ಮೆಲ್ಬರ್ನ್: ಮುಂದಿನ ತಿಂಗಳು ನ್ಯೂಜಿಲ್ಯಾಂಡ್‌ನಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯ ತಂಡವನ್ನು ಶುಕ್ರವಾರ ಅಂತಿಮಗೊಳಿಸಲಾಗಿದೆ. ಇಬ್ಬರು “ಕ್ರಿಕೆಟ್ ಪುತ್ರರು’ ಈ ತಂಡದಲ್ಲಿ ಸ್ಥಾನ ಸಂಪಾದಿಸಿರುವುದು ವಿಶೇಷ.
ಇವರೆಂದರೆ “ಕ್ರಿಕೆಟ್ ಆಸ್ಟ್ರೇಲಿಯ’ದ ಅಧ್ಯಕ್ಷ ಜೇಮ್ಸ್ ಸದರ್‌ಲ್ಯಾಂಡ್ ಅವರ ಮಗ ವಿಲ್ ಸದರ್‌ಲ್ಯಾಂಡ್ ಹಾಗೂ ಮಾಜಿ ನಾಯಕ ಸ್ಟೀವ್ ವೋ ಅವರ ಮಗ ಆಸ್ಟಿನ್ ವೋ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಆಡಲಾದ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡವನ್ನು ಪ್ರತಿನಿಧಿಸಿ ಬಿರುಸಿನ ಶತಕ ಬಾರಿಸಿದ ಜಾಸನ್ ಸಂಗ ಅವರಿಗೆ ಆಸೀಸ್ ನಾಯಕತ್ವ ವಹಿಸಲಾಗಿದೆ. ವಿಲ್ ಸದರ್‌ಲ್ಯಾಂಡ್ ತಂಡದ ಉಪನಾಯಕರಾಗಿದ್ದಾರೆ.
ಆಸ್ಟ್ರೇಲಿಯದ ಮಾಜಿ ವೇಗಿ ರಿಯಾನ್ ಹ್ಯಾರಿಸ್ ಅಂಡರ್-19 ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಇದೊಂದು ಪ್ರತಿಭಾನ್ವಿತರ ಪಡೆ ಎಂದು “ನ್ಯಾಶನಲ್ ಟ್ಯಾಲೆಂಟ್ ಮೆನೇಜರ್’ ಗ್ರೆಗ್ ಚಾಪೆಲ್ ಬಣ್ಣಿಸಿದ್ದಾರೆ.
ಆಸೀಸ್ ತನ್ನ ಕೊನೆಯ ಅಂಡರ್-19 ವಿಶ್ವಕಪ್ ಗೆದ್ದದ್ದು 2010ರಲ್ಲಿ. ಅಂದು ಮಿಚೆಲ್ ಮಾರ್ಷ್ ತಂಡದ ನಾಯಕರಾಗಿದ್ದರು.
“ಬಿ’ ವಿಭಾಗದಲ್ಲಿರುವ ಆಸ್ಟ್ರೇಲಿಯ ತನ್ನ ಮೊದಲ ಪಂದ್ಯವನ್ನು ಜ. 14ರಂದು ಭಾರತದ ವಿರುದ್ಧ ಆಡಲಿದೆ.
ಆಸ್ಟ್ರೇಲಿಯ ತಂಡ: ಜಾಸನ್ ಸಂಗ (ನಾಯಕ), ವಿಲ್ ಸದರ್‌ಲ್ಯಾಂಡ್, ಕ್ಸೇವಿಯರ್ ಬಾರ್ಟ್‌ಲೆಟ್, ಮ್ಯಾಕ್ಸ್ ಬ್ರಿಯಾಂಟ್, ಜಾಕ್ ಎಡ್ವರ್ಡ್ಸ್, ಜಾಕ್ ಇವಾನ್ಸ್, ಜರಾಡ್ ಫ್ರೀಮನ್, ರಿಯಾನ್ ಹ್ಯಾಡ್ಲಿ, ಬಾಕ್ಸ್‌ಟರ್ ಹೋಲ್ಟ್, ನಥನ್ ಮೆಕ್‌ಸ್ವೀನಿ, ಜೊನಾಥನ್ ಮೆರ್ಲೊ, ಜಾಸನ್ ರಾಲ್‌ಸ್ಟನ್, ಪರಮ್ ಉಪ್ಪಲ್, ಆ್ಯಸ್ಟಿನ್ ವೋ, ಲಾಯ್ಡ ಪೋಪ್.