Advertisement

ವನಿತಾ ಟಿ20 ತ್ರಿಕೋನ ಸರಣಿ ರನ್‌ ಮಳೆ ಸುರಿಸಿ ಪ್ರಶಸ್ತಿ ಗೆದ್ದ ಆಸೀಸ್

06:30 AM Apr 01, 2018 | Team Udayavani |

ಮುಂಬಯಿ: ಬದ್ಧ ಎದುರಾಳಿ ಇಂಗ್ಲೆಂಡನ್ನು 57 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯದ ವನಿತೆಯರು ಟಿ20 ತ್ರಿಕೋನ ಸರಣಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಶನಿವಾರ ಇಲ್ಲಿನ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಇದರ ಭರಪೂರ ಲಾಭವೆತ್ತಿ 4 ವಿಕೆಟಿಗೆ 209 ರನ್‌ ಪೇರಿಸಿತು. ಈ ಬೃಹತ್‌ ಮೊತ್ತಕ್ಕೆ ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್‌ 9 ವಿಕೆಟಿಗೆ 152 ರನ್‌ ಬಾರಿಸಿ ಶರಣಾಯಿತು.

ಸತತ 2 ಗೆಲುವಿನೊಂದಿಗೆ ಕೂಟದಲ್ಲಿ ಭರ್ಜರಿ ಆರಂಭ ಪಡೆದಿದ್ದ ಇಂಗ್ಲೆಂಡಿಗೆ ಎದುರಾದ ಹ್ಯಾಟ್ರಿಕ್‌ ಸೋಲು ಇದಾಗಿದೆ. ಲೀಗ್‌ ಹಂತದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಆಸ್ಟ್ರೇಲಿಯ ಫೈನಲ್‌ ಪಂದ್ಯದ ನೆಚ್ಚಿನ ತಂಡವಾಗಿತ್ತು. ಇಂಗ್ಲೆಂಡಿಗೆ ಬೌಲಿಂಗ್‌ ವೈಫ‌ಲ್ಯ ಹಾಗೂ ಕಳಪೆ ಫೀಲ್ಡಿಂಗ್‌ ಮುಳುವಾಗಿ ಪರಿಣಮಿಸಿತು. ಭಾರತ ಲೀಗ್‌ ಹಂತದ ಸತತ 3 ಪಂದ್ಯಗಳನ್ನು ಸೋತು ಪ್ರಶಸ್ತಿ ಕಣದಿಂದ ಹೊರಬಿದ್ದಿತ್ತು.

ಲ್ಯಾನಿಂಗ್‌-ವಿಲ್ಲಾನಿ ಮಿಂಚಿನಾಟ
ನಾಯಕಿ ಮೆಗ್‌ ಲ್ಯಾನಿಂಗ್‌ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಎಲಿಸ್‌ ವಿಲ್ಲಾನಿ ಜೋಡಿಯ ಮಿಂಚಿನ ಬ್ಯಾಟಿಂಗ್‌ ಆಸ್ಟ್ರೇಲಿಯದ ಬೃಹತ್‌ ಮೊತ್ತದಲ್ಲಿ ಮಹತ್ವದ ಪಾತ್ರ ವಹಿಸಿತು. ಇವರಿಂದ 4ನೇ ವಿಕೆಟಿಗೆ 12 ಓವರ್‌ಗಳಿಂದ 139 ರನ್‌ ಪೇರಿಸಲ್ಪಟ್ಟಿತು.

ಲ್ಯಾನಿಂಗ್‌ 45 ಎಸೆತಗಳಿಂದ ಅಜೇಯ 88 ರನ್‌ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ 16 ಬೌಂಡರಿ ಹಾಗೂ ಒಂದು ಸಿಕ್ಸರ್‌ಗೆ ಸಾಕ್ಷಿಯಾಯಿತು. ವಿಲ್ಲಾನಿ 30 ಎಸೆತಗಳಿಂದ 51 ರನ್‌ ಬಾರಿಸಿ (8 ಬೌಂಡರಿ) ಅಂತಿಮ ಓವರಿನಲ್ಲಿ ರನೌಟಾದರು.

Advertisement

ಆಸ್ಟ್ರೇಲಿಯದ ಆರಂಭ ಆಘಾತಕಾರಿಯಾಗಿತ್ತು. ಖಾತೆ ತೆರೆಯದ ಬೆತ್‌ ಮೂನಿ ಮೊದಲ ಓವರಿನಲ್ಲೇ ಔಟಾಗಿದ್ದರು. ಆದರೆ ಇನ್ನೋರ್ವ ಆರಂಭಕಾರ್ತಿ ಅಲಿಸ್ಸಾ ಹೀಲಿ ಮತ್ತು ವನ್‌ಡೌನ್‌ ಆಟಗಾರ್ತಿ ಆ್ಯಶ್ಲಿ ಗಾಡ್ನìರ್‌ 2ನೇ ವಿಕೆಟಿಗೆ 62 ರನ್‌ ಬಾರಿಸಿ ತಂಡವನ್ನು ಆಧರಿಸಿದರು. ಇಬ್ಬರ ಗಳಿಕೆಯೂ ತಲಾ 33 ರನ್‌ ಆಗಿತ್ತು. ಹೀಲಿ 24 ಎಸೆತ ನಿಭಾಯಿಸಿದರೆ (5 ಬೌಂಡರಿ, 1 ಸಿಕ್ಸರ್‌), ಆಕ್ರಮಣಕಾರಿಯಾಗಿ ಆಡಿದ ಗಾಡ್ನìರ್‌ 20 ಎಸೆತ ನಿಭಾಯಿಸಿ 3 ಬೌಂಡರಿ, 3 ಸಿಕ್ಸರ್‌ ಬಾರಿಸಿದರು.ಇಂಗ್ಲೆಂಡಿನ ಆರೂ ಬೌಲರ್‌ಗಳು ದುಬಾರಿಯಾಗಿ ಗೋಚರಿಸಿದರು. 38 ರನ್ನಿಗೆ 2 ವಿಕೆಟ್‌ ಕಿತ್ತ ವೇಗಿ ಜೆನ್ನಿ ಗನ್‌ ಯಶಸ್ವಿ ಬೌಲರ್‌.

ಇಂಗ್ಲೆಂಡಿಗೆ ಭಾರೀ ಆಘಾತ
ಬೃಹತ್‌ ಮೊತ್ತವನ್ನು ಬೆನ್ನಟ್ಟಲಿಳಿದ ಇಂಗ್ಲೆಂಡಿಗೆ ಭಾರೀ ಆಘಾತ ಕಾದಿತ್ತು. ಓಪನರ್‌ ಬ್ರಿಯಾನಿ ಸ್ಮಿತ್‌ ಮತ್ತು ವನ್‌ಡೌನ್‌ ಆಟಗಾರ್ತಿ ಟಾಮಿ ಬೇಮಾಂಟ್‌ ಖಾತೆ ತೆರೆಯದೆ ನಿರ್ಗಮಿಸಿದರು. 7 ಎಸೆತಗಳಾಗುವಷ್ಟರಲ್ಲಿ ಇವರಿಬ್ಬರ ವಿಕೆಟ್‌ ಹಾರಿಹೋಯಿತು.

ಆರಂಭಿಕ ಆಟಗಾರ್ತಿ ಡೇನಿಯಲ್‌ ವ್ಯಾಟ್‌ (34) ಮತ್ತು ಮಧ್ಯಮ ಸರದಿಯ ನಥಾಲಿ ಸೀವರ್‌ (50), ಕೀಪರ್‌ ಆ್ಯಮಿ ಜೋನ್ಸ್‌ (30) ಉತ್ತಮ ಪ್ರದರ್ಶನ ನೀಡಿದರೂ ಯಾವುದೇ ಲಾಭವಾಗಲಿಲ್ಲ. ರನ್‌ಗತಿ ಏರುತ್ತ ಹೋದುದದಿಂದ ಗುರಿ ದೂರಾಗುತ್ತ ಹೋಯಿತು.

14 ರನ್ನಿಗೆ 3 ವಿಕೆಟ್‌ ಉರುಳಿಸಿದ ಮಧ್ಯಮ ವೇಗಿ ಮೆಗಾನ್‌ ಶಟ್‌ ಆಸ್ಟ್ರೇಲಿಯದ ಯಶಸ್ವಿ ಬೌಲರ್‌ ಎನಿಸಿ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾದರು. ಡೆಲಿಸ್ಸಾ ಕಿಮ್ಮಿನ್ಸ್‌ ಮತ್ತು ಆ್ಯಶ್ಲಿ ಗಾಡ್ನìರ್‌ ತಲಾ 2 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-20 ಓವರ್‌ಗಳಲ್ಲಿ 4 ವಿಕೆಟಿಗೆ 209 (ಲ್ಯಾನಿಂಗ್‌ ಔಟಾಗದೆ 88, ವಿಲ್ಲಾನಿ 51, ಹೀಲಿ 33, ಗಾಡ್ನìರ್‌ 33, ಗನ್‌ 38ಕ್ಕೆ 2). ಇಂಗ್ಲೆಂಡ್‌-20 ಓವರ್‌ಗಳಲ್ಲಿ 9 ವಿಕೆಟಿಗೆ 152 (ಸೀವರ್‌ 50, ವ್ಯಾಟ್‌ 34, ಜೋನ್ಸ್‌ 30, ಶಟ್‌ 14ಕ್ಕೆ 3, ಗಾಡ್ನìರ್‌ 20ಕ್ಕೆ 2, ಕಿಮ್ಮಿನ್ಸ್‌ 35ಕ್ಕೆ 2). ಪಂದ್ಯಶ್ರೇಷ್ಠ: ಮೆಗ್‌ ಲ್ಯಾನಿಂಗ್‌. ಸರಣಿಶ್ರೇಷ್ಠ: ಮೆಗಾನ್‌ ಶಟ್‌.

Advertisement

Udayavani is now on Telegram. Click here to join our channel and stay updated with the latest news.

Next