ಕ್ರೈಸ್ಟ್ ಚರ್ಚ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಹೈವೋಲ್ಟೇಜ್ ವನಿತಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ.
ಇಲ್ಲಿನ ಹೇಗ್ಲೆ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಐದು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದರೆ, ಇಂಗ್ಲೆಂಡ್ ತಂಡ 285 ರನ್ ಮಾತ್ರ ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಏಳನೇ ಬಾರಿಗೆ ವನಿತಾ ವಿಶ್ವಕಪ್ ಚಾಂಪಿಯನ್ ಆಯಿತು.
ಆಸೀಸ್ ಭಾರಿ ಮೊತ್ತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ಮೊದಲ ವಿಕೆಟ್ ಗೆ 160 ರನ್ ಕಲೆಹಾಕಿತು. ಸೆಮಿ ಫೈನಲ್ ನಲ್ಲಿ ಶತಕ ಬಾರಿಸಿದ್ದ ಅಲಿಸಾ ಹೀಲಿ ಫೈನಲ್ ಪಂದ್ಯದಲ್ಲೂ ಶತಕ ಬಾರಿಸಿದರು. 138 ಎಸೆತ ಎದುರಿಸಿದ ಹೀಲಿ 26 ಬೌಂಡರಿ ನೆರವಿನಿಂದ 170 ರನ್ ಗಳಿಸಿದರು. ಉಳಿದಂತೆ ಹೇನ್ಸ್ 68 ರನ್ ಮತ್ತು ಬೆತ್ ಮೂನಿ 62 ರನ್ ಗಳಿಸಿದರು. 50 ಓವರ್ ನಲ್ಲಿ ಆಸೀಸ್ ಐದು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.
ಇದನ್ನೂ ಓದಿ:ವಿಶ್ವಕಪ್ ಫೈನಲ್ ನಲ್ಲಿ ಅಲಿಸಾ ಹೀಲಿ ಬೊಂಬಾಟ್ ಬ್ಯಾಟಿಂಗ್; ಹೊಸದಾಖಲೆ ಬರೆದ ಸ್ಟಾರ್ಕ್ ಪತ್ನಿ
ಸೀವರ್ ಏಕಾಂಗಿ ಹೋರಾಟ: ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 86 ರನ್ ಆಗುವಷ್ಟರಲ್ಲಿ ಪ್ರಮುಖ ಮೂವರು ಪೆವಿಲಿಯನ್ ಸೇರಿಯಾಗಿತ್ತು. ವಿಕೆಟ್ ಉರುಳುತ್ತಿದ್ದರೂ ಒಂದೆಡೆ ಹೋರಾಟ ಮುಂದುವರಿಸಿದ ನತಾಲಿಯಾ ಸೀವರ್ ಅಜೇಯ 148 ರನ್ ಬಾರಿಸಿದರು. ಅಂತಿಮವಾಗಿ ಇಂಗ್ಲೆಂಡ್ ವನಿತೆಯರ ತಂಡ 43.4 ಓವರ್ ನಲ್ಲಿ 285 ರನ್ ಗಳಿಗೆ ಆಲೌಟಾಯಿತು.
ಹೀಲಿ ದಾಖಲೆ: ಇದೇ ವೇಳೆ ಅಲಿಸಾ ಹೀಲಿ ನ್ಯೂಜಿಲೆಂಡ್‌ನ ಶ್ರೇಷ್ಠ ಬ್ಯಾಟರ್ ಡೆಬ್ಬಿ ಹಾಕ್ಲೆ ಅವರ 25-ವರ್ಷ ಹಳೆಯ ದಾಖಲೆಯನ್ನು ಮುರಿದರು. ಅಲ್ಲದೆ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆ ಬರೆದರು.