Advertisement
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಚಾಮರಿ ಅತ್ತಪಟ್ಟು ಅವರ ಏಕಾಂಗಿ ಹೋರಾಟದ ಫಲದಿಂದ 9 ವಿಕೆಟಿಗೆ 257 ರನ್ ಬಾರಿಸಿ ಸವಾಲೊಡ್ಡಿತು. ಆದರೆ ಬಲಿಷ್ಠ ಆಸ್ಟ್ರೇಲಿಯಕ್ಕೆ ಇದೊಂದು ಸವಾಲೇ ಎನಿಸಲಿಲ್ಲ. ಅದು 43.5 ಓವರ್‌ಗಳಲ್ಲಿ ಕೇವಲ ಎರಡೇ ವಿಕೆಟಿಗೆ 262 ರನ್ ಬಾರಿಸಿ ಗೆದ್ದು ಬಂದಿತು.
ಚಾಮರಿ ಮತ್ತು ಲ್ಯಾನಿಂಗ್ ಅವರ ಬ್ಯಾಟಿಂಗ್ ಮೇಲಾಟಕ್ಕೆ ಕಾರಣವಾದ ಈ ಪಂದ್ಯ ಅನೇಕ ದಾಖಲೆಗಳನ್ನು ಸೃಷ್ಟಿಸಿತು. ಇದರಲ್ಲಿ ಪ್ರಮುಖವಾದುದೆಂದರೆ, 1,062 ಪಂದ್ಯಗಳ ವನಿತಾ ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡೂ ತಂಡಗಳ ಆಟಗಾರ್ತಿಯರು 150 ಪ್ಲಸ್ ರನ್ ಬಾರಿಸಿದ್ದು. ಚಾಮರಿ ಇನ್ನಿಂಗ್ಸ್ 143 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 22 ಬೌಂಡರಿ ಹಾಗೂ 6 ಸಿಕ್ಸರ್. ಲ್ಯಾನಿಂಗ್ 135 ಎಸೆತ ನಿಭಾಯಿಸಿ 152 ರನ್ ಬಾರಿಸಿದರು. ಇದರಲ್ಲಿ 19 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು.
Related Articles
Advertisement
ಚಾಮರಿ ಅತ್ತಪಟ್ಟು ತಂಡದ ಒಟ್ಟು ಮೊತ್ತದ ಶೇ. 69.26ರಷ್ಟು ರನ್ನನ್ನು ಒಬ್ಬರೇ ಗಳಿಸುವ ಮೂಲಕ ದಾಖಲೆ ಬರೆದರು. ಭಾರತದೆದುರಿನ 1982ರ ಪಂದ್ಯದಲ್ಲಿ ಇಂಟರ್‌ನ್ಯಾಶನಲ್ ಇಲೆವೆನ್ ತಂಡದ ಲಿನ್ನೆ ಥಾಮಸ್ ಶೇ. 61.94ರಷ್ಟು ರನ್ ಗಳಿಸಿದ ದಾಖಲೆ ಪತನಗೊಂಡಿತು.
ಚಾಮರಿ ಅತ್ತಪಟ್ಟು 124 ರನ್ನುಗಳನ್ನು ಬೌಂಡರಿ/ಸಿಕ್ಸರ್ ಹೊಡೆತಗಳ ಮೂಲಕವೇ ಸೂರೆಗೈದರು. ಇದು ಕೂಡ ದಾಖಲೆಯಾಗಿದೆ. ಅಯರ್‌ಲ್ಯಾಂಡ್ ವಿರುದ್ಧ ದೀಪ್ತಿ ಶರ್ಮ 188 ರನ್ ದಾಖಲಿಸುವ ವೇಳೆ 120 ರನ್ನುಗಳನ್ನು ಬೌಂಡರಿ/ಸಿಕ್ಸರ್ ಹೊಡೆತಗಳ ಮೂಲಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಇದು ಚಾಮರಿ ಅತ್ತಪಟ್ಟು ಬಾರಿಸಿದ 3ನೇ ಶತಕ. ಉಳಿದಂತೆ ಶ್ರೀಲಂಕಾದ ಆಟಗಾರ್ತಿಯರ್ಯಾರೂ ಈವರೆಗೆ ಏಕದಿನದಲ್ಲಿ ಶತಕ ಹೊಡೆದಿಲ್ಲ. ಚಾಮರಿ ಒಮ್ಮೆ 99 ರನ್ ಕೂಡ ಮಾಡಿದ್ದರು.
ಶುಕ್ರವಾರ ಮತ್ತು ಶನಿವಾರ ವನಿತಾ ವಿಶ್ವಕಪ್ ಪಂದ್ಯಾವಳಿಗೆ ವಿರಾಮ. ರವಿವಾರದಂದು ಒಮ್ಮೆಲೇ 4 ಪಂದ್ಯಗಳು ನಡೆಯಲಿವೆ.