ಲೀಸ್ಟರ್: ವನಿತಾ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 159 ರನ್ನುಗಳ ಬೃಹತ್ ಅಂತರದಿಂದ ಮಗುಚಿದ ಆಸ್ಟ್ರೇಲಿಯ ಸತತ 4ನೇ ಜಯಭೇರಿ ಮೊಳಗಿಸಿದೆ. ಪಾಕ್ ಸತತ 4ನೇ ಸೋಲುಂಡು ಕೂಟದಿಂದ ಮೊದಲ ಕಾಲನ್ನು ಹೊರಗಿರಿಸಿದೆ.
ಈ ಜಯದೊಂದಿಗೆ ಆಸ್ಟ್ರೇಲಿಯ 8 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ನೆಗೆಯಿತು. ಭಾರತ ದ್ವಿತೀಯ ಸ್ಥಾನಕ್ಕೆ ಇಳಿಯಿತು. ಎರಡೂ ತಂಡಗಳು 4 ಜಯದೊಂದಿಗೆ ತಲಾ 8 ಅಂಕ ಹೊಂದಿದ್ದರೂ ಪಾಕ್ ವಿರುದ್ಧ ತೋರ್ಪಡಿಸಿದ ಆಮೋಘ ಬ್ಯಾಟಿಂಗ್ ಸಾಹಸದಿಂದ ಆಸ್ಟ್ರೇಲಿಯದ ರನ್‌ರೇಟ್‌ನಲ್ಲಿ ಭಾರೀ ಪ್ರಗತಿ ಕಂಡುಬಂತು. ಸದ್ಯ ಆಸ್ಟ್ರೇಲಿಯ +1.351 ಹಾಗೂ ಭಾರತ +0.914 ರನ್‌ರೇಟ್ ಹೊಂದಿದೆ.
ಬುಧವಾರ “ಗ್ರೇಸ್ ರೋಡ್ ಸ್ಟೇಡಿಯಂ’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ರನ್ ಆಗುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡರೂ ಮಧ್ಯಮ-ಕೆಳ ಕ್ರಮಾಂಕದ ಆಟಗಾರ್ತಿಯರ ಬಿರುಸಿನ ಆಟದಿಂದ 8 ವಿಕೆಟಿಗೆ 290 ರನ್ ಪೇರಿಸಿತು. ಜವಾಬಿತ್ತ ಪಾಕಿಸ್ಥಾನ ಪೂರ್ತಿ 50 ಓವರ್ ನಿಭಾಯಿಸಿ 131 ರನ್ನಿಗೆ ಆಲೌಟ್ ಆಯಿತು.ಗಾಯಾಳು ನಾಯಕಿ ಮೆಗ್ ಲ್ಯಾನಿಂಗ್ ಗೈರಲ್ಲಿ ರಶೆಲ್ ಹೇನ್ಸ್ ಆಸೀಸ್ ತಂಡವನ್ನು ಮುನ್ನಡೆಸಿದ್ದರು. ಎಲಿಸ್ ಪೆರ್ರಿ 66, ಎಲಿಸ್ ವಿಲ್ಲಾನಿ 59, ಅಲಿಸ್ಸಾ ಹೀಲಿ ಅಜೇಯ 63 ರನ್ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.
ಉಸ್ತುವಾರಿ ನಾಯಕಿ ಹೇನ್ಸ್ 28, ಅಲೆಕ್ಸ್ ಬ್ಲ್ಯಾಕ್‌ವೆಲ್ 23, ಆ್ಯಸ್ಲಿ ಗಾಡ್ನìರ್ 22 ರನ್ ಹೊಡೆದರು. 49ಕ್ಕೆ 3 ವಿಕೆಟ್ ಕಿತ್ತ ನಾಯಕಿ ಸನಾ ಮಿರ್ ಪಾಕಿಸ್ಥಾನದ ಯಶಸ್ವೀ ಯಶಸ್ವಿ ಬೌಲರ್.
ಚೇಸಿಂಗಿಗೆ ಇಳಿದ ಪಾಕಿಸ್ಥಾನಕ್ಕೆ ಕಾಂಗರೂ ದಾಳಿ ಕಬ್ಬಿಣದ ಕಡಲೆಯಾಗಿಯೇ ಉಳಿಯಿತು. ಮೊದಲ 4 ಮಂದಿ ಹಾಗೂ ಕೊನೆಯ 4 ಮಂದಿ ಎರಡಂಕೆಯ ಗಡಿಯೊಳಗೇ ನಿಂತರು. ಇದರಲ್ಲಿ ಮೂವರು ಖಾತೆಯನ್ನೇ ತೆರೆಯಲಿಲ್ಲ.
ಬ್ಯಾಟಿಂಗಿನಲ್ಲೂ ಮಿಂಚಿದ ಸನಾ ಮಿರ್ ಗರಿಷ್ಠ 45 ರನ್ ಹೊಡೆದರು. ಕ್ರಿಸ್ಟನ್ ಬೀಮ್ಸ್ (23ಕ್ಕೆ 3) ಮತ್ತು ಆ್ಯಸ್ಲಿ ಗಾಡ್ನìರ್ (28ಕ್ಕೆ 3) ಆಸ್ಟ್ರೇಲಿಯದ ಯಶಸ್ವೀ ಬೌಲರ್‌ಗಳಾಗಿ ಮೂಡಿಬಂದರು.