Advertisement

ಬೋಲ್ಟನ್‌ ಶತಕ; ಆಸೀಸ್‌ಗೆ ಸುಲಭ ಜಯ

07:30 AM Mar 13, 2018 | |

ವಡೋದರ: ಬ್ಯಾಟಿಂಗ್‌ ವೈಫ‌ಲ್ಯಕ್ಕೆ ತಕ್ಕ ಬೆಲೆ ತೆತ್ತ ಭಾರತದ ವನಿತೆಯರು ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲಿಗೆ ತುತ್ತಾಗಿದ್ದಾರೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರೂ ಇದರ ಲಾಭವೆತ್ತುವಲ್ಲಿ ವಿಫ‌ಲವಾದ ಹರ್ಮನ್‌ಪ್ರೀತ್‌ ಕೌರ್‌ ಬಳಗ ಸರಿಯಾಗಿ 50 ಓವರ್‌ಗಳಲ್ಲಿ ಕೇವಲ 200 ರನ್ನಿಗೆ ಕುಸಿಯಿತು. ಯಾವುದೇ ಒತ್ತಡವಿಲ್ಲದೆ ಚೇಸಿಂಗ್‌ ಮಾಡಿದ ಆಸ್ಟ್ರೇಲಿಯ 32.1 ಓವರ್‌ಗಳಲ್ಲಿ 2 ವಿಕೆಟಿಗೆ 202 ರನ್‌ ಬಾರಿಸಿ ಜಯ ಸಾಧಿಸಿತು. 

Advertisement

ಸಣ್ಣ ಮೊತ್ತದ ಚೇಸಿಂಗ್‌ನಲ್ಲೂ ಆರಂಭಿಕ ಆಟಗಾರ್ತಿ ನಿಕೋಲ್‌ ಬೋಲ್ಟನ್‌ ಅಜೇಯ ಶತಕವೊಂದನ್ನು ಬಾರಿಸಿದ್ದು ಆಸ್ಟ್ರೇಲಿಯ ಸರದಿಯ ಆಕರ್ಷಣೆ ಎನಿಸಿತು. ಆಸೀಸ್‌ ಗೆಲುವಿನ ವೇಳೆ ಬೋಲ್ಟನ್‌ 100 ರನ್‌ ಮಾಡಿ ಅಜೇಯರಾಗಿದ್ದರು. 101 ಎಸೆತಗಳ ಈ ದಿಟ್ಟ ಬ್ಯಾಟಿಂಗ್‌ನಲ್ಲಿ 12 ಬೌಂಡರಿ ಒಳಗೊಂಡಿತ್ತು. ಇದು 42ನೇ ಏಕದಿನದಲ್ಲಿ ಬೋಲ್ಟನ್‌ ಬಾರಿಸಿದ 4ನೇ ಶತಕ. ಈ ಸಾಹಸಕ್ಕಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಬೋಲ್ಟನ್‌ 3 ಉಪಯುಕ್ತ ಜತೆಯಾಟಗಳಲ್ಲಿ ಕಾಣಿಸಿಕೊಂಡರು. ಮೊದಲ ವಿಕೆಟಿಗೆ ಅಲಿಸಾ ಹೀಲಿ ಜತೆಗೆ 60 ರನ್‌, 2ನೇ ವಿಕೆಟಿಗೆ ನಾಯಕಿ ಮೆಗ್‌ ಲ್ಯಾನಿಂಗ್‌ ಜತೆ 68 ರನ್‌, ಎಲಿಸ್‌ ಪೆರ್ರಿ ಜತೆಗೆ ಮುರಿಯದ 3ನೇ ವಿಕೆಟಿಗೆ 74 ರನ್‌ ಪೇರಿಸಿದರು. ಈ ಮೂವರು ಕ್ರಮವಾಗಿ 38, 33 ಹಾಗೂ ಔಟಾಗದೆ 25 ರನ್‌ ಹೊಡೆದರು.

ಸ್ಪಿನ್ನಿಗೆ ಬೆದರಿದ ಭಾರತ
ಆರಂಭದಿಂದಲೇ ನಿಧಾನ ಗತಿಯಿಂದ ರನ್‌ ಗಳಿಸತೊಡಗಿದ ಭಾರತಕ್ಕೆ ಕಾಂಗರೂಗಳ ಸ್ಪಿನ್‌ ದಾಳಿ ಕಗ್ಗಂಟಾಗಿ ಪರಿಣಮಿಸಿತು. ಎಡಗೈ ಆಫ್ಸ್ಪಿನ್ನರ್‌ ಜೆಸ್‌ ಜೊನಾಸೆನ್‌ ಮತ್ತು ಗೂಗ್ಲಿ ಬೌಲರ್‌ ಅಮಂಡಾ ವೆಲ್ಲಿಂಗ್ಟನ್‌ ಸೇರಿಕೊಂಡು ಆತಿಥೇಯರ ಬ್ಯಾಟಿಂಗ್‌ ಸರದಿಯನ್ನು ಸೀಳುತ್ತ ಹೋದರು. ಜೊನಾಸೆನ್‌ 30ಕ್ಕೆ 4 ವಿಕೆಟ್‌ ಉರುಳಿಸಿದರೆ, ವೆಲ್ಲಿಂಗ್ಟನ್‌ 24 ರನ್ನಿತ್ತು 3 ವಿಕೆಟ್‌ ಕೆಡವಿದರು. ಇವರಲ್ಲಿ ವೆಲ್ಲಿಂಗ್ಟನ್‌ ಅವರದು ಜೀವನಶ್ರೇಷ್ಠ ಸಾಧನೆಯಾಗಿದೆ.

ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಆಟ ಗಾರ್ತಿಯರ ವೈಫ‌ಲ್ಯದಿಂದಾಗಿ ಭಾರತದ ದೊಡ್ಡ ಮೊತ್ತದ ಯೋಜನೆ ವಿಫ‌ಲಗೊಂಡಿತು. 32ನೇ ಓವರ್‌ ವೇಳೆ 112 ರನ್ನಿಗೆ 7 ವಿಕೆಟ್‌ ಉರು ಳಿಸಿಕೊಂಡ ಕೌರ್‌ ಪಡೆ ತೀವ್ರ ಸಂಕಟದಲ್ಲಿತ್ತು. ಈ 7 ಮಂದಿಯಲ್ಲಿ ಆರಂಭಿಕ ಆಟಗಾರ್ತಿ ಪೂನಂ ರಾವತ್‌ ಮಾತ್ರ 37 ರನ್‌ ಮಾಡಿ ಗಮನ ಸೆಳೆದರು. ಮಂಧನಾ (12), ಮೊದಲ ಪಂದ್ಯವಾಡಿದ ಜೆಮಿಮಾ (1), ಹರ್ಮನ್‌ಪ್ರೀತ್‌ (9) ಹೆಚ್ಚು ಹೊತ್ತು ನಿಲ್ಲಲಿಲ್ಲ. ದೀಪ್ತಿ (18), ವೇದಾ (16) ಕೂಡ ವಿಫ‌ಲರಾದರು.

Advertisement

ಸುಷ್ಮಾ-ಪೂಜಾ ಉತ್ತಮ ಜತೆಯಾಟ
ಈ ಹಂತದಲ್ಲಿ ಜತೆಗೂಡಿದ ಕೀಪರ್‌ ಸುಷ್ಮಾ ವರ್ಮ ಮತ್ತು ಬೌಲರ್‌ ಪೂಜಾ ವಸ್ತ್ರಾಕರ್‌ ಕುಸಿತಕ್ಕೆ ತಡೆಯೊಡ್ಡಿ ನಿಂತರು; 8ನೇ ವಿಕೆಟಿಗೆ 76 ರನ್‌ ಒಟ್ಟುಗೂಡಿಸಿದರು. ಇವರಿಂದಾಗಿ ಭಾರತದ ಸ್ಕೋರ್‌ ಇನ್ನೂರರ ಗಡಿ ಮುಟ್ಟುವಂತಾಯಿತು. ಪೂಜಾ ಸರ್ವಾಧಿಕ 51 ರನ್‌ ಹೊಡೆದರು (56 ಎಸೆತ, 7 ಬೌಂಡರಿ, 1 ಸಿಕ್ಸರ್‌). ಸುಷ್ಮಾ ಕೊಡುಗೆ 41 ರನ್‌ (71 ಎಸೆತ, 3 ಬೌಂಡರಿ). ಸರಣಿಯ 2ನೇ ಪಂದ್ಯ ಮಾ. 15ರಂದು ಇದೇ ಅಂಗಳದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ 
ಭಾರತ-50 ಓವರ್‌ಗಳಲ್ಲಿ 200 (ಪೂಜಾ 51, ಸುಷ್ಮಾ 41, ಪೂನಂ 37, ಜೊನಾಸೆನ್‌ 30ಕ್ಕೆ 4, ವೆಲ್ಲಿಂಗ್ಟನ್‌ 24ಕ್ಕೆ 3). ಆಸ್ಟ್ರೇಲಿಯ-32.1 ಓವರ್‌ಗಳಲ್ಲಿ 2 ವಿಕೆಟಿಗೆ 202 (ಬೋಲ್ಟನ್‌ ಔಟಾಗದೆ 100, ಹೀಲಿ 38, ಲ್ಯಾನಿಂಗ್‌ 33, ಶಿಖಾ 38ಕ್ಕೆ 1). 
ಪಂದ್ಯಶ್ರೇಷ್ಠ: ನಿಕೋಲ್‌ ಬೋಲ್ಟನ್‌.

Advertisement

Udayavani is now on Telegram. Click here to join our channel and stay updated with the latest news.

Next