Advertisement

Super 8; ಅಮೆರಿಕ ವಿರುದ್ಧ  ದೊಡ್ಡ ಗೆಲುವಿಗೆ ಇಂಗ್ಲೆಂಡ್‌ ಹೊಂಚು

12:23 AM Jun 23, 2024 | Team Udayavani |

ಬ್ರಿಜ್‌ಟೌನ್‌: ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಸೂಪರ್‌-8 ಪಂದ್ಯವನ್ನು 7 ರನ್ನುಗಳಿಂದ ಸೋತ ಆಘಾತದಲ್ಲಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ರವಿವಾರದ ಕೊನೆಯ ಮುಖಾಮುಖಿಯಲ್ಲಿ ಅಮೆರಿಕವನ್ನು ಎದುರಿಸಲಿದೆ. ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್‌ ಹೆಚ್ಚಿಸಿಕೊಳ್ಳಬೇಕಾದ ಒತ್ತಡವೊಂದು ಆಂಗ್ಲರ ಮೇಲಿದೆ.

Advertisement

ಅಮೆರಿಕ ಈಗಾಗಲೇ ಎರಡೂ ಪಂದ್ಯಗಳನ್ನು ಸೋತ ಕಾರಣ ಸೆಮಿಫೈನಲ್‌ ಬಾಗಿಲು ಬಹುತೇಕ ಮುಚ್ಚಲ್ಪಟ್ಟಿದೆ. ಎರಡೂ ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಅಲಂಕರಿಸಿದೆ. ವೆಸ್ಟ್‌ ಇಂಡೀಸ್‌ 2ನೇ, ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. ಆದರೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ಗಿಂತ ಹೆಚ್ಚಿನ ರನ್‌ರೇಟ್‌ ವಿಂಡೀಸ್‌ ಹೊಂದಿದೆ.
ಅಮೆರಿಕ ವಿರುದ್ಧ ಇಂಗ್ಲೆಂಡ್‌ ಸೋಲುವ ಸಾಧ್ಯತೆ ಇಲ್ಲವೆಂದೇ ಹೇಳಬೇಕು. ಅಧಿಕಾರಯುತವಾಗಿ ಗೆದ್ದು, ರನ್‌ರೇಟ್‌ನಲ್ಲಿ ಅಮೋಘ ಪ್ರಗತಿ ಸಾಧಿಸಿದರೆ ಇಂಗ್ಲೆಂಡ್‌ ಅಗ್ರಸ್ಥಾನಕ್ಕೆ ಲಗ್ಗೆ ಇಡುವ ಸಾಧ್ಯತೆ ಇಲ್ಲದಿಲ್ಲ. ಆಗ ದಕ್ಷಿಣ ಆಫ್ರಿಕಾ-ವೆಸ್ಟ್‌ ಇಂಡೀಸ್‌ ನಡುವಿನ ಕೊನೆಯ ಪಂದ್ಯ ನಿರ್ಣಾಯಕವಾಗಲಿದೆ. ಇಲ್ಲಿ ವೆಸ್ಟ್‌ ಇಂಡೀಸ್‌ ಭಾರೀ ಅಂತರದಿಂದ ಗೆದ್ದರೆ, ದಕ್ಷಿಣ ಆಫ್ರಿಕಾಕ್ಕೂ ಗಂಡಾಂತರ ತಪ್ಪಿದ್ದಲ್ಲ!

ದಕ್ಷಿಣ ಆಫ್ರಿಕಾ ಅಡ್ಡಗಾಲು
ಆತಿಥೇಯ ವೆಸ್ಟ್‌ ಇಂಡೀಸ್‌ಗೆ ಸೋಲುಣಿಸಿದ ಇಂಗ್ಲೆಂಡ್‌ಗೆ ಕಳೆದ ರಾತ್ರಿ ದಕ್ಷಿಣ ಆಫ್ರಿಕಾ ಹರ್ಡಲ್ಸ್‌ ದಾಟಲು ಸಾಧ್ಯವಾಗಲಿಲ್ಲ. 164 ರನ್‌ ಚೇಸಿಂಗ್‌ ವೇಳೆ 156ಕ್ಕೆ ಹೋರಾಟ ಕೈಬಿಟ್ಟಿತು. ಆಗಿನ್ನೂ 4 ವಿಕೆಟ್‌ ಕೈಲಿತ್ತು. ಆ್ಯನ್ರಿಚ್‌ ನೋರ್ಜೆ ಅವರ ಕೊನೆಯ ಓವರ್‌ನಲ್ಲಿ 14 ರನ್‌ ತೆಗೆಯುವ ಸವಾಲು ಇಂಗ್ಲೆಂಡ್‌ಗೆ ಎದುರಾಯಿತು. 53 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದ ಹ್ಯಾರಿ ಬ್ರೂಕ್‌ ಮೊದಲ ಎಸೆತದಲ್ಲೇ ಔಟಾದದ್ದು ಹಿನ್ನಡೆಯಾಗಿ ಪರಿಣಮಿಸಿತು.

ಕೊನೆಯ ಪಂದ್ಯದಲ್ಲಿ ಅನನುಭವಿ ಅಮೆರಿಕ ಎದುರಾಗಿರುವುದರಿಂದ ಬಟ್ಲರ್‌ ಬಳಗ ತುಸು ನಿರಾಳವಾಗಿದೆ ಎನ್ನಲಡ್ಡಿಯಿಲ್ಲ. ದೊಡ್ಡ ಮೊತ್ತ ಪೇರಿಸಿ ಯುಎಸ್‌ಎಯನ್ನು ನಿಯಂತ್ರಿಸುವುದು ಭಾರೀ ಸವಾಲಾಗಲಿಕ್ಕಿಲ್ಲ.

ಬೇಕಿದೆ 80 ರನ್‌ ಜಯ
ಅಮೆರಿಕ ಪಾಲಿಗೆ ಇದು ಕಟ್ಟಕಡೆಯ “ರಿಯಾಲಿಟಿ ಚೆಕ್‌’. ಇಂಗ್ಲೆಂಡನ್ನು 80 ರನ್ನುಗಳಿಂದ ಸೋಲಿಸಿದರೆ, ಬಳಿಕ ದಕ್ಷಿಣ ಆಫ್ರಿಕಾ 67ಕ್ಕಿಂತ ಹೆಚ್ಚಿನ ರನ್‌ ಅಂತರದಲ್ಲಿ ವೆಸ್ಟ್‌ ಇಂಡೀಸನ್ನು ಕೆಡವಿದರೆ ಆಗ ನೆಟ್‌ ರನ್‌ರೇಟ್‌ ಲೆಕ್ಕಾಚಾರದಲ್ಲಿ ಅಮೆರಿಕಕ್ಕೂ ಸೆಮಿಫೈನಲ್‌ ಬಾಗಿಲು ತೆರೆಯಲಿದೆ ಎನ್ನುತ್ತದೆ ಲೆಕ್ಕಾಚಾರ!

Advertisement
Advertisement

Udayavani is now on Telegram. Click here to join our channel and stay updated with the latest news.

Next