Advertisement

ಕಪಟ ಆಟಕ್ಕೆ ಸ್ಮಿತ್‌, ವಾರ್ನರ್‌ ತಲೆದಂಡ

06:15 AM Mar 26, 2018 | Team Udayavani |

ದುಬೈ: ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ನಡುವೆ ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿ ಕಪಟ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಮೇಲೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಕಠಿಣ ಕ್ರಮ ಜರುಗಿಸಿದೆ.

Advertisement

ನಾಯಕ ಸ್ಟೀವನ್‌ ಸ್ಮಿತ್‌ ಸಹ ಆಟಗಾರ ಬ್ಯಾನ್‌ ಕ್ರಾಫ್ಟ್ ಮೋಸಕ್ಕೆ ಸಾಕ್ಷಿಯಾಗಿದ್ದರು. ತಡೆಯುವ ಅವಕಾಶವಿದ್ದರೂ ಸ್ಮಿತ್‌ ಮೌನವಾಗಿದ್ದು ಪ್ರಚೋದನೆ ನೀಡಿದ್ದರು. ಹೀಗಾಗಿ ಸ್ಮಿತ್‌ ಅವರನ್ನು ಐಸಿಸಿ ಒಂದು ಪಂದ್ಯದಿಂದ ಅಮಾನತು ಮಾಡಿದೆ.

ಪಂದ್ಯದ ಶೇ.100ರಷ್ಟು ದಂಡ ವಿಧಿಸಿದೆ. ಬೆನ್ನಲ್ಲೇ ಭಾನುವಾರ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಸುದ್ದಿಗೋಷ್ಠಿ ನಡೆಸಿ, ಸ್ಟೀವನ್‌ ಸ್ಮಿತ್‌ ಅವರನ್ನು ನಾಯಕತ್ವದಿಂದ ವಜಾಗೊಳಿಸುವುದಾಗಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಉಪನಾಯಕನ ಹುದ್ದೆಯಿಂದ ಡೇವಿಡ್‌ ವಾರ್ನರ್‌ ಅವರನ್ನೂ ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೊನೆಗೂ ಮಣಿದ ಸ್ಮಿತ್‌: ಆರಂಭದಲ್ಲಿ ನಾಯಕತ್ವ ತ್ಯಜಿಸುವುದಿಲ್ಲ. ಈಗಲೂ ನಾನು ನಾಯಕತ್ವಕ್ಕೆ ಬದ್ಧ ಎಂದು ನಂಬಿದ್ದೇನೆ ಎಂದು ಹೇಳಿಕೆ ನೀಡಿದ್ದ ಸ್ಮಿತ್‌,ಕೊನೆಗೂ ಒತ್ತಡಕ್ಕೆ ಮಣಿದಿದ್ದಾರೆ. ಸ್ಮಿತ್‌ ಶನಿವಾರ ಚೆಂಡು ವಿರೂಪಗೊಳಿಸಿರುವುದನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ತಪ್ಪಿನ ಅರಿವಿನಿಂದ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.

ಬ್ಯಾನ್‌ಕ್ರಾಫ್ಟ್ಗೂ ಕಠಿಣ ಶಿಕ್ಷೆ: ಕಳ್ಳಾಟ ಆಡಿ ಜಗತ್ತಿಗೆ ಮಂಕು ಬೂದಿ ಎರಚಲು ಪ್ರಯತ್ನಿಸಿದ ಆಸೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ಗೆ ಪಂದ್ಯದ ಶೇ.75 ರಷ್ಟು ದಂಡ ವಿಧಿಸಲಾಗಿದೆ. ಐಸಿಸಿ ನಿಯಮ ಎರಡನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ 3 ಋಣಾತ್ಮಕ ಅಂಕಗಳನ್ನು ನೀಡಲಾಗಿದೆ.

Advertisement

ಶನಿವಾರ ಪಂದ್ಯದ 3ನೇ ದಿನದ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿತ್ತು. ಈ ವೇಳೆ ಫಿಲ್ಡಿಂಗ್‌ ನಡೆಸುತ್ತಿದ್ದ ಬ್ಯಾನ್‌ಕ್ರಾಫ್ಟ್ ಚೆಂಡನ್ನು ಪ್ಯಾಂಟಿಗೆ ಉಜ್ಜುತ್ತಾರೆ. ಜತೆಗೆ ಹಳದಿ ಬಣ್ಣದ ಚಿಕ್ಕ ವಸ್ತುವೊಂದನ್ನು ಪ್ಯಾಂಟಿನ ಒಳಗೆ ಅಡಗಿಸಿಕೊಂಡಿದ್ದರು. ಇವೆಲ್ಲವೂ ಟೀವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಆ ಕೂಡಲೇ ಟೀವಿ ಅಂಪೈರ್‌ಗಳು ಫಿಲ್ಡ್‌ ಅಂಪೈರ್‌ಗಳಿಗೆ ಮಾಹಿತಿ ನೀಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಐಪಿಎಲ್‌ನಿಂದ ಕೊಕ್‌? 
ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸ್ಮಿತ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡದ ನಾಯಕತ್ವದಿಂದ ಅಥವಾ ತಂಡದಿಂದಲೇ ಕೈ ಬಿಡುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ,ಐಪಿಎಲ್‌ ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿರುವ ಸ್ಮಿತ್‌ ಅವರ ವಿರುದ್ಧ ಐಸಿಸಿ ಕ್ರಮವನ್ನು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next