇವರಿಬ್ಬರೂ ಈವರೆಗೆ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಕಿರೀಟ ಏರಿಸಿಕೊಂಡಿಲ್ಲ. ಹೀಗಾಗಿ ಈ ಬಾರಿ ಟೆನಿಸ್‌ ಅಭಿಮಾನಿಗಳು ನೂತನ ಆಸ್ಟ್ರೇಲಿಯನ್‌ ಓಪನ್‌ ರಾಣಿಯೊಬ್ಬಳನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.

Advertisement

ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಕ್ಯಾರೋಲಿನ್‌ ವೋಜ್ನಿಯಾಕಿ ಒಂದು ಗಂಟೆ, 37 ನಿಮಿಷಗಳ ಹೋರಾಟದ ಬಳಿಕ ಬೆಲ್ಜಿಯಂನ ಶ್ರೇಯಾಂಕ ರಹಿತ ಆಟಗಾರ್ತಿ ಎಲಿಸ್‌ ಮಾರ್ಟೆನ್ಸ್‌ ಅವರನ್ನು 6-3, 7-6 (7-2) ಅಂತರದಿಂದ ಕೆಡವಿದರು. ಮಾರ್ಟೆನ್ಸ್‌ಗೆ ಇದು ಪ್ರಥಮ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಆಗಿದ್ದು, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡುತ್ತಿರುವುದು ಇದೇ ಮೊದಲ ಸಲವಾಗಿದೆ.

ಅನಂತರದ ಸೆಮಿಫೈನಲ್‌ನಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್‌ ಭಾರೀ ಹೋರಾಟದ ಬಳಿಕ 2016ರ ಚಾಂಪಿಯನ್‌, ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು 6-3, 4-6, 9-7 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಕೆರ್ಬರ್‌ ಸೋಲಿದೊಂದಿಗೆ ಈ ಕೂಟದಲ್ಲಿದ್ದ ಕೊನೆಯ “ಮಾಜಿ ಚಾಂಪಿಯನ್‌’ ಆಟಗಾರ್ತಿಯ ನಿರ್ಗಮನವಾದಂತಾಗಿದೆ.

ನಂ.1-2 ನಡುವಿನ ಹೋರಾಟ
ಆಸ್ಟ್ರೇಲಿಯನ್‌ ಓಪನ್‌ ಇತಿಹಾಸದಲ್ಲಿ ನಂ.1 ಮತ್ತು ನಂ.2 ಆಟಗಾರ್ತಿಯರು ಫೈನಲ್‌ನಲ್ಲಿ ಸೆಣಸುತ್ತಿರುವುದು ಇದು 17ನೇ ಸಲ. ಈವರೆಗೆ ನಂ.1 ಮತ್ತು ನಂ.2 ಆಟಗಾರ್ತಿಯರು ತಲಾ 8 ಸಲ ಪ್ರಶಸ್ತಿ ಜಯಿಸಿದ್ದಾರೆ. ಕೊನೆಯ ಸಲ ಇದು ಸಂಭವಿಸಿದ್ದು 2015ರಲ್ಲಿ. ಅಂದು ಅಗ್ರ ರ್‍ಯಾಂಕಿಂಗ್‌ನ ಸೆರೆನಾ ವಿಲಿಯಮ್ಸ್‌ ನಂ.2 ಮರಿಯಾ ಶರಪೋವಾ ಅವರನ್ನು ಮಣಿಸಿದ್ದರು.

ಹಾಲೆಪ್‌ 3 ಸೆಟ್‌ ಹೋರಾಟ
ಸಿಮೋನಾ ಹಾಲೆಪ್‌ ಪಾಲಿಗೆ ಇದು ಅದೃಷ್ಟದ ಜಯವಾಗಿತ್ತು. 2016ರ ಚಾಂಪಿಯನ್‌ ಕೆರ್ಬರ್‌ ವಿರುದ್ಧ ಮೊದಲ ಸೆಟ್‌ ಗೆದ್ದ ಹಾಲೆಪ್‌, ದ್ವಿತೀಯ ಸೆಟ್‌ ವೇಳೆ 3-1ರ ಮುನ್ನಡೆಯಲ್ಲಿದ್ದರು. ಇದನ್ನು ಸುಲಭದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಈ ಹಂತದಲ್ಲಿ ತಿರುಗಿ ಬಿದ್ದ ಕೆರ್ಬರ್‌ 6-4ರ ಗೆಲುವು ಸಾಧಿಸಿದರು. ನಿರ್ಣಾಯಕ ಸೆಟ್‌ ಅಡಿಗಡಿಗೆ ಮೇಲೆ ಕೆಳಗಾಗುತ್ತ ಸಾಗತೊಡಗಿತು. ಕೊನೆಗೂ ಸುದೀರ್ಘ‌ ಹೋರಾಟದ ಬಳಿಕ ಹಾಲೆಪ್‌ 9-7ರಿಂದ ಇದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಜಿದ್ದಾಜಿದ್ದಿ ಮುಖಾಮುಖೀ 2 ಗಂಟೆ, 20 ನಿಮಿಷಗಳ ತನಕ ಸಾಗಿತು. “ನಿಜಕ್ಕೂ ಇದು ಅತ್ಯಂತ ಕಠಿನ ಸ್ಪರ್ಧೆಯಾಗಿತ್ತು. ನನ್ನ ಕಾಲುಗಳು ಈಗಲೂ ನಡುಗುತ್ತಿವೆ. ಜತೆಗೆ ನನ್ನ ಪಾಲಿಗಿದು ಭಾವುಕ ಗಳಿಗೆಯೂ ಹೌದು. ಏಕೆಂದರೆ ನಾನು ಗೆದ್ದು ಫೈನಲ್‌ ತಲಪಿದ್ದೇನೆ…’ ಎಂದು ಸಿಮೋನಾ ಹಾಲೆಪ್‌ ಪ್ರತಿಕ್ರಿಯಿಸಿದ್ದಾರೆ. 

Advertisement

ಮರಿನ್‌ ಸಿಲಿಕ್‌ ಫೈನಲ್‌ ಲಕ್‌
ಆರನೇ ಶ್ರೇಯಾಂಕದ ಕ್ರೊವೇಶಿಯನ್‌ ಟೆನಿಸಿಗ ಮರಿನ್‌ ಸಿಲಿಕ್‌ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಫೈನಲಿಗೆ ಲಗ್ಗೆ ಇರಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಅವರು ಬ್ರಿಟನ್ನಿನ ಕೈಲ್‌ ಎಡ್ಮಂಡ್‌ಗೆ 6-2, 7-6 (7-4), 6-2 ಅಂತರದಿಂದ ಆಘಾತವಿಕ್ಕಿದರು.  

“ರಾಡ್‌ ಲೆವರ್‌ ಅರೆನಾ’ದಲ್ಲಿ ಅಮೋಘ ಸರ್ವ್‌ ಹಾಗೂ 32 ವಿನ್ನರ್‌ಗಳೊಂದಿಗೆ ವಿಜೃಂಭಿಸಿದ ಮರಿನ್‌ ಸಿಲಿಕ್‌ ಬ್ರಿಟನ್‌ ಟೆನಿಸಿಗನ ಕನಸನ್ನು ಛಿದ್ರಗೊಳಿಸಿ ದರು. 2 ಗಂಟೆ, 18 ನಿಮಿಷಗಳ ತನಕ ಇವರಿಬ್ಬರ ಕದನ ಸಾಗಿತು. ಎಂದೂ ಗ್ರ್ಯಾನ್‌ಸ್ಲಾಮ್‌ನಲ್ಲಿ 4ನೇ ಸುತ್ತು ದಾಟದ ಎಡ್ಮಂಡ್‌ಗೆ ಸೆಮಿಫೈನಲ್‌ ತಲಪಿದ್ದೇ ಖುಷಿ ಕೊಡುವ ಸಂಗತಿಯಾಗಿತ್ತು. ಶುಕ್ರವಾರ ರೋಜರ್‌ ಫೆಡರರ್‌ ಮತ್ತು ಹೈಯಾನ್‌ ಚುಂಗ್‌ ನಡುವೆ ದ್ವಿತೀಯ ಸೆಮಿಫೈನಲ್‌ ನಡೆಯಲಿದ್ದು, ಇಲ್ಲಿ ಗೆದ್ದವರನ್ನು ಸಿಲಿಕ್‌ ರವಿವಾರದ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಸಿಲಿಕ್‌ ಈವರೆಗೆ ಒಂದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದಾರೆ. ಅದು 2014ರ ಯುಎಸ್‌ ಓಪನ್‌ ಪಂದ್ಯಾವಳಿ ಯಲ್ಲಿ ಒಲಿದಿತ್ತು. ಅಲ್ಲಿ ಜಪಾನಿನ ಕೀ ನಿಶಿಕೊರಿ ವಿರುದ್ಧ ಸಿಲಿಕ್‌ 6-3, 6-3, 6-3 ಅಂತರದ ಜಯ ಸಾಧಿಸಿದ್ದರು. ಅಂದಿನದು ಇಬ್ಬರ ಪಾಲಿಗೂ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿತ್ತು. ಬಳಿಕ ಕಳೆದ ವರ್ಷ ವಿಂಬಲ್ಡನ್‌ ಪ್ರಶಸ್ತಿ ಸುತ್ತಿಗೂ ಸಿಲಿಕ್‌ ಲಗ್ಗೆ ಇರಿಸಿದ್ದರು. ಆದರೆ ಅಲ್ಲಿ ರೋಜರ್‌ ಫೆಡರರ್‌ ವಿರುದ್ಧ ಕ್ರೊವೇಶಿಯನ್‌ ಆಟಗಾರನ ಮ್ಯಾಜಿಕ್‌ ನಡೆದಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next