ಮುಂಬೈ: ಫೆ.9ರಿಂದ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಬಾರ್ಡರ್ – ಗಾವಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲಲು ಆಸ್ಟ್ರೇಲಿಯಾ ಫೇವರೇಟ್ ಆಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಭಾರತದ ಕೋಚ್ ಗ್ರೆಗ್ ಚಾಪೆಲ್ ಹೇಳಿದ್ದಾರೆ.
ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಗಾಯಗಳಿಂದಾಗಿ ಭಾರತವು ಈ ಬಾರಿ ದುರ್ಬಲವಾಗಿರುವುದರಿಂದ ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ಗೆಲ್ಲಬಹುದು ಎಂದಿದ್ದಾರೆ.
ಭೀಕರ ಕಾರು ಅಪಘಾತದ ಸಂದರ್ಭದಲ್ಲಿ ಉಂಟಾದ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಕೀಪರ್-ಬ್ಯಾಟರ್ ಪಂತ್ ಈ ವರ್ಷದ ಬಹುಪಾಲು ಆಟದಿಂದ ಹೊರಗುಳಿದಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣದಿಂದ ಮೊದಲ ಎರಡು ಟೆಸ್ಟ್‌ಗಳಲ್ಲಿ ಭಾರತೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ:ಎರಡೂ ಕೈಗಳಿಂದ ಬರೆಯಬಲ್ಲ ವಿದ್ಯಾರ್ಥಿಗಳನ್ನು ಹೊಂದಿರುವ ದೇಶದ ಏಕೈಕ ಶಾಲೆ ಇದು!
“ಆಸ್ಟ್ರೇಲಿಯಾ ಈ ಸರಣಿಯನ್ನು ಗೆಲ್ಲಬಹುದು. ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಗಾಯಗಳಿಂದಾಗಿ ಭಾರತವು ತವರಿನಲ್ಲಿ ಹೆಚ್ಚು ದುರ್ಬಲವಾಗಿದೆ. ಅವರು ವಿರಾಟ್ ಕೊಹ್ಲಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ” ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ಕಳೆದ ತಿಂಗಳು ರಣಜಿ ಟ್ರೋಫಿಯಲ್ಲಿ ಪುನರಾಗಮನ ಮಾಡಿದ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ರವೀಂದ್ರ ಜಡೇಜಾ ಗುರುವಾರ ನಾಗ್ಪುರದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿದ್ದಾರೆ.