ವಡೋದರ: ಭಾರತದ ಸ್ಪಿನ್ ದಿಗ್ಗಜ ಆರ್.ಅಶ್ವಿನ್ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರುವ ಆಸ್ಟ್ರೇಲಿಯ, ವಿಶೇಷ ತರಬೇತಿ ಪಡೆಯಲು ಅಶ್ವಿನ್ ರಂತೆಯೇ ಬೌಲಿಂಗ್ ಮಾಡಬಲ್ಲ ಗುಜರಾತ್‌ನ ಮಹೇಶ್ ಪಿಥಿಯರನ್ನು ನೆಟ್ ಬೌಲರ್ ಆಗಿ ಬಳಸಿಕೊಳ್ಳುತ್ತಿದೆ. ಬರೋಡದ ಈ ಆಟಗಾರನಿಗೆ ಕೇವಲ 21 ವರ್ಷ.
ಸಾಮಾನ್ಯವಾಗಿ ನೆಟ್ ಬೌಲರ್‌ಗಳಿಗೆ ಯಾರೂ ಪ್ರಚಾರ ನೀಡುವುದಿಲ್ಲ. ಆದರೆ ಮಹೇಶ್ ಪಿಥಿಯ ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವುದರಿಂದ ಭಾರೀ ಸುದ್ದಿಯಾಗಿದ್ದಾರೆ. 10 ವರ್ಷದ ಹಿಂದೆ ಅಶ್ವಿನ್‌ರನ್ನು ಮೊದಲ ಬಾರಿಗೆ ಟೀವಿಯಲ್ಲಿ ನೋಡಿದ್ದ ಮಹೇಶ್ ಹಾಗೆಯೇ ಬೌಲಿಂಗ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹೇಶ್ ಅವರನ್ನು ನೆಟ್ ಅಭ್ಯಾಸಕ್ಕೆ ಆಸೀಸ್ ಬಳಸಿಕೊಳ್ಳುತ್ತಿದೆ. ಅದೃಷ್ಟವಶಾತ್ ಮಹೇಶ್‌ಗೆ ತಮ್ಮ ಆದರ್ಶ ಆಟಗಾರ ಆರ್. ಅಶ್ವಿನ್‌ರನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿದೆ.
ಅಶ್ವಿನ್‌ರನ್ನು ನೋಡಲು ಮಹೇಶ್ ಚಡಪಡಿಸುತ್ತಿದ್ದುದ್ದನ್ನು ಆಸೀಸ್ ಸ್ಪಿನ್ನರ್ ನಥನ್ ಲಿಯೋನ್ ನೋಡಿದ್ದಾರೆ. ತಾವೇ ಅಶ್ವಿನ್ ಇದ್ದಲ್ಲಿಗೆ ಮಹೇಶ್‌ರನ್ನು ಒಯ್ದಿದ್ದಾರೆ. ಕೂಡಲೇ ಮಹೇಶ್, ಅಶ್ವಿನ್‌ರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ! ಆ ಹೊತ್ತಿಗೆ ಕೊಹ್ಲಿ ಕೂಡ ಮಹೇಶ್ ರತ್ತ ನೋಡಿ ಕೈಬೀಸಿದ್ದಾರೆ. ಇದನ್ನು ತನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಮಹೇಶ್ ಹೇಳಿದ್ದಾರೆ.