Advertisement

ಮಿಥಾಲಿ ಪಡೆಗೆ ಸರಣಿ  ಸಮಬಲದ ಒತ್ತಡ

09:46 PM Sep 23, 2021 | Team Udayavani |

ಮಕಾಯ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ತೀರಾ ಹಿಂದುಳಿದಿರುವ ಭಾರತದ ವನಿತೆಯರು ಶುಕ್ರವಾರ ಆತಿಥೇಯ ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನಾಡಲಿದ್ದಾರೆ. ಈಗಾಗಲೇ ಮೊದಲ ಪಂದ್ಯವನ್ನು 9 ವಿಕೆಟ್‌ಗಳಿಂದ ಸೋತ ಮಿಥಾಲಿ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸರಣಿಯನ್ನು ಜೀವಂತವಾಗಿ ಇರಿಸಬೇಕಾದರೆ ಭಾರತ ಇಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ.

Advertisement

ಮಿಥಾಲಿ ಏಕಾಂಗಿ ಹೋರಾಟ: ಸ್ಮತಿ ಮಂಧನಾ-ಶಫಾಲಿ ವರ್ಮ ಉತ್ತಮ ಆರಂಭ ಒದಗಿಸುವಲ್ಲಿ ಪದೇ ಪದೇ ವಿಫ‌ಲವಾಗುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕಳೆದ ಇಂಗ್ಲೆಂಡ್‌ ಪ್ರವಾಸದಲ್ಲಿಯೂ ಈ ಜೋಡಿ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಎಡವಿತ್ತು. ಒನ್‌ಡೌನ್‌ನಲ್ಲಿಯೂ ಸೂಕ್ತ ಆಟಗಾರ್ತಿಯ ಕೊರತೆ ಎದ್ದು ಕಾಣುತ್ತಿದೆ. 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವ ನಾಯಕಿ ಮಿಥಾಲಿ ಏಕಾಂಗಿಯಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿಯೂ ಇವರ ಮೇಲೆ ಹೆಚ್ಚು ಭರವಸೆ ಇರಿಸಲಾಗಿದೆ.  ಒಂದೊಮ್ಮೆ “ಲೇಡಿ ಸೆಹವಾಗ್‌’ ಖ್ಯಾತಿಯ ಶಫಾಲಿ ವರ್ಮ ಸಿಡಿದು ನಿಂತರೆ ತಂಡದ ಬೃಹತ್‌ ಮೊತ್ತಕ್ಕೆ ಅಡ್ಡಿಯಿಲ್ಲ. ಈ ಪಂದ್ಯದಲ್ಲಿ ಅವರ ಬ್ಯಾಟ್‌ ಮಾತಾಡಲೇಬೇಕಿದೆ.

ಕೌರ್‌ ಅನುಮಾನ: ಹೆಬ್ಬೆರಳಿನ ಗಾಯದಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ. ಈ ಬಗ್ಗೆ ಬ್ಯಾಟಿಂಗ್‌ ಕೋಚ್‌ ಶಿವಸುಂದರ್‌ ದಾಸ್‌ ಮಾಹಿತಿ ನೀಡಿದ್ದು, ಕೌರ್‌ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಆಸೀಸ್‌ ನಿರಾಳ: ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಪಡೆದಿರುವ ಆಸೀಸ್‌ ನಿರಾಳವಾಗಿದೆ. ಹೇನ್ಸ್‌, ಹೀಲಿ, ಲ್ಯಾನಿಂಗ್‌, ಪೆರ್ರಿ ಮತ್ತು ಮೂನಿ ಸ್ಫೋಟಕ ಬ್ಯಾಟಿಂಗಿಗೆ ಹೆಸರುವಾಸಿ. ಇದರಲ್ಲಿ ಇಬ್ಬರು ಸಿಡಿದು ನಿಂತರೂ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next