Advertisement

ಅಡಿಲೇಡ್‌: ಮೇಲೆ ಬಿದ್ದ ಆಸ್ಟ್ರೇಲಿಯ

06:55 AM Nov 10, 2018 | |

ಅಡಿಲೇಡ್‌: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಅಡಿಲೇಡ್‌ನ‌ಲ್ಲಿ ನಡೆದ ದ್ವಿತೀಯ ಪಂದ್ಯವನ್ನು 7 ರನ್ನುಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯ ಏಕದಿನ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಜತೆಗೆ ಸತತ 7 ಪಂದ್ಯಗಳ ಸೋಲಿನ ಸರಪಣಿಯನ್ನೂ ಕಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯವನ್ನು 48.3 ಓವರ್‌ಗಳಲ್ಲಿ 231 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿದ ದಕ್ಷಿಣ ಆಫ್ರಿಕಾ, ಬಳಿಕ ತಾನೂ ಕುಸಿತ ಅನುಭವಿಸಿ 9 ವಿಕೆಟಿಗೆ 224 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಆಫ್ರಿಕಾ 6 ವಿಕೆಟ್‌ಗಳಿಂದ ಗೆದ್ದಿತ್ತು. ಸರಣಿ ನಿರ್ಣಾಯಕ ಮುಖಾಮುಖೀ ನ. 11ರಂದು ಹೋಬರ್ಟ್‌ನಲ್ಲಿ ನಡೆಯಲಿದೆ.

ವೇಗಿಗಳ ಮೆರೆದಾಟ
ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯದಕ್ಷಿಣ ಆಫ್ರಿಕಾಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಅಲ್ಲದೇ ಅಡಿಲೇಡ್‌ ಟ್ರ್ಯಾಕ್‌ ವೇಗದ ಬೌಲರ್‌ಗಳಿಗೆ ಅಮೋಘ ನೆರವು ನೀಡುತ್ತಿತ್ತು. ಮಾರ್ಕಸ್‌ ಸ್ಟೊಯಿನಿಸ್‌ 3, ಮಿಚೆಲ್‌ ಸ್ಟಾರ್ಕ್‌ ಮತ್ತು ಹ್ಯಾಝಲ್‌ವುಡ್‌ ತಲಾ 2 ವಿಕೆಟ್‌ ಕಿತ್ತು ಹರಿಣಗಳಿಗೆ ಕಡಿವಾಣ ಹಾಕಿದರು. ಈ ಪಂದ್ಯದ ಏಕೈಕ ಅರ್ಧ ಶತಕ ಹೊಡೆದ ಮಿಲ್ಲರ್‌ (51) ಮತ್ತು ನಾಯಕ ಡು ಪ್ಲೆಸಿಸ್‌ (47) 74 ರನ್‌ ಜತೆಯಾಟ ನಡೆಸಿದಾಗ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸುವ ನಿರೀಕ್ಷೆಯಿತ್ತಾದರೂ ಇದು ಫ‌ಲ ನೀಡಲಿಲ್ಲ.
ಆಸ್ಟ್ರೇಲಿಯದ ದೊಡ್ಡ ಮೊತ್ತಕ್ಕೆ ಬ್ರೇಕ್‌ ಹಾಕಿದವರೆಂದರೆ ರಬಾಡ (54ಕ್ಕೆ 4) ಮತ್ತು ಪ್ರಿಟೋರಿಯಸ್‌ (32ಕ್ಕೆ 3). ಕ್ಯಾರಿ ಸರ್ವಾಧಿಕ 47, ಲಿನ್‌ 44 ರನ್‌ ಹೊಡೆದರು. 41 ರನ್‌ ಮಾಡಿದ ನಾಯಕ ಫಿಂಚ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-48.3 ಓವರ್‌ಗಳಲ್ಲಿ 231 (ಕ್ಯಾರಿ 47, ಲಿನ್‌ 44, ರಬಾಡ 54ಕ್ಕೆ 4, ಪ್ರಿಟೋರಿಯಸ್‌ 32ಕ್ಕೆ 3). ದಕ್ಷಿಣ ಆಫ್ರಿಕಾ-50 ಓವರ್‌ಗಳಲ್ಲಿ 9 ವಿಕೆಟಿಗೆ 224 (ಮಿಲ್ಲರ್‌ 51, ಡು ಪ್ಲೆಸಿಸ್‌ 47, ಸ್ಟೊಯಿನಿಸ್‌ 35ಕ್ಕೆ 3, ಹ್ಯಾಝಲ್‌ವುಡ್‌ 51ಕ್ಕೆ 2, ಸ್ಟಾರ್ಕ್‌ 51ಕ್ಕೆ 2). ಪಂದ್ಯಶ್ರೇಷ್ಠ: ಆರನ್‌ ಫಿಂಚ್‌.

Advertisement

Udayavani is now on Telegram. Click here to join our channel and stay updated with the latest news.

Next