Advertisement

Australia-ಸ್ಕಾಟ್ಲೆಂಡ್‌ ಮುಖಾಮುಖಿ: ಸೂಪರ್‌-8ಕ್ಕೇರುವ ಮತ್ತೊಂದು ತಂಡ ಯಾವುದು?

11:30 PM Jun 15, 2024 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯ): “ಬಿ’ ವಿಭಾಗದಿಂದ ಆಸ್ಟ್ರೇಲಿಯದ ಜತೆ ಸೂಪರ್‌-8 ಸುತ್ತು ಪ್ರವೇಶಿಸಲಿರುವ ಮತ್ತೊಂದು ತಂಡ ಯಾವುದು ಎಂಬ ಪ್ರಶ್ನೆಗೆ ರವಿವಾರ ಬೆಳಗ್ಗೆ ಉತ್ತರ ಲಭಿಸಲಿದೆ. ಇಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ನಡುವೆ ಪೈಪೋಟಿ ಇದೆ. ಗ್ರಾಸ್‌ ಐಲೆಟ್‌ನಲ್ಲಿ ಆಸ್ಟ್ರೇಲಿಯ-ಸ್ಕಾಟ್ಲೆಂಡ್‌ ಮುಖಾಮುಖಿಯಾಗಲಿದ್ದು, ಇಲ್ಲಿನ ಫ‌ಲಿತಾಂಶ ನಿರ್ಣಾಯಕವಾಗಲಿದೆ.

Advertisement

ಇದಕ್ಕೂ ಕೆಲವು ಗಂಟೆಗಳ ಮೊದಲು ಇಂಗ್ಲೆಂಡ್‌ ತಂಡ ನಮೀಬಿಯಾವನ್ನು ಎದುರಿಸಲಿದೆ. ಇಲ್ಲಿ ಇಂಗ್ಲೆಂಡ್‌ ಗೆದ್ದರೆ ಅಂಕ 5ಕ್ಕೆ ಏರುತ್ತದೆ. ಸ್ಕಾಟ್ಲೆಂಡ್‌ ಕೂಡ 5 ಅಂಕ ಹೊಂದಿದೆ. ಆದರೆ ರನ್‌ರೇಟ್‌ನಲ್ಲಿ ಇಂಗ್ಲೆಂಡ್‌ಗಿಂತ ಹಿಂದಿದೆ. ಒಂದು ವೇಳೆ ಆಸ್ಟ್ರೇಲಿಯವನ್ನು ಸ್ಕಾಟ್ಲೆಂಡ್‌ ಪಡೆ ಬುಡಮೇಲು ಮಾಡಿದರೆ, ಅಥವಾ ಈ ಮುಖಾಮುಖೀ ಮಳೆಯಿಂದ ನಡೆಯದೇ ಹೋದರೆ ಆಗ ಇಂಗ್ಲೆಂಡ್‌ ಮನೆಗೆ ಮರಳುತ್ತದೆ. ಹಾಗೆಯೇ ನಮೀಬಿಯಾ ವಿರುದ್ಧ ಸೋತರೆ, ಅಥವಾ ಈ ಪಂದ್ಯ ಮಳೆಯಲ್ಲಿ ಕೊಚ್ಚಿಹೋದರೂ ಆಂಗ್ಲರು ಮನೆಯ ಹಾದಿ ಹಿಡಿಯಲಿದ್ದಾರೆ. ಆಗ ಆಸ್ಟ್ರೇಲಿಯ-ಸ್ಕಾಟ್ಲೆಂಡ್‌ ಪಂದ್ಯ ಮಹತ್ವ ಕಳೆದುಕೊಳ್ಳುತ್ತದೆ.

ಆಸೀಸ್‌ ಟಾಪ್‌ ಫಾರ್ಮ್
ಮಾಜಿ ಚಾಂಪಿಯನ್‌ ಆಸ್ಟ್ರೇಲಿಯ ಈವರೆಗಿನ ಮೂರೂ ಪಂದ್ಯಗಳನ್ನು ಗೆದ್ದು ಟಾಪ್‌ ಫಾರ್ಮ್ ಪ್ರದರ್ಶಿಸಿದೆ. ಇಂಗ್ಲೆಂಡ್‌ಗೆ 36 ರನ್ನುಗಳಿಂದ ಬರೆ ಎಳೆದದ್ದು ಆಸೀಸ್‌ ಪಾಲಿನ ದೊಡ್ಡ ಜಯ. ಉಳಿದಂತೆ ಅದು ದುರ್ಬಲ ತಂಡಗಳಾದ ನಮೀಬಿಯಾ ಮತ್ತು ಒಮಾನ್‌ ವಿರುದ್ಧ ಗೆದ್ದು ಬಂದಿತ್ತು.

ರಿಚಿ ಬೆರ್ರಿಂಗ್ಟನ್‌ ನೇತೃತ್ವದ ಸ್ಕಾಟ್ಲೆಂಡ್‌ ಈವರೆಗೆ ಸೋಲನ್ನೇ ಕಂಡಿಲ್ಲ. ಇಂಗ್ಲೆಂಡ್‌ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡು ಒಂದಂಕ ಪಡೆದದ್ದು ಬೋನಸ್‌ ಆಗಿ ಪರಿಣಮಿಸಿದೆ. “ಬಿ’ ವಿಭಾಗದಲ್ಲೀಗ ಆಸ್ಟ್ರೇಲಿಯ 6, ಸ್ಕಾಟ್ಲೆಂಡ್‌ 5 ಮತ್ತು ಇಂಗ್ಲೆಂಡ್‌ 3 ಅಂಕಗಳನ್ನು ಹೊಂದಿದೆ.

ಆಸೀಸ್‌ ತ್ರಿವಳಿ ವೇಗಿಗಳನ್ನು ಹೊಂದಿದೆ. ಇವರೆಂದರೆ ಸ್ಟಾರ್ಕ್‌, ಕಮಿನ್ಸ್‌ ಮತ್ತು ಹೇಝಲ್‌ವುಡ್‌. ಇವರಲ್ಲಿ ಒಬ್ಬರಿಗೆ ವಿಶ್ರಾಂತಿ ಕೊಡುವ ಯೋಜನೆಯಲ್ಲಿದೆ. ಆಗ ನಥನ್‌ ಎಲ್ಲಿಸ್‌ ಆಡುವ ಬಳಗದಲ್ಲಿ ಮುಂದುವರಿಯಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next